Saree Pre Pleating: ಫಟಾಫಟ್ ಸೀರೆ ಉಡಲು ಪ್ರೀ ಪ್ಲೀಟಿಂಗ್; ಹವ್ಯಾಸವನ್ನೇ ಉದ್ಯಮವಾಗಿಸಿದವರಿವರು
ಹವ್ಯಾಸವನ್ನೇ ವೃತ್ತಿ ಮಾಡಿಕೊಂಡರೆ ಅದರಲ್ಲಿ ಸಿಗುವ ತೃಪ್ತಿಯೇ ಬೇರೆ. ಅದು ಕೋವಿಡ್ ಕಾಲಘಟ್ಟ. ದೇಶದಲ್ಲಿ ಹೇರಲಾದ ಲಾಕ್ ಡೌನ್ ಸಾಮಾನ್ಯ ವ್ಯಕ್ತಿಯ ಬದುಕಿನ ಮೇಲೆ ಪರಿಣಾಮ ಬೀರಿತ್ತು. ಆ ಹೊತ್ತಲ್ಲಿ ಮಹಿಳೆಯರು ತಮಗೆ ಗೊತ್ತಿರುವ ಕಲೆಗಳನ್ನು ಬಳಸಿಕೊಂಡು ಸಂಪಾದನೆಯ ಮಾರ್ಗವನ್ನು ಹುಡುಕಿಕೊಂಡರು.ಕಷ್ಟಕಾಲದಲ್ಲಿ ಕೈ ಹಿಡಿಯುವುದು ಕಲಿತ ವಿದ್ಯೆ ಮತ್ತು ನಮ್ಮ ಸಾಮರ್ಥ್ಯವೇ. ಈ ರೀತಿ ಪ್ಯಾಷನ್ನ್ನು ಫ್ರೊಫೆಷನ್ ಮಾಡಿಕೊಂಡಿರುವ ಮಹಿಳೆಯರ ಸಾಧನೆಯ ಗಾಥೆ ಇಲ್ಲಿದೆ.
ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿ ಸಿನಿಮಾದಲ್ಲಿ ಉಡಿಸುವೆ ಬೆಳಕಿನ ಸೀರೆಯಾ..ಚೂರು ನೀ ಸಹಕರಿಸು ಎಂಬ ಹಾಡು ಇದೆ. ಸೀರೆ ಅಂದ್ರೆ ಯಾವ ಹೆಣ್ಮಕ್ಕಳಿಗೆ ಇಷ್ಟ ಇಲ್ಲ ಹೇಳಿ? ಸೀರೆ ಇಷ್ಟ ಆದರೆ ಉಡುವುದು ಕಷ್ಟ. ಅದಕ್ಕಾಗಿಯೇ ರೆಡಿಮೇಡ್ ಸೀರೆಗಳು ಬಂದವು. ಒಂದು ನಿಮಿಷದಲ್ಲಿ ಉಡಬಹುದಾದ ಸೀರೆಗಳ ಜಗತ್ತೇ ಸೃಷ್ಟಿಯಾಯಿತು. ನೆರಿಗೆ ಹಿಡಿಯಲು ಕಷ್ಟ ಪಡಬೇಕಾಗಿಲ್ಲ, ಸೆರಗು ಹೊಂದಿಸಲು ಶ್ರಮ ಪಡಬೇಕಾಗಿಲ್ಲ, ಪ್ರತೀ ಮಹಿಳೆಗೆ ಒಪ್ಪುವಂಥಾ ಎಲ್ಲ ಸೀರೆಗಳು ವಿವಿಧ ಫ್ಯಾಷನ್ ಆಗಿ ಮಾರುಕಟ್ಟೆಗೆ ಬಂದಿವೆ. ಸೀರೆ ಯಾವತ್ತೂ ಔಟ್ ಆಫ್ ಫ್ಯಾಷನ್ ಆಗಲ್ಲ, ಹಾಗಾಗಿಯೇ ಸೀರೆಗೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ರೆಡಿಮೇಡ್ ಸೀರೆಗಳೇನೋ ಇದೆ, ಆದರೆ ಎಲ್ಲದಕ್ಕೂ ಇವನ್ನೇ ನೆಚ್ಚಿಕೊಳ್ಳುವಂತಿಲ್ಲ. ನಮ್ಮಿಷ್ಟದ ಸೀರೆಗಳನ್ನು ಉಡಬೇಕು ಅಂದ್ರೆ? ಉಡಲು ಕಷ್ಟ ಆಗುವವರಿಗಾಗಿ ಉಡಿಸಲು ಒಬ್ಬರು ಬೇಕೇ ಬೇಕು. ಅದೂ ಇಲ್ಲ ಅಂದರೆ? ಚಿಂತಿಸಬೇಕಾಗಿಲ್ಲ. ನಿಮ್ಮಿಷ್ಟದ ಸೀರೆಗಳನ್ನು ಫಟಾಫಟ್ ಆಗಿ ಉಡಲು ಸಹಕಾರಿಯಾಗುವಂತೆ ಪ್ರೀ ಪ್ಲೀಟೆಡ್ ಸೀರೆ ರೆಡಿಮಾಡಿಕೊಡುವವರು ಇದ್ದಾರೆ. ಹೆಣ್ಮಕ್ಕಳಿಗೆ ನೆರವಾಗುವ ಈ ಕೆಲಸ ಉದ್ಯಮ ಕೂಡಾ ಹೌದು. ಅದು ಹೇಗಂತೀರಾ? ಮುಂದೆ ಓದಿ ನೋಡಿ…
ಮದುವೆ, ಸೀಮಂತ ಅಥವಾ ಇನ್ಯಾವುದೇ ಹಬ್ಬಗಳಿರಲಿ ಎಲ್ಲದಕ್ಕೂ ಹೆಣ್ಮಕ್ಕಳು ಆಯ್ಕೆ ಮಾಡುವ ಉಡುಗೆ ಅಂದರೆ ಸೀರೆ. ಇಂಥಾ ಕಾರ್ಯಕ್ರಮಗಳಲ್ಲಿ ಅಂದವಾಗಿ ಸೀರೆ ಉಡಲು ಸಮಯ ಕೂಡಾ ಬೇಕು. ಬಹುತೇಕರಿಗೆ ಮನೆ ಕೆಲಸ ಎಲ್ಲವನ್ನೂ ಮಾಡಿ ಮುಗಿಸಿ ಸೀರೆಯನ್ನು ಅಂದವಾಗಿ ಉಡುವಷ್ಟು ಸಮಯವೂ ಸಾಕಾಗುವುದಿಲ್ಲ. ಅದಕ್ಕಾಗಿ ಒಂದು ದಿನ ಮುಂಚೆಯೇ ಸೀರೆಯ ಸೆರಗನ್ನು ಹೊಂದಿಸಿ, ಅದಕ್ಕೆ ಚಂದವಾಗಿ ಇಸ್ತ್ರಿ ಹಾಕಿ, ಪಿನ್ ಮಾಡಿಟ್ಟುಕೊಳ್ಳುತ್ತಾರೆ. ಹೀಗೆ ಸೀರೆಯನ್ನು ಮೊದಲೇ ರೆಡಿ ಮಾಡಿಟ್ಟರೆ ಸಮಯದ ಉಳಿತಾಯವೂ ಆಗುತ್ತದೆ. ಹೀಗೆ ಮಾಡಲು ಬರದಿದ್ದರೆ ಏನು ಮಾಡುವುದು? ಅದಕ್ಕೂ ಇದೆ ಪರಿಹಾರ. ಅದೇ ಪ್ರಿ ಪ್ಲೀಟೆಡ್ ಸೀರೆ. ಇಲ್ಲಿ ನಾವು ಉಡಬೇಕು ಎಂದು ಬಯಸುವ ಸೀರೆಯನ್ನು ಪ್ರೀ ಪ್ಲೀಟೆಡ್ ಮಾಡಿ, ಪ್ಯಾಕ್ ಮಾಡಿ ಕೊಡಲಾಗುತ್ತದೆ. ದೂರದೂರಿಗೆ ಪ್ರಯಾಣ ಮಾಡುತ್ತಿದ್ದರೆ ಹೀಗೆ ಪ್ಯಾಕ್ ಮಾಡಿದ ಸೀರೆಗಳನ್ನು ಕೊಂಡೊಯ್ಯುವುದು ಸುಲಭ. ಪ್ರಿ ಪ್ಲೀಟೆಡ್ ಆಗಿರುವ ಕಾರಣ ಉಡುವುದಕ್ಕೆ ಕಷ್ಟ ಪಡಬೇಕಾಗಿಲ್ಲ.
ಸಂಪಾದನೆಯ ಮೂಲ
ಕೆಲವು ಹೆಣ್ಮಕ್ಕಳಿಗೆ ಚಂದವಾಗಿ ಸೀರೆ ಉಡಿಸಲು ಬರುತ್ತದೆ. ಸಾಮಾನ್ಯವಾಗಿ ವಿವಾಹ ಸಮಾರಂಭಗಳಿಗೆ ಸೀರೆ ಉಡಿಸಲು ಮತ್ತು ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ನವರನ್ನೇ ಕರೆಯುತ್ತಾರೆ. ಆದರೆ ಮನೆಯಲ್ಲಿ ಚಿಕ್ಕ ಸಮಾರಂಭವಿದ್ದರೆ ಅದಕ್ಕಾಗಿ ಬ್ಯೂಟಿ ಪಾರ್ಲರ್ನವರನ್ನು ಕರೆಯುವ ಅಗತ್ಯವಿರುವುದಿಲ್ಲ. ಸೀರೆಯನ್ನು ಅಂದವಾಗಿ ಉಟ್ಟುಕೊಳ್ಳುವುದಷ್ಟೇ ಮುಖ್ಯ ಇಲ್ಲಿ. ಹೀಗಿರುವಾಗ ಸೀರೆ ಪ್ರೀ ಪ್ಲೀಟೆಡ್ ಮಾಡುವವರ ಅಗತ್ಯ ಬೀಳುತ್ತದೆ. ಹೀಗೆ ಸೀರೆ ಪ್ರೀ ಪ್ಲೀಟ್ ಮಾಡುವುದು ಸಂಪಾದನೆಯ ಮೂಲವೂ ಆಗಿದೆ. ಮನೆಯಲ್ಲೇ ಹೆಣ್ಮಕ್ಕಳು ಈ ಕೆಲಸವನ್ನು ಮಾಡಿ ಹಣ ಸಂಪಾದನೆ ಮಾಡಬಹುದು. ಗ್ರಾಹಕರು ತಂದುಕೊಟ್ಟ ಸೀರೆಯನ್ನು ಒಪ್ಪವಾಗಿ ಉಡುವಂತೆ ಪ್ರೀ ಪ್ಲೀಟ್ ಮಾಡಿ ಪ್ಯಾಕ್ ಮಾಡಿಕೊಡುವ ಕೆಲಸ ಇದು. ನಗರಗಳಲ್ಲಿ ಇದು ವ್ಯವಹಾರ. ಒಂದು ಸೀರೆ ಪ್ರೀ ಪ್ಲೀಟ್ ಮಾಡಿದರೆ ಕನಿಷ್ಠ 299 ರೂ ಚಾರ್ಜ್ ಮಾಡುತ್ತೇವೆ ಅಂತಾರೆ ಈ ಕೆಲಸದಲ್ಲಿ ತೊಡಗಿಸಿಕೊಂಡ ಮಹಿಳೆ ಮಾನಸಾ.
View this post on Instagram
ಮಾನಸಾ ಈ ಉದ್ಯಮ ಆರಂಭಿಸಿದ್ದು 2022ರಲ್ಲಿ. ಕಾಲೇಜು ವಿದ್ಯಾರ್ಥಿನಿಯಾಗಿರುವ ಮಾನಸಾ, ಪಾಕೆಟ್ ಮನಿಗಾಗಿ ಈ ಕೆಲಸ ಆರಂಭಿಸಿದ್ದರು. ಹೀಗೆ ಉದ್ಯಮವಾಗಿ ತೊಡಗಿಸಿಕೊಳ್ಳಲು ನಮ್ಮಮ್ಮನ ಸಹಕಾರ ಇದೆ ಎಂದು ಹೇಳುವ ಮಾನಸಾ ಅವರ ಮಾತು ಹೀಗಿದೆ.
2020 ಕೋವಿಡ್ ಕಾಲಘಟ್ಟ, ಲಾಕ್ ಡೌನ್ನಿಂದಾಗಿ ಹಲವಾರು ಜನರು ಕೆಲಸವಿಲ್ಲದೆ ಮನೆಯಲ್ಲೇ ಕೂರಬೇಕಾಯಿತು. ದಿನಕೂಲಿಗಾರರಿಗಂತೂ ಕಷ್ಟದ ಸಮಯ. ಈ ಹೊತ್ತಲ್ಲಿ ಮಹಿಳೆಯರು ಮನೆಯಲ್ಲೇ ಕುಳಿತು ಸಂಪಾದನೆ ಮಾಡುವ ದಾರಿಯನ್ನು ಹುಡುಕಿಕೊಂಡರು. ತಮಗೆ ಗೊತ್ತಿರುವ, ಕಲಿತು ಮರೆತಿದ್ದ ವಿದ್ಯೆಗಳನ್ನು ಅವರು ಮತ್ತೆ ನೆನಪಿಗೆ ತಂದುಕೊಂಡು ಉದ್ಯಮಕ್ಕೆ ಕೈ ಹಾಕಿದರು. ಹೊಲಿಗೆ, ಆಭರಣ, ಅಲಂಕಾರಿಕ ವಸ್ತುಗಳನ್ನು ಮಾಡಲು ಗೊತ್ತಿರುವ ಗೃಹಿಣಿಯರು ತಮ್ಮದೇ ಆದ ಸಂಪಾದನೆಯ ಹಾದಿ ಹುಡುಕಿಕೊಂಡಾಗ ಅವರೆಲ್ಲರಿಗೂ ಫೇಸ್ ಬುಕ್ ನಲ್ಲಿ ವೇದಿಕೆ ಒದಗಿಸಿದ್ದು ಧೃತಿ ಮಹಿಳಾ ಮಾರುಕಟ್ಟೆ. ಇದನ್ನು ಹುಟ್ಟುಹಾಕಿದ್ದು ಕನ್ನಡತಿ ಅಪರ್ಣಾ ರಾವ್.
ಸಣ್ಣ ಮಟ್ಟದ ವ್ಯಾಪಾರ ಮಾಡುವ ಕನಸು ಹೊಂದಿರುವ ಮಹಿಳೆಯರಿಗೆ ಆನ್‌ಲೈನ್‌ನಲ್ಲಿ ವೇದಿಕೆ ಧೃತಿ ಮಹಿಳಾ ಮಾರುಕಟ್ಟೆ ಹುಟ್ಟಿಕೊಂಡಿದ್ದು 2020 ಮೇ ತಿಂಗಳಲ್ಲಿ. ಇದೀಗ ಧೃತಿ ಮಹಿಳಾ ಮಾರುಕಟ್ಟೆಯಲ್ಲಿ 300 ಸದಸ್ಯರು ಇದ್ದಾರೆ.
ಧೃತಿಯಲ್ಲಿ ಏನೇನಿದೆ?
ಕರ್ನಾಟಕದಾದ್ಯಂತ ಹಳ್ಳಿ ಮತ್ತು ನಗರಗಳಲ್ಲಿ ಮಹಿಳೆಯರು ಧೃತಿ ಮಾರುಕಟ್ಟೆಯಲ್ಲಿ ಸಕ್ರಿಯರಾಗಿದ್ದಾರೆ . ಇಲ್ಲಿ ಬಟ್ಟೆ ಬರೆಯಿಂದ ಹಿಡಿದು ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥ, ಹ್ಯಾಂಡ್ ಮೇಡ್ ಆಭರಣ ಸೇರಿದಂತೆ ಆನ್ಲೈನ್ ಯೋಗ ತರಬೇತಿದಾರರೂ ಇದ್ದಾರೆ. ಗುಣಮಟ್ಟದ ವಸ್ತುಗಳಿಗೆ ಇಲ್ಲಿ ಆದ್ಯತೆ ಕೊಡಲಾಗುತ್ತಿದ್ದು, ಉತ್ಪನ್ನಗಳನ್ನು ಮನೆಯಿಂದಲೇ ಮಾರಾಟ ಮಾಡಬಹುದಾಗಿದೆ. ಮಹಿಳೆಯರು ತಮ್ಮ ಉದ್ಯಮ ಶುರು ಮಾಡಿದ್ದೇ ಧೃತಿ ಮಹಿಳಾ ಮಾರುಕಟ್ಟೆ. ಇಂದು ಅನೇಕ ಮಹಿಳೆಯರು ಯಶಸ್ವಿ ಉದ್ಯಮಿಯಾಗಿ ಗುಂಪಿನಾಚೆಯೂ ಗುರುತಿಸಲ್ಪಟ್ಟು ಸಾಕಷ್ಟು ಗ್ರಾಹಕರನ್ನು ಹೊಂದಿರುವುದು ಸಂತೋಷದ ವಿಷಯ. ಈ ಗುಂಪಿನ ಪ್ರತಿಯೊಬ್ಬರೂ ಆಹಾರ ಸಂಬಂಧಿ ಮಾರಾಟಗಾರರು ಎಫ್ಎಸ್ಎಸ್ಎಐ ಲೈಸೆನ್ಸ್ ಪಡೆದು, ಯಾವುದೇ ಕಲಬೆರಕೆ ಇಲ್ಲದ, ಕೆಮಿಕಲ್ ಬಳಸದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಕೈಮಗ್ಗದ ಬಟ್ಟೆಗಳು, ರೆಡಿಮೇಡ್ ಬಟ್ಟೆಗಳು, ಹೇರ್ ಆಯಿಲ್-ಶಾಂಪೂ, ಆಭರಣ, ಸೀರೆ, ಮರದ ಉಪಕರಣ, ಆಟಿಕೆ, ಗುಡಿ ಕೈಗಾರಿಕೆ ಸಂಬಂಧಿ ವಸ್ತುಗಳು, ಕಲೆ, ಆಯುರ್ವೇದ ಒಟ್ಟಾರೆ ಜೀವನಾವಶ್ಯಕವಾದ ಯಾವ ವಸ್ತುಗಳನ್ನು ಮಾರಾಟ ಮಾಡುವ ಮತ್ತು ಕೊಳ್ಳುವವರ ದೊಡ್ಡ ಬಳಗವೇ ಇಲ್ಲಿದೆ.
ಧೃತಿ ಹುಟ್ಟಿಕೊಂಡ ಬಗೆ
ಧೃತಿ ಮಹಿಳಾ ಮಾರುಕಟ್ಟೆ ಹುಟ್ಟು ಹಾಕುವ ಮುನ್ನ ಅಪರ್ಣಾ ಸೋಪ್ ತಯಾರಿಕೆಯಲ್ಲಿಯೂ ತೊಡಗಿಸಿಕೊಂಡವರು. ಅದೊಂದು ಫ್ಯಾಷನ್. ಹೊಸತೇನಾದರೂ ಕಲಿಯಬೇಕು ಎಂಬ ಹಂಬಲದಿಂದಲೇ ಅಪರ್ಣಾ ಅವರು ಸಾಬೂನು ತಯಾರಿಸುವುದು ಹೇಗೆ ಎಂದು ಕಲಿತುಕೊಂಡಿದ್ದು. ನ್ಯಾಚುರಲ್ ಸೋಪ್ ಗಳನ್ನು ತಯಾರಿಸುವ ಅಪರ್ಣಾ, ವಿವಿಧ ಡಿಸೈನ್ ಗಳ ಮೂಲಕ, ಅದರ ಪರಿಶುದ್ಧತೆ ಮೂಲಕ ಜನಮನಸ್ಸು ಗೆದ್ದಿದ್ದಾರೆ.
2018ರಲ್ಲಿ ಅಪರ್ಣಾ ಅವರ ಸೋಪ್ ಮೇಕಿಂಗ್ ಆರಂಭವಾಗಿದ್ದು. ಸಾಮಾನ್ಯವಾಗಿ ಸೋಪ್ ಓವಲ್ ಶೇಪ್, ರೌಂಡ್ ಅಥವಾ ಆಯತಾಕಾರದಲ್ಲಿರುತ್ತದೆ. ಆದರೆ ಡಿಸೈನ್ ಬಗ್ಗೆ ಅತೀವ ಆಸಕ್ತಿ ಇದ್ದ ಅಪರ್ಣಾ ಸೋಪುಗಳ ಆಕೃತಿಯನ್ನೇ ಬದಲಿಸಿ ಬಿಟ್ಟರು. ಮಕ್ಕಳಿಗಾಗಿ ಬಳಸುವ ಸೋಪ್ ನೋಡಿದರೆ ಮುದ್ದುಬರುವಂತಿತ್ತು. ಅಷ್ಟೇ ಅಲ್ಲ ಹೂಗಳಂತಿರುವ ಸೋಪ್, ಕೇಕ್ ನಂತಿರುವ ಸೋಪ್, ಆಟಿಕೆಯಂತೆ ಕಾಣುವ ಸೋಪ್ ಹೀಗೆ ಹಲವು ಡಿಸೈನ್ ಗಳಲ್ಲಿ ಅಪರ್ಣಾ ಸೋಪ್ ತಯಾರಿಸಿದರು. ಬರೀ ಡಿಸೈನ್ ಅಷ್ಟೇ ಅಲ್ಲ , ಉತ್ಕೃಷ್ಟ ಗುಣಮಟ್ಟದ ಸೋಪ್ ಗಳಾಗಿದ್ದವು ಅವು. ಯಾಕೆಂದರೆ ಆಹಾರ ತಯಾರಿಸಲು ಬಳಸುವ ಉನ್ನತ ಗುಣಮಟ್ಟದ ಎಣ್ಣೆಗಳಿಂದಲೇ ಈ ಸೋಪ್ ತಯಾರಾಗುತ್ತದೆ. ಚಂದದ ಡಿಸೈನ್ ನೊಂದಿಗೆ ನೈಸರ್ಗಿಕ ಸಾಬೂನುಗಳನ್ನು ತಯಾರಿಸಿದ ಅಪರ್ಣಾ ಅವರು ಯಾವುದೇ ಕಾರಣಕ್ಕೂ ಗುಣಮಟ್ಟದೊಂದಿಗೆ ರಾಜಿ ಮಾಡಲಿಲ್ಲ. ಸಾಬೂನು ಬೆಲೆ ಸ್ವಲ್ಪ ಜಾಸ್ತಿ ಎಂದು ಮೊದಲು ಹಿಂದೇಟು ಹಾಕಿದವರು ಆಮೇಲೆ ಗುಣಮಟ್ಟ ನೋಡಿ ಮತ್ತೆ ಮತ್ತೆ ಖರೀದಿಸುತ್ತಿರುವುದು ಅಪರ್ಣಾ ಅವರ ಸಾಮರ್ಥ್ಯ, ಆಸಕ್ತಿ ಮತ್ತು ಪರಿಶ್ರಮಕ್ಕೆ ಸಂದ ಬೆಲೆ. ಅಂದಹಾಗೆ ರಾಜ್ಯ ಹೊರರಾಜ್ಯಗಳು ಸೇರಿದಂತೆ ವಿದೇಶದಲ್ಲಿಯೂ ಗ್ರಾಹಕರನ್ನು ಹೊಂದಿದ್ದಾರೆ ಇವರು. ಸಾಬೂನು ತಯಾರಿಕೆ ಬಗ್ಗೆ ಲಭ್ಯವಿರುವ ಎಲ್ಲ ಮೂಲಗಳಿಂದ ಜ್ಞಾನ ಸಂಪಾದಿಸಿ ಗ್ರಾಹಕರಿಗೆ ಉತ್ತಮವಾದುದನ್ನೇ ಕೊಡಬೇಕು ಎಂದ ಛಲ ಅವರಿಗೆ ಫಲ ನೀಡುತ್ತಿದೆ. ತನ್ನಂತೆಯೇ ಮಹಿಳೆಯರು ತಮ್ಮ ಕಲೆ, ಸಾಮರ್ಥ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕು, ಹಿಂಜರಿಕೆ ಇರಬಾರದು. ಮೊದಲಿಗೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆದರೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದರೆ ಉದ್ಯಮವನ್ನು ಮುನ್ನಡೆಸಬಹುದು ಅಂತಾರೆ ಇವರು.
ಸ್ವಂತ ಉದ್ಯಮ ಮಾಡುವವರಿಗೆ ಸಾಕಷ್ಟು ಅವಕಾಶಗಳು ಇವೆ. ಸರ್ಕಾರದಿಂದ ಸಹಾಯವೂ ಸಿಗುತ್ತದೆ.ತಮ್ಮ ಉದ್ಯಮವನ್ನು ಮುಂದೆ ತೆಗೆದುಕೊಂಡು ಹೋಗುವ ಛಲ, ಆಸಕ್ತಿ ಮತ್ತು ವ್ಯಾಪಾರ ಮಾಡುವುದು ಹೇಗೆ ಎಂಬುದನ್ನು ಅರಿತುಕೊಂಡರೆ ಯಶಸ್ಸು ಸಾಧಿಸಬಹುದು ಎಂಬುದು ಅಪರ್ಣಾ ಅವರ ಮಾತು.
Published On - 12:42 pm, Sat, 4 May 24