ಕೋಲಾರ: ಕುಕ್ಕುಟೋದ್ಯಮಕ್ಕೆ ಕೊರೊನಾ ಮೂರನೇ ಅಲೆಯ ಭೀತಿ; ಕೋಳಿ ಫಾರಂ ಮಾಲೀಕರಲ್ಲಿ ಹೆಚ್ಚಿದ ಆತಂಕ

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಜಗದೀಶ್ ಪ್ರಕಾರ, ಕುಕ್ಕುಟೋದ್ಯಮ ಅಷ್ಟೇನು ನಷ್ಟ ಅನುಭವಿಸಿಲ್ಲ ಕಾರಣ ಕೊರೊನಾ ಹಿನ್ನೆಲೆಯಲ್ಲಿ ಪ್ರೋಟೀನ್​ಗಾಗಿ​ ಜನರು ಕೋಳಿ ಬಳಕೆ ಹೆಚ್ಚು ಮಾಡಿದ್ದರು, ಮುಂದೆಯೂ ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಲಹೆ ನೀಡಿದ್ದಾರೆ.

ಕೋಲಾರ: ಕುಕ್ಕುಟೋದ್ಯಮಕ್ಕೆ ಕೊರೊನಾ ಮೂರನೇ ಅಲೆಯ ಭೀತಿ; ಕೋಳಿ ಫಾರಂ ಮಾಲೀಕರಲ್ಲಿ ಹೆಚ್ಚಿದ ಆತಂಕ
ಕೋಳಿ ಫಾರಂ ಮಾಲೀಕರಲ್ಲಿ ಹೆಚ್ಚಿದ ಆತಂಕ

ಕೋಲಾರ​: ಕೊರೊನಾ ಲಾಕ್​ಡೌನ್​ನಿಂದ ಮೇಲಿಂದ ಮೇಲೆ ಸಾಕಷ್ಟು ನಷ್ಟದ ಸುಳಿಗೆ ಸಿಲುಕಿದ್ದ ಕುಕ್ಕುಟೋದ್ಯಮ ಚೆತರಿಕೆ ಕಾಣುತ್ತಿದೆ. ಈಗ ಮಾರುಕಟ್ಟೆಯಲ್ಲಿ ಕೋಳಿ ಬೆಲೆ ಕೆಜಿಗೆ 280 ರೂಪಾಯಿಯಿಂದ 300 ರೂಪಾಯಿಗೆ ತಲುಪಿದೆ. ಇದರಿಂದಾಗಿ ಕೋಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಕೋಳಿಗಳ ಆಹಾರದ ಬೆಲೆ ಗಗನಕ್ಕೇರಿದೆ. ಕೋಳಿಗಳಿಗೆ ಹಾಕುವ ಸೋಯಾಬೀನ್​ ಸೇರಿದಂತೆ ಇನ್ನಿತರ ಆಹಾರದ ಬೆಲೆ ಏರಿಕೆಯಾಗಿದೆ. ಹೀಗಿರುವಾಗಲೇ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕೊರೊನಾ ಮೂರನೇ ಅಲೆ ಬರುವ ಆತಂಕದಲ್ಲಿ ಕೋಳಿ ಫಾರಂ ಮಾಲೀಕರು ಜೀವನ ನಡೆಸುವಂತಾಗಿದೆ.

ಕೊರೊನಾ ಎರಡು ಅಲೆಗಳಿಂದ ತತ್ತರಿಸಿ ಹೋಗಿದ್ದ ಕುಕ್ಕುಟೋದ್ಯಮ ಈಗಷ್ಟೇ ಚೇತರಿಕೆ ಕಾಣುತ್ತಿತ್ತು, ಆದರೆ ಈಗ ಕೊರೊನಾ ಮೂರನೇ ಅಲೆ ಮತ್ತೆ ವಕ್ಕರಿಸುವ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಉತ್ಪಾದನೆಯೇ ಕಡಿಮೆಯಾಗಿದೆ. ದುಬಾರಿ ಬೆಲೆಯ ಕೋಳಿ ಫಾರಂ ನಿರ್ವಹಣೆಯ ನಡುವೆ ಮತ್ತೆ ಮೂರನೇ ಅಲೆ ಬಂದಿದ್ದೇ, ಆದಲ್ಲಿ ಪುನಃ ನಷ್ಟದ ಸುಳಿಗೆ ಸಿಲುಕುವ ಆತಂಕದಿಂದ ಉತ್ಪಾದನೆಯನ್ನೇ ಕಡಿಮೆ ಮಾಡಿದ್ದೇವೆ ಎಂದು ಕೋಳಿ ಫಾರಂ ಮಾಲೀಕ ರವಿಕುಮಾರ್ ತಿಳಿಸಿದ್ದಾರೆ.​

ಕೋಲಾರ ಜಿಲ್ಲೆಯೊಂದರಲ್ಲೇ 400 ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ. ಹೀಗಿದ್ದರೂ ಚಿಕನ್​ ಬೆಲೆ ಗಗನಕ್ಕೇರಲು ಪ್ರಮುಖ ಕಾರಣ ಕೋಳಿ ಫಾರಂಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ ಎನ್ನುವುದು. ಆದರೆ ಕೋಳಿ ಫಾರಂಗಳಿಗೆ ಕೋಳಿ ಮರಿಗಳ ಬೇಡಿಕೆಗೆ ತಕ್ಕಂತೆ ಸರಬರಾಜಾಗುತ್ತಿಲ್ಲದ ಕಾರಣ ಉತ್ಪಾದನೆ ಕಡಿಮೆಯಾಗಿ ಚಿಕನ್​ ಬೆಲೆ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಅದರ ಜತೆಗೆ ಕೊರೊನಾ ಮೂರನೇ ಅಲೆ ಬಂದಲ್ಲಿ ಮತ್ತೆ ಬೆಲೆಗಳು ಕಡಿಮೆಯಾಗುತ್ತವೆ ಎನ್ನುವ ಭಯದಲ್ಲಿ ಕೆಲವು ಕೋಳಿ ಫಾರಂ ಮಾಲೀಕರು ಕೋಳಿ ಉತ್ಪಾದನೆಯನ್ನು ಶೇ. 50 ರಷ್ಟು ಕಡಿಮೆ ಮಾಡಿದ್ದಾರೆ.

ಆದರೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಜಗದೀಶ್ ಪ್ರಕಾರ, ಕುಕ್ಕುಟೋದ್ಯಮ ಅಷ್ಟೇನು ನಷ್ಟ ಅನುಭವಿಸಿಲ್ಲ ಕಾರಣ ಕೊರೊನಾ ಹಿನ್ನೆಲೆಯಲ್ಲಿ ಪ್ರೋಟೀನ್​ಗಾಗಿ​ ಜನರು ಕೋಳಿ ಬಳಕೆ ಹೆಚ್ಚು ಮಾಡಿದ್ದರು, ಮುಂದೆಯೂ ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಲಹೆ ನೀಡಿದ್ದಾರೆ.

ಒಟ್ಟಾರೆ ಕೊರೊನಾ ಮೂರನೇ ಅಲೆ ಬರುವ ಮುನ್ನವೇ ಅದರ ಭಯವೇ ಮಾರುಕಟ್ಟೆಯಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದ್ದು, ಮೇಲಿಂದ ಮೇಲೆ ನಷ್ಟದ ಸುಳಿಗೆ ಸಿಲುಕಿರುವ ಕುಕ್ಕುಟೋದ್ಯಮ, ಮೂರಲೇ ಅಲೆಗೆ ಸಿಲುಕಿಕೊಂಡಿದ್ದೇ ಆದಲ್ಲಿ, ಬೆಲೆ ಏರಿಕೆ ಜತೆಗೆ ವ್ಯಾಪಾರದಲ್ಲಿ ನಷ್ಟ ಅನುಭವಿಸುವುದು ಮಾತ್ರ ನಿಜ ಎನ್ನುವುದು ಕುಕ್ಕುಟೋದ್ಯಮ ನಂಬಿ ಬದುಕುತ್ತಿರುವ ಜನರ ಮಾತು.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ:
ಹಕ್ಕಿಜ್ವರ ಭೀತಿ: ಧೋನಿ ಫಾರಂನಿಂದ ಬಂದಿದ್ದ 2,500 ಕಡಕ್‌ನಾಥ್ ಕೋಳಿಗಳ ಹತ್ಯೆ

ನಾಟಿ ಕೋಳಿ ಮೊಟ್ಟೆ ಮಾರಿ ಜೀವನ ಸಾಗಿಸುತ್ತಿರುವ ವೃದ್ಧೆ; ಯುವಕರನ್ನು ನಾಚಿಸುವಂತಿದೆ 90 ವರ್ಷದ ಅಜ್ಜಿಯ ಉತ್ಸಾಹ