“ನನ್ನ ಭವಿಷ್ಯವಾಣಿ ಯಾವತ್ತೂ ಸುಳ್ಳಾಗಲ್ಲ ನೋಡಿ”: ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಒತ್ತಿಹೇಳಿದ ಅವರು, “ನಮ್ಮ ಮಾತುಗಳಿಂದ ಯಾರಿಗೂ ಕೆಟ್ಟ ಹೆಸರು ಬರಬಾರದು ಎಂದು ನಾವು ಮೌನವಾಗಿದ್ದೆವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಲಭ್ಯವಿದೆ ಎಂದು ಹೇಳಿದ್ದಾರೆ.
ಕಲಬುರಗಿ, ನ.1: ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಕೇಳಿಬಂದಿರುವ ಕಾರಣ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಸಾಕ್ಷ್ಯಗಳಿದ್ದರೆ ಯಾರೇ ಆಗಲಿ, ಎಷ್ಟೇ ದೊಡ್ಡ ವ್ಯಕ್ತಿ ಇರಲಿ, ಕಾನೂನಿನ ಮುಂದೆ ಹಾಜರಾಗಿ ಉತ್ತರ ನೀಡಬೇಕು. ಈ ನಿಯಮ ಕುಮಾರಸ್ವಾಮಿ ಅವರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಈ ಹಿಂದಿನ ಮಾತುಕತೆಗಳಲ್ಲಿ ಕುಮಾರಸ್ವಾಮಿ ಅವರು ನನ್ನ ಕಡೆಯಿಂದ ಏನೂ ಆಗಿಲ್ಲ ಎಂದು ಹೇಳುತ್ತಿದ್ದರು. ಇದೆಲ್ಲಾ ಪ್ರಿಯಾಂಕ್ ಖರ್ಗೆ ಮಾಡಿಸುತ್ತಿದ್ದಾರೆ ಅಥವಾ ಇದೆಲ್ಲಾ ಬೇರೆಯವರು ಮಾಡಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು. ಆದರೆ, ತಮ್ಮ ಪಿಎಗಳು, ಸಹೋದ್ಯೋಗಿಗಳು ಅಥವಾ ಮೊಬೈಲ್ ಈ ಪ್ರಕರಣದಲ್ಲಿ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ನನ್ನ ಮನೆಗೆ ಬಂದು ಏನು ಸಾಕ್ಷಿಗಳಿದ್ಯಾ? ಪುರಾವೆಗಳು ನನ್ನ ಮನೆಯಲ್ಲಿ ಇದೆಯಾ? ಅವರಿಗೆ ಕೇಳಿ ಎಂದು ಖರ್ಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರ ಕಡೆಯವರು ಏಕೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ನಾನು ಈಗಲೇ ಭವಿಷ್ಯವಾಣಿ ಹೇಳುತ್ತೇನೆ ನೋಡಿ. ನನ್ನ ಭವಿಷ್ಯವಾಣಿ ಯಾವತ್ತೂ ಸುಳ್ಳಾಗುವುದಿಲ್ಲ. ಮತ್ತೆ ಅದೇ, ಪ್ರಿಯಾಂಕ್ ಕೆಲಸ ಇಲ್ಲ, ಪ್ರಿಯಾಂಕ್ ಅದು, ಪ್ರಿಯಾಂಕ್ ಇದು, ದಲಿತ, ಬಲಿತ ಇವೇ ಇದಕ್ಕೆ ಹೋಗ್ತಾರೆ. ಹೊರತು, ಈ ಮೂರು ಜನ, ನಾಲ್ಕು ಜನ ಬಗ್ಗೆ ಯಾಕೆ ಮಾತಾಡ್ತಾ ಇಲ್ಲ?. ಪ್ರಕರಣದಲ್ಲಿ ರಿತೇಶ್ ಶರ್ಮಾ, ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ಎಂಬವರ ಹೆಸರುಗಳು ಕೇಳಿಬಂದಿದೆ. ಈ ನಾಲ್ಕು ಜನ, ಅವರ ಮಂದಿ ಹೆಸರು ಬಂದಿದೆ ಅಲ್ವಾ? ಯಾಕೆ ಮಾತಾಡ್ತಾ ಇಲ್ಲ? ಯಾಕೆ ಆಂಟಿಸಿಪೇಟರಿ ಬೇಲ್ಗೆ ಓಡಾಡ್ತಾ ಇದ್ದಾರೆ? ಎಂದು ಪ್ರಶ್ನಿಸಿದರು.
ಸಂವಿಧಾನ ಮತ್ತು ಕಾನೂನಿಗೆ ನಿಜವಾದ ಗೌರವವಿದ್ದರೆ, ಆರೋಪಿತರು ಬಂದು ಸ್ಟೇಟ್ಮೆಂಟ್ ನೀಡಲಿ, ಅವರ ಪಾತ್ರವಿಲ್ಲ ಎಂದು ಹೇಳಲಿ ಎಂದು ಖರ್ಗೆ ಸವಾಲು ಹಾಕಿದರು. ಅವರು ಏಕೆ ತಲೆಮರೆಸಿಕೊಂಡಿದ್ದಾರೆ. ರಿತೇಶ್ ಶರ್ಮಾ, ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ನಡುವಿನ ಸಂಬಂಧದ ಬಗ್ಗೆಯೂ ಸ್ಪಷ್ಟನೆ ಕೇಳಿದರು. ತನಿಖೆಯ ಗೌಪ್ಯತೆಯನ್ನು ಕಾಪಾಡಲು ನಾನು ಮೌನವಾಗಿದ್ದೆ. ನನ್ನ ಮರ್ಯಾದೆ ಹೋದರೂ ಪರವಾಗಿಲ್ಲ, ಸಿದ್ದರಾಮಯ್ಯ ಸಾಹೇಬರ ಮರ್ಯಾದೆಗೆ ಏನಾಗಬಾರದು, ಪಕ್ಷದ ಮರ್ಯಾದೆಗೆ ಏನಾಗಬಾರದು, ಮುಖ್ಯಮಂತ್ರಿಗಳ ಮರ್ಯಾದೆಗೆ ಏನಾಗಬಾರದು, ನಮ್ಮ ಮಾತುಗಳಿಂದ ಅಂತ ಸುಮ್ಮನೆ ಇದ್ದೆವು, ಎಂದು ಅವರು ಹೇಳಿದರು. ಈಗ ಅಖಂಡನೀಯ ಸಾಕ್ಷ್ಯಗಳು ಲಭ್ಯವಿವೆ. ಅವರು ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ನಾನು ಹೇಳಿದ್ನಲ್ಲ, ಪಿಕ್ಚರ್ ಅಭೀ ಬಾಕಿ ಹೈ. ಸ್ವಲ್ಪ ಕಾಯಿರಿ. ಇಂಟರ್ವಲ್ ತನಕ ಬಂದಿಲ್ಲ ನಾವಿನ್ನೂ, ಎಂದು ಹೇಳುವ ಮೂಲಕ ಪ್ರಕರಣದಲ್ಲಿ ಇನ್ನಷ್ಟು ಬೆಳವಣಿಗೆಗಳು ಆಗುವ ಸುಳಿವು ನೀಡಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಅಡಿ

