ಇನ್ಸ್ಟಾಗ್ರಾಮ್ನಲ್ಲಿ ರಾಯಚೂರು-ಚಾಮರಾಜನಗರ ನಂಟು: ಯುವತಿ ಕೊರಳಿಗೆ 3 ಗಂಟು, ಪತಿ ಅರೆಸ್ಟ್
ಇನ್ಸ್ಟಾಗ್ರಾಮ್ನಲ್ಲಿ ರಾಯಚೂರು ಯುವಕ ಹಾಗೂ ಚಾಮರಾಜನಗರದ ಯುವತಿ ನಂಟು ಬೆಳೆದಿದ್ದು, ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಮದುವೆಯಾದ 11 ತಿಂಗಳಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ತುಂಬು ಗರ್ಭಿಣಿಯಾಗಿದ್ದ ಮಹಿಳೆ ಇನ್ನೇನು ಇನ್ನೊಂದು ಜೀವಕ್ಕೆ ಜನ್ಮ ನೀಡುವ ವೇಳೆಯಲ್ಲೇ ದುರಂತ ಸಾವು ಕಂಡಿದ್ದು, ಇನ್ಸ್ಟಾಗ್ರಾಮ್ ಮೂಲಕ ನಂಟು ಬೆಳೆಸಿ ಮೂರು ಮೂರು ಗಂಟು ಹಾಕಿದ್ದ ಪತಿ ಅರೆಸ್ಟ್ ಆಗಿದ್ದಾನೆ.

ರಾಯಚೂರು, (ಏಪ್ರಿಲ್ 25): ನಾನೊಂದು ತೀರ ನೀನೊಂದು ತೀರ ಎನ್ನುವಂತೆ ಯುವಕ ಒಂದು ದಿಕ್ಕಿನ ಜಿಲ್ಲೆಯವನಾಗಿದ್ದರೆ, ಯುವತಿ ಮತ್ತೊಂದು ದಿಕ್ಕಿನವಳು. ಆದ್ರೆ, ಇಬ್ಬರ ನಡುವೆ ಇನ್ಸ್ಟಾಗ್ರಾಮ್ (Instagram) ನಂಟು ಬೆಳೆಸಿತ್ತು. ಇದಾಗ ಸ್ವಲ್ಪ ದಿನಗಳಲ್ಲೇ ಯುವತಿ ಕೊರಳಿಗೆ ಮೂರು ಗಂಟು ಸಹ ಬಿದ್ದಿತ್ತು. ಆದ್ರೆ, ಮದುವೆಯಾಗಿ (love marriage) ಆಕೆ ತುಂಬು ಗರ್ಭಿಣಿಯಾಗಿರುವ (pregnant) ಸಂದರ್ಭದಲ್ಲೇ ಅನುಮಾಸ್ಪದ ಸಾವನ್ನಪ್ಪಿದ್ದಾಳೆ. ರಾಯಚೂರು (Raichur) ಜಿಲ್ಲೆಯ ಯುವಕನ್ನು ಪ್ರೀತಿಸಿ ಮದ್ವೆಯಾಗಿದ್ದ ಚಾಮರಾಜನಗರದ (Chamarajanagar) ಅನುಪಮ ಎನ್ನುವ 9 ತಿಂಗಳ ತುಂಬು ಗರ್ಭಿಣಿ ಮಹಿಳೆ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಂಧನೂರು ತಾಲೂಕಿನ ಬೂದಿಹಾಳದ ಗಂಡನ ಮನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಈ ಸಂಬಂಧ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಚಾಮರಾಜನಗರ ಮೂಲದ ಅನುಪಮಾ (20) ಮೃತ ಗರ್ಭಿಣಿ. ಅನುಪಮಾ ಹಾಗೂ ರಾಯಚೂರಿನ ಬೂದಿಹಾಳದ ನಾಗರಾಜ್ ಇನ್ಸ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಬಳಿಕ 11 ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ, ಅದೇನಾಯೋ ಏನು ಅನುಪಮ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಲಾಗಿದೆ. ಆದ್ರೆ, ಜಾತಿ ಹಾಗೂ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಅನುಪಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ತೋಟದ ಮನೆಯಲ್ಲಿ ಯುವ ವಕೀಲೆ ಜೊತೆಗೆ ಯುವಕನ ಶವ ಪತ್ತೆ, ಸಾವಿನ ಸುತ್ತ ಅನುಮಾನಗಳ ಹುತ್ತ
ನಾಗರಾಜ್ ಮನೆಯವರು ಜಾತಿ ಬೇರೆ, ವರದಕ್ಷಿಣೆ ತಂದಿಲ್ಲವೆಂದು ಕಿರುಕುಳ ನೀಡುತ್ತಿದ್ದರು. ಗಂಡನ ಮನೆಯವರ ಕಿರುಕುಳ, ಹಿಂಸೆಯಿಂದಲೇ ತಮ್ಮ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಅನುಪಮಾ ತಂದೆ ಆರೋಪಿಸಿದ್ದು, ಅನುಪಮಾ ಪತಿ ನಾಗರಾಜ್ ಸೇರಿ 6 ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪತಿ ನಾಗರಾಜ್‌ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಒಟ್ಟಿನಲ್ಲಿ ಒಂದು ತುದಿಯ ಜಿಲ್ಲೆಯಿಂದ ಮತ್ತೊಂದು ತುದಿಯ ಜಿಲ್ಲೆಯ ಯುವಕನ ಪ್ರೇಮದ ಬಲೆಗೆ ಬಿದ್ದು ಇದೀಗ ದುರಂತ ಸಾವು ಕಂಡಿದ್ದು ವಿಪರ್ಯಾಸ.
ಸಮಾಜ ಎಷ್ಟೇ ಆಧುನೀಕರಣ ಹೊಂದಿದರೂ ಪ್ರೇಮ ವಿವಾಹದಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ. ಒಂದಲ್ಲ ಒಂದು ಅಡ್ಡಿ ಅಡಚಡಣೆಗಳು ಬರುತ್ತವೆ. ಅವುಗಳನ್ನು ಮೆಟ್ಟಿ ನಿಂತರೆ ಮಾತ್ರ ಸಂಸಾರ ಸುಖಿಯಾಗಿರಲು ಸಾಧ್ಯ. ಒಂದು ವೇಳೆ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಸಂಸಾರದ ಏರುಪೇರು ಉಂಟಾದರೆ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ.
ಪ್ರೀತಿಸಿ ಮದುವೆಯಾದ ಮೇಲೆ ಈ ಜಾತಿ ಸಂಬಂಧಗಳು ಅಡ್ಡಿ ಬಂದು ಅದೆಷ್ಟೋ ಸಂಸಾರಗಳು ಹೊಡೆದು ಹೋದ ಉದಾಹರಣೆಗಳು ಇವೆ. ಹಾಗೇ ಕೆಲವೊಂದು ಪ್ರೇಮ ವಿವಾಹ ಹೀಗೆ ಸಾವಿನಲ್ಲೂ ಅಂತ್ಯವಾಗಿವೆ. ಇನ್ನು ಕೆಲ ಪ್ರೇಮ ವಿವಾಹ ಅಮರವಾಗಿ ಉಳಿದಿವೆ.
ಹೇಳುವುದು ಇಷ್ಟೇ ಪ್ರೀತಿಸಿ ಮದುವೆ ಆಗಿ ಸುಖವಾಗಿ ಇರಿ. ಆದ್ರೆ, ಜೋಶ್ನಲ್ಲಿ ಮದುವೆಯಾದ ಬಳಿಕ ಜಾತಿ ಬೇರೆ, ನಮ್ಮ ನಿಮ್ಮ ಕಟುಂಬಕ್ಕೆ ಒಗ್ಗುವುದಿಲ್ಲ. ಅದಾಯ್ತು ಇದಾಯ್ತು ಎಂದು ಕಿತ್ತಾಡುವುದು ಬೇಡ. ಹೀಗಾಗಿ ಮದ್ವೆಗೂ ಮುನ್ನ ಯುವಕ-ಯುವತಿ ಒಂದು ಕ್ಷಣ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಇಬ್ಬರಿಗೂ ಒಳಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Fri, 25 April 25