ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ: ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ ವಿರುದ್ಧ ಬಿಜೆಪಿ ದೂರು
ಬರ ಪರಿಹಾರ ವಿಚಾರವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿರುವುದು ಬಿಜೆಪಿಯನ್ನು ಕೆರಳಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಬೆಂಗಳೂರು, ಏಪ್ರಿಲ್ 23: ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ (BJP) ದೂರು ನೀಡಿದೆ. ಚುನಾವಣಾ ಪ್ರಚಾರಕ್ಕೆ ನಿರ್ಬಂಧ ವಿಧಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ವಿರುದ್ಧವೂ ಬಿಜೆಪಿ ದೂರು ನೀಡಿದ್ದು, ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದೆ.
‘ಬರ ಪರಿಹಾರದ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಹಾಗೂ ಭಾರತೀಯ ಜನತಾ ಪಾರ್ಟಿಯ ವಿರುದ್ಧ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿಗಳಾದ ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ಆವರಣದದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ ಎಂದು ಭಾವಿಸುತ್ತೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಸದರಿ ಬರ ಪರಿಹಾರದ ವಿಚಾರವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿರುತ್ತದೆ. ಹಾಗಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಅನಧಿಕೃತವಾಗಿ ಪ್ರತಿಭಟಿಸಿ ಮತದಾರರ ಮನಸ್ಸಿನಲ್ಲಿ ಪಕ್ಷದ ವಿರುದ್ಧ ವಿರೋಧಿ ಭಾವನೆ ಉಂಟುಮಾಡಿ ಚುನಾವಣೆಯಲ್ಲಿ ಆಕ್ರಮ ಲಾಭ ಪಡೆಯುವ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ’ ಎಂದು ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಆವರಣದಲ್ಲಿ ಇಂತಹ ಅನಧಿಕೃತ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಂತಹ ಹಾಗೂ ಕಾಂಗ್ರೆಸ್ ಸರ್ಕಾರದ ಆಣತಿಯಂತೆ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ರಜನೀಶ್ ಗೋಯಲ್ ಅವರನ್ನು ಈಗಲೇ ಜಾರಿಗೆ ಬರುವಂತೆ ಬರುವಂತೆ ಅಮಾನತು ಮಾಡಿ ತನಿಖೆಗೆ ಆದೇಶ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದೂ ಬಿಜೆಪಿ ಉಲ್ಲೇಖಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಘನೆ: ಅಶೋಕ್ ಕಿಡಿ
ವಿಧಾನಸೌಧದ ಆವರಣದಲ್ಲಿ ‘ಕೈ’ ನಾಯಕರ ಪ್ರತಿಭಟನೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದಿದ್ದಾರೆ. ಶಾಸಕರಷ್ಟೇ ಅಲ್ಲ, ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕೆ ದೂರು ನೀಡಿದ್ದೇವೆ. ವಿಧಾನಸೌಧ ಆದರೆ ಎಲ್ಲವೂ ಸಿಗುತ್ತದೆ ಅಂತಾ ಪ್ರತಿಭಟನೆ ಮಾಡಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಮಾಡಿದ್ದರೆ ರೈತರ ಕಷ್ಟ ಗೊತ್ತಾಗ್ತಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚೊಂಬನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯಿಂದ ಪಿಕ್ಪಾಕೆಟ್ ಜಾಹೀರಾತು: ಡಿಕೆ ಶಿವಕುಮಾರ್ ತಿರುಗೇಟು
ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲು ಸಿದ್ಧ ಎಂದು ಹೇಳಿದೆ. ಆದರೂ ವಿಧಾನಸೌಧದಲ್ಲಿ ಬಾಯಿ ಬಡಿದುಕೊಳ್ಳುವ ಕೆಲಸ ಮಾಡಿದ್ದಾರೆ. ಕ್ರಮ ಕೈಗೊಳ್ಳುವ ಭರವಸೆಯನ್ನು ಚುನಾವಣಾಧಿಕಾರಿ ನೀಡಿದ್ದಾರೆ ಎಂದು ಅಶೋಕ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ