
ರಾಯಚೂರು, ಜೂನ್ 28: ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಬಳಿ ಇಂದು ಭೀಕರ ದುರಂತವೊಂದು ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿದ್ದ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಡದ ಮೆಟ್ಟಿಲು ಹಾಗೂ ಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು (death), ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಾಗರಾಜ್ ಕ್ಯಾದಿಗೇರಾ(26) ಮತ್ತು ರವಿಕುಮಾರ್(27) ಮೃತ ದುರ್ದೈವಿಗಳು. ಇನ್ನು ಉಮೇಶ್ ಹಾಗೂ ಅಭಿಷೇಕ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಸೂರ್ಯಾಸ್ತ ತೋರಿಸುವ ಭರದಲ್ಲಿ ಎಡವಟ್ಟು: ಬೆಟ್ಟದಿಂದ 50 ಅಡಿ ಪ್ರಪಾತಕ್ಕೆ ಬಿದ್ದ ಉಪನ್ಯಾಸಕ!
ಈ ಕಮರ್ಷಿಯಲ್ ಕಾಂಪ್ಲೆಕ್ಸ್ ಬಸ್ ನಿಲ್ದಾಣದ ಬಳಿಯಿದೆ. ಪ್ರತಿನಿತ್ಯದಂತೆ ಇಂದು ಕೂಡ ವಿವಿಧ ಮಳಿಗೆಗಳಲ್ಲಿ ವ್ಯಾಪಾರ-ವಹಿವಾಟು ಎಂದಿನಂತೆ ಜರುಗುತ್ತಿತ್ತು. ಆದರೆ, ದುರದೃಷ್ಟವಶಾತ್ ಕಟ್ಟಡದ ಮೆಟ್ಟಿಲುಗಳು ಹಾಗೂ ಅದರ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಈ ಭೀಕರ ಅವಘಡ ಸಂಭವಿಸಿದಾಗ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಯುವಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಪರಿಣಾಮ, ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ತಕ್ಷಣ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮಕ್ಕಳ ಯೂನಿಫಾರ್ಮ್, ಪಠ್ಯಪುಸ್ತಕ ಬೆಂಕಿಗಾಹುತಿ
ಇನ್ನು ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ಮೃತರ ಕುಟುಂಬಕ್ಕೆ ಸಾಂತ್ವ ಹೇಳಿದರು. ಬಳಿಕ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿದರು.
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕಿನ ಮದುರೆ ಕ್ರಾಸ್ ಬಳಿ ನಡೆದಿದೆ. ಅಯ್ಯಪ್ಪ(32) ಮೃತ ಸವಾರ. ಸರ್ಕಾರಿ ಬಸ್ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸದ್ಯ ಬಸ್ ಚಾಲಕ ರಾಜಕುಮಾರನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:44 pm, Sun, 28 June 26