ಎಹೆಚ್‌ಒ, ಎಡಿಹೆಚ್ ಪರೀಕ್ಷೆ ದಿನಾಂಕ ಮುಂದೂಡಿಕೆಗೆ ಆರ್‌. ಅಶೋಕ್ ಆಗ್ರಹ: ಕಾರಣ ಇಲ್ಲಿದೆ

ಸೆಪ್ಟೆಂಬರ್ 26 ಮತ್ತು 27, 2026ರಂದು ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಆದರೆ ಅಂದೇ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ KEA ಆಡಳಿತ ಮಂಡಳಿ ಸೂಕ್ತವಾದ ಹೊಸ ದಿನಾಂಕಕ್ಕೆ ಪರೀಕ್ಷೆ ಮರುನಿಗದಿಪಡಿಸಬೇಕು ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ ಆಗ್ರಹಿಸಿದ್ದಾರೆ.

ಎಹೆಚ್‌ಒ, ಎಡಿಹೆಚ್ ಪರೀಕ್ಷೆ ದಿನಾಂಕ ಮುಂದೂಡಿಕೆಗೆ ಆರ್‌. ಅಶೋಕ್ ಆಗ್ರಹ: ಕಾರಣ ಇಲ್ಲಿದೆ
ಆರ್​​. ಅಶೋಕ್ ಆಗ್ರಹ
Image Credit source: R Ashoka Facebook Page

Updated on: Sep 08, 2026 | 6:06 PM

ಬೆಂಗಳೂರು, ಸೆಪ್ಟೆಂಬರ್​​ 08: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಯೋಜಿಸಿರುವ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ (ADH) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡುವಂತೆ ವಿಪಕ್ಷ ನಾಯಕ ಆರ್​​. ಅಶೋಕ್​​ ಆಗ್ರಹಿಸಿದ್ದಾರೆ. ಸುಮಾರು 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತೋಟಗಾರಿಕೆ ಇಲಾಖೆಯ ಈ ನೇಮಕಾತಿ ಪರೀಕ್ಷೆಗಳು ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿವೆ. ಆದರೆ, ಇದೇ ದಿನಾಂಕಗಳಲ್ಲಿ SSC ಹಾಗೂ SBI Clerk ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಭ್ಯರ್ಥಿಗಳು ತನಗೆ ಮನವಿ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿ’

ಬಹಳಷ್ಟು ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಳು ಒಂದೇ ದಿನಾಂಕಕ್ಕೆ ಬಂದಿರುವುದರಿಂದ ಅನಿವಾರ್ಯವಾಗಿ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ, ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ಘರ್ಷಣೆಯಾಗದಂತೆ ಸೂಕ್ತವಾದ ಹೊಸ ದಿನಾಂಕಕ್ಕೆ ಮರುನಿಗದಿಪಡಿಸುವುದು ನ್ಯಾಯಯುತ ಕ್ರಮವಾಗಿದೆ. ಆದ್ದರಿಂದ, ರಾಜ್ಯ ಸರ್ಕಾರ ಹಾಗೂ KEA ಆಡಳಿತ ಮಂಡಳಿಯು ತಕ್ಷಣ ಮಧ್ಯಪ್ರವೇಶಿಸಿ, ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಬೇಕೆಂದು ಆಗ್ರಹಿಸುತ್ತೇನೆ. ವರ್ಷಗಳ ಕಾಲ ಕಾದು, ಹಗಲಿರುಳು ಸಿದ್ಧತೆ ನಡೆಸಿರುವ ನಮ್ಮ ಯುವಜನತೆಗೆ ಒಂದು ಅವಕಾಶವನ್ನೂ ಅನ್ಯಾಯವಾಗಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅಶೋಕ್​​ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:04 pm, Tue, 8 September 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us