ರಾಯಚೂರು ಶಾಖೋತ್ಪನ್ನ ಘಟಕಕ್ಕೆ ಬೀಗ ಜಡಿಯುತ್ತಾ ಕೇಂದ್ರ ಸರ್ಕಾರ?
ರಾಯಚೂರು: ವಿದ್ಯುತ್ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಿಟ್ಟಿದ್ದ ಕರ್ನಾಟಕ ವಿದ್ಯುತ್ ನಿಗಮಕ್ಕೆ ಸದ್ಯ ಕೇಂದ್ರ ಬಜೆಟ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಆ ಒಂದು ನಿರ್ಧಾರ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಅತ್ತ ವಿದ್ಯುತ್ ಘಟಕಕ್ಕೆ ಬೀಗ ಬೀಳುವ ಮುನ್ಸೂಚನೆ ಇದ್ದರೆ, ಇತ್ತ ಸ್ಥಳೀಯರಲ್ಲಿ ಸಂಭ್ರಮ ಮನೆಮಾಡಿದೆ. ಕರುನಾಡಿನ ವಿದ್ಯುತ್ ದಾಹ ನೀಗಿಸ್ತಿರೋದ್ರಲ್ಲಿ ರಾಯಚೂರು ಶಾಖೋತ್ಪನ್ನ ಘಟಕದ ಕೊಡುಗೆ ಮಹತ್ವದ್ದು. ಕಳೆದ ಕೆಲ ದಶಕಗಳಿಂದ್ಲೂ ವಿದ್ಯುತ್ ಅಗತ್ಯತೆ ಪೂರೈಕೆಗೆ ಕರ್ನಾಟಕ ವಿದ್ಯುತ್ ನಿಗಮ ರಾಯಚೂರು ಶಾಖೋತ್ಪನ್ನ ಘಟಕವನ್ನೇ […]
ರಾಯಚೂರು: ವಿದ್ಯುತ್ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಿಟ್ಟಿದ್ದ ಕರ್ನಾಟಕ ವಿದ್ಯುತ್ ನಿಗಮಕ್ಕೆ ಸದ್ಯ ಕೇಂದ್ರ ಬಜೆಟ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಆ ಒಂದು ನಿರ್ಧಾರ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಅತ್ತ ವಿದ್ಯುತ್ ಘಟಕಕ್ಕೆ ಬೀಗ ಬೀಳುವ ಮುನ್ಸೂಚನೆ ಇದ್ದರೆ, ಇತ್ತ ಸ್ಥಳೀಯರಲ್ಲಿ ಸಂಭ್ರಮ ಮನೆಮಾಡಿದೆ.
ಕರುನಾಡಿನ ವಿದ್ಯುತ್ ದಾಹ ನೀಗಿಸ್ತಿರೋದ್ರಲ್ಲಿ ರಾಯಚೂರು ಶಾಖೋತ್ಪನ್ನ ಘಟಕದ ಕೊಡುಗೆ ಮಹತ್ವದ್ದು. ಕಳೆದ ಕೆಲ ದಶಕಗಳಿಂದ್ಲೂ ವಿದ್ಯುತ್ ಅಗತ್ಯತೆ ಪೂರೈಕೆಗೆ ಕರ್ನಾಟಕ ವಿದ್ಯುತ್ ನಿಗಮ ರಾಯಚೂರು ಶಾಖೋತ್ಪನ್ನ ಘಟಕವನ್ನೇ ಅವಲಂಬಿಸಿದೆ. ಆದ್ರೆ 2020-21ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಅದೊಂದು ನಿರ್ಧಾರ, ಶಾಖೋತ್ಪನ್ನ ಘಟಕಕ್ಕೆ ಬೀಗ ಜಡಿಯುವ ಮುನ್ಸೂಚನೆ ನೀಡಿದೆ.
ನಿಗದಿಗಿಂತ ಹೆಚ್ಚು ಕಾರ್ಬನ್ ಹೊರಸೂಸುತ್ತಿದೆಯಾ ಶಾಖೋತ್ಪನ್ನ ಘಟಕ? ಅಂದಹಾಗೆ ನಿಗದಿಗಿಂತಲೂ ಹೆಚ್ಚು ಪ್ರಮಾಣದ ಹೊಗೆ ಉಗುಳುವ ಥರ್ಮಲ್ ಘಟಕಗಳ ಸ್ಥಗಿತಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಣೆಯನ್ನೂ ಹೊರಡಿಸಿದ್ದಾರೆ. ಇದರ ಭಾಗವಾಗಿ ರಾಯಚೂರು ಶಾಖೋತ್ಪನ್ನ ಘಟಕಕ್ಕೂ ಬೀಗ ಜಡಿಯುವ ಸಾಧ್ಯತೆ ಹೆಚ್ಚಾಗಿದೆ.
ಹಿಂದಿನ ಪರಿಶೀಲನೆಯಲ್ಲೂ ರಾಯಚೂರು ಶಾಖೋತ್ಪನ್ನ ಘಟಕದಿಂದ ನಿಗದಿಗಿಂತಲೂ 123 ಎಂಜಿಯಷ್ಟು ಅಧಿಕ ಪ್ರಮಾಣದ ಕಾರ್ಬನ್ ವಾತಾವರಣ ಸೇರುತ್ತಿರುವುದು ಪತ್ತೆಯಾಗಿತ್ತು. 2018ನೇ ಸಾಲಿನಲ್ಲಿ ಸಿಎಜಿ ಸಲ್ಲಿಸಿದ್ದ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಹೀಗಾಗಿ, ಘಟಕಕ್ಕೆ ಬೀಗ ಜಡಿಯುವ ಸಾಧ್ಯತೆ ಇದೆ. ಆದರೆ ಈ ಸುದ್ದಿ ಸ್ಥಳೀಯರಿಗೆ ಸಖತ್ ಖುಷಿ ನೀಡಿದ್ದು, ಮಾಲಿನ್ಯದಿಂದ ಕಂಗಾಲಾಗಿದ್ದವರಲ್ಲಿ ಹೊಸ ಆಸೆ ಚಿಗುರೊಡೆದಿದೆ.
ಇನ್ನು ಮಾಲಿನ್ಯ ತಡೆಗೆ ಎಫ್ಜಿಡಿ ತಂತ್ರಜ್ಞಾನ ಅಳವಡಿಕೆಗೆ ಈ ಹಿಂದಿನಿಂದ್ಲೂ ರಾಯಚೂರು ಶಾಖೋತ್ಪನ್ನ ಘಟಕದ ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಒಟ್ನಲ್ಲಿ ಕೇಂದ್ರದ ನಿರ್ಧಾರದಿಂದ ಆರ್ಟಿಪಿಎಸ್ ಅಧಿಕಾರಿಗಳು ಶಾಕ್ಗೆ ಒಳಗಾಗಿರೋದು ಗ್ಯಾರಂಟಿ. ಆದ್ರೆ ರಾಯಚೂರು ಶಾಖೋತ್ಪನ್ನ ಘಟಕಕ್ಕೆ ಈ ನಿರ್ಧಾರದಿಂದ ಪೆಟ್ಟು ಬೀಳುತ್ತಾ, ಇಲ್ಲ ಘಟಕ ತನ್ನ ಕಾರ್ಯಚಟುವಟಿಕೆ ಮುಂದುವರಿಸಿಕೊಂಡು ಹೋಗುತ್ತಾ ನೋಡಬೇಕಿದೆ.
Published On - 8:22 am, Sun, 2 February 20