ಕರ್ನಾಟಕದ ಕಾಂಗ್ರೆಸ್ನಲ್ಲಿ ಸೂಪರ್ ಸಿಎಂ, ಸ್ಯಾಡೋ ಸಿಎಂ, ವೈಟಿಂಗ್ ಸಿಎಂ ಇದ್ದಾರೆ: ಪ್ರಧಾನಿ ಮೋದಿ
ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ. ಕನ್ನಡದಲ್ಲಿ ಭಾಷಣ ಆರಂಭ ಮಾಡಿದ ಮೋದಿ ಅವರು, ಸಿಗಂದೂರು ಚೌಡೇಶ್ವರಿ ದೇವಿಯನ್ನು ಸ್ಮರಿಸಿದರು. ಬಳಿಕ ಕಾಂಗ್ರೆಸ್ ನೇತೃತ್ವದ ಐಎನ್ಡಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗ, ಮಾ.18: ದೆಹಲಿ ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದರು. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸೂಪರ್ ಸಿಎಂ, ಸ್ಯಾಡೋ ಸಿಎಂ, ವೈಟಿಂಗ್ ಸಿಎಂ ಇದ್ದಾರೆ ಎಂದು ಹೇಳುವ ಮೂಲಕ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಯತೀಂದ್ರ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗದ (Shivamogga) ಫ್ರೀಡಂಪಾರ್ಕ್ನ ಅಲ್ಲಮಪ್ರಭು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಗಂದೂರು ಚೌಡೇಶ್ವರಿ ದೇವಿಯನ್ನು ಸ್ಮರಿಸಿದರು. ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜನರನ್ನು ಲೂಟಿ ಮಾಡುವುದು, ತಮ್ಮ ಜೇಬು ಭರ್ತಿ ಮಾಡುವುದು ಕಾಂಗ್ರೆಸ್ ಗುರಿ. ಕಾಂಗ್ರೆಸ್ ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಂಡಿದೆ. ಇನ್ನು ಹೀಗೆ ಲೂಟಿ ಮಾಡಿದರೆ ಅವರಿಗೆ ಸರ್ಕಾರ ನಡೆಸಲು ಹಣ ಎಲ್ಲಿದೆ? ಇಲ್ಲಿ ಶ್ಯಾಡೋ ಸಿಎಂ, ಸೂಪರ್ ಸಿಎಂ, ವೈಟಿಂಗ್ ಸಿಎಂಗಳ ಮಧ್ಯೆ ದೆಹಲಿಯಲ್ಲಿ ಒಬ್ಬ ಕಲೆಕ್ಷನ್ ಮಂತ್ರಿ ಕೂಡಾ ಇದ್ದಾರೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧಿಸಿದ್ದ ಮೋದಿ ಯಡಿಯೂರಪ್ಪ ಪುತ್ರನಿಗೆ ಟಿಕೆಟ್ ನೀಡಿದ್ದಾರೆ -ಕೆಎಸ್ ಈಶ್ವರಪ್ಪ
ಮುಂಬೈನ ಶಿವಾಜಿಪಾರ್ಕ್ನಲ್ಲಿ ನಿನ್ನೆ ಕಾಂಗ್ರೆಸ್ ಸಭೆಯಲ್ಲಿ ಒಂದು ನಿರ್ಣಯ ಮಾಡಿದ್ದಾರೆ. ಹಿಂದೂ ಸಮಾಜದ ಶಕ್ತಿಯನ್ನು ತೊಡೆದು ಹಾಕುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಈ ನಿರ್ಣಯದಿಂದ ಬಾಳಾಸಾಹೇಬ್ ಠಾಕ್ರೆಯವರ ಆತ್ಮಕ್ಕೆ ಎಷ್ಟು ದುಃಖವಾಗಿರಲಕ್ಕಿಲ್ಲ? ಎಂದು ಕೇಳಿದ ಮೋದಿ, ನಮ್ಮ ಶಕ್ತಿಯನ್ನು ಹೆಚ್ಚಿಸುವ ಕೆಲಸ ನಾವು ಮಾಡಬೇಕಿದೆ ಎಂದರು.
ಇಂಡಿ ಮೈತ್ರಿಕೂಟದ ವಿರುದ್ಧ ಮೋದಿ ವಾಗ್ದಾಳಿ
INDIA ಒಕ್ಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಭ್ರಷ್ಟಾಚಾರದಲ್ಲಿ ಮುಳಗಿದ್ದವರು ಇಂದು ಅವರೆಲ್ಲರೂ ಒಂದಾಗಿದ್ದಾರೆ. ಜೂನ್ 4 ರಂದು ಎನ್ಡಿಎ ಮೈತ್ರಿಕೂಟ 400ರ ಗಡಿ ದಾಟಲಿದೆ. ವಿಕಸಿತ ಭಾರತಕ್ಕಾಗಿ, ವಿಕಸಿತ ಕರ್ನಾಟಕಕ್ಕಾಗಿ ಹಾಗೂ ಭ್ರಷ್ಟಾಚಾರಿಗಳ ವಿರುದ್ಧ ಹೋರಾಡಲು 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.
ಬಡವರ ಕಲ್ಯಾಣಕ್ಕಾಗಿ ಶ್ರೇಯೋಭಿವೃದ್ಧಿಗಾಗಿ ಬಿಜೆಪಿ ಶ್ರಮಿಸುತ್ತಿದೆ. ಕಾಂಗ್ರೆಸ್ನವರು ಇಡೀ ದಿನ ಸುಳ್ಳು ಹೇಳುವುದರಲ್ಲೇ ಮುಳುಗಿದ್ದಾರೆ. ತಮ್ಮ ಸುಳ್ಳುಗಳನ್ನು ಮರೆಮಾಚಲು ಕಾಂಗ್ರೆಸ್ನವರು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲೂ ಕಾಂಗ್ರೆಸ್ನವರು ಅದೇ ಸುಳ್ಳು ಮುಂದುವರಿಸಿದ್ದಾರೆ. ಕೇಂದ್ರ ಹಾಗೂ ಮೋದಿ ವಿರುದ್ಧ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದರು.
ಬ್ರಿಟಿಷ್ ಮನಸ್ಥಿತಿಯನ್ನು ಮುಂದುವರಿಸಿದ ಕಾಂಗ್ರೆಸ್
ಕಾಂಗ್ರೆಸ್ನವರು ಬ್ರಿಟಿಷರ ಮನಸ್ಥಿತಿಯನ್ನು ಮುಂದುವರಿಸುತ್ತಿದ್ದಾರೆ. ಮೊದಲು ದೇಶ ಇಬ್ಭಾಗ ಮಾಡಿದರು ಜಾತಿಗಳ ನಡುವೆ ಜಗಳ ಹೆಚ್ಚಿದರು. ಈಗ ಧರ್ಮ ಕ್ಷೇತ್ರಗಳ ವಿಚಾರದಲ್ಲೂ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅಂತಹ ಕಾಂಗ್ರೆಸ್ ಪಕ್ಷವನ್ನು ಹುಡುಕಿ ನಿರ್ಮೂಲನೆ ಮಾಡಬೇಕಿದೆ. ದೇಶದ ಸ್ವಾತಂತ್ರ್ಯ ನಂತರ ಕಾಂಗ್ರೆಸ್ನವರು ಕೇವಲ ಲೂಟಿ ಮಾಡಿದ್ದರು ಎಂದರು.
ಇದನ್ನೂ ಓದಿ: ನಮ್ಮ ಹೋರಾಟ ಕೇವಲ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತ: ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್
ದೇಶದ ಮಹಿಳೆಯರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದ ಮೋದಿ ಅವರು ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದರು. ಮಂತ್ರ ಕಣ, ತಾಯಿ ಕಣ, ದೇವಿ ಕಣ ಅಂತ ಕುವೆಂಪು ಹೇಳಿದ್ದರು. ಈ ಮೂಲಕ ಮಹಿಳೆಯರ ಶಕ್ತಿ ಮತ್ತು ಮಹತ್ವವನ್ನು ಕುವೆಂಪು ಸಾರಿದ್ದರು ಎಂದರು.
ಶಿವಮೊಗ್ಗದಲ್ಲಿ ಮುನ್ಸಿಪಾಲಿಟಿ ಸದಸ್ಯ ಕೂಡಾ ಇಲ್ಲದಿದ್ದಾಗ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ. ತಮ್ಮ ಇಡೀ ಯೌವ್ವನವನ್ನು ಪಕ್ಷಕ್ಕಾಗಿ ಧಾರೆ ಎಳೆದಿದ್ದಾರೆ ಎಂದು ಯಡಿಯೂರಪ್ಪ ಅವರನ್ನು ಹೊಗಳಿದ ಮೋದಿ, ಕರ್ನಾಟಕದಲ್ಲಿ ಈ ಬಾರಿ 28 ಸ್ಥಾನಗಳಲ್ಲಿ 28 ಸೀಟುಗಳನ್ನು ಬಿಜೆಪಿ-ಜೆಡಿಎಸ್ಗೆ ಕೊಡಲು ನಾನು ಪ್ರಾರ್ಥನೆ ಮಾಡುತ್ತೇನೆ. 400 ಕ್ಕೂ ಹೆಚ್ಚು ಸೀಟುಗಳಲ್ಲಿ ಕರ್ನಾಟಕದ ಮತದಾರರ ಪಾತ್ರ ದೊಡ್ಡದಿದೆ ಎಂದರು.
ಬೆಳಗ್ಗೆ ಸಂಜೆ ಸುಳ್ಳು ಹೇಳುವುದೇ ಕಾಂಗ್ರೆಸ್ ಅಜೆಂಡಾ
ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬಿಜೆಪಿಯ ಕೆಲಸ ಕಾಣುತ್ತಿದೆ. ಸುಳ್ಳು ಹೇಳು, ಬೆಳಗ್ಗೆ ಸಂಜೆ ಸುಳ್ಳು ಹೇಳು, ಪ್ರತಿ ದಿನ ಸುಳ್ಳು ಹೇಳು ಇದು ಕಾಂಗ್ರೆಸ್ ಅಜೆಂಡಾವಾಗಿದೆ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ನವರು ದೊಡ್ಡ ದೊಡ್ಡ ಸುಳ್ಳು ಹೇಳುವುದರಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ ಎಂದರು. ಅಲ್ಲದೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದರು, ಮೋದಿ ಮೇಲೂ ಆರೋಪ ಮಾಡಿದರು ಎಂದರು.
ಇದನ್ನೂ ಓದಿ: ಅಬ್ ಕೀ ಬಾರ್, 400 ಪಾರ್! ನಾವು ಸಾಧಿಸಿ ತೋರಿಸುತ್ತೇವೆ: ಚುನಾವಣೆ ದಿನಾಂಕ ಪ್ರಕಟ ಬೆನ್ನಲ್ಲೇ ಪ್ರಧಾನಿ ಮೋದಿ ಘೋಷಣೆ
ಬಿಜೆಪಿ ಬಡವರ ನಿರ್ಮೂಲನೆ ಮಾಡುತ್ತಿದೆ ಎಂದ ಮೋದಿ, ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ನೆರವಾಗಿದೆ. ಕರ್ನಾಟಕದಲ್ಲಿ 40 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಇಡೀ ವಿಶ್ವ ಇಂದು ಭಾರತದ ಮೂಲಸೌಕರ್ಯ ಬಗ್ಗೆ ಚರ್ಚೆ ನಡೆಸುತ್ತಿದೆ. ದೇಶದ ಪ್ರತಿ ಹಳ್ಳಿಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಅಭಿವೃದ್ಧಿಯ ಕಮಲ ಅರಳಲಿದೆ
ಶಿವಮೊಗ್ಗದಲ್ಲಿ ಸೇತುವೆ ನಿರ್ಮಾಣ, ರೈಲು ನಿಲ್ದಾಣ ಅಭಿವೃದ್ಧಿ ಮಾಡಿದ್ದೇವೆ. ಪ್ರತಿ ಮನೆಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸಿದ್ದೇವೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ, ಜೂನ್ 4ರಂದು ಕರ್ನಾಟಕದಲ್ಲಿ ಅಭಿವೃದ್ಧಿಯ ಕಮಲ ಅರಳಲಿದೆ ಎಂದರು.
ಅಭ್ಯರ್ಥಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಭಾಷಣದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಭಾಷಣ ಮುಕ್ತಾಯದ ನಂತರ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಡಾ. ಮಂಜುನಾಥ್ ಮತ್ತಿತರ ಅಭ್ಯರ್ಥಿಗಳನ್ನು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್ ಸೇರಿದಂತೆ ಮುಖಂಡರನ್ನು ಮಾತನಾಡಿಸಿ ವೇದಿಕೆಯಿಂದ ತೆರಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Mon, 18 March 24