ರಾಯಚೂರು: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆ; ಸಂತೆ, ಸಾಗಾಣಿಕೆಗೆ ಜಿಲ್ಲಾಡಿತದಿಂದ ನಿಷೇಧ
ರೋಗಪೀಡಿತ ಜಾನುವಾರುಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜಾನುವಾರು ಸಂತೆ, ಜಾನುವಾರು ಸಾಗಾಣಿಕೆಗೆ ನಿಷೇಧಿಸಲಾಗಿದೆ.
ರಾಯಚೂರು: ಜಿಲ್ಲೆಯ ಜಾನುವಾರುಗಳಲ್ಲಿ ದಿನದಿಂದ ದಿನಕ್ಕೆ ಚರ್ಮಗಂಟು ರೋಗದ ಪಿಡುಗು (Lumpy Skin Disease) ಹೆಚ್ಚಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಈವರೆಗೆ 10ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಚರ್ಮಗಂಟು ರೋಗವು ಪತ್ತೆಯಾಗಿದ್ದು, ರಾಯಚೂರು ತಾಲೂಕಿನ ಸುಮಾರು 10 ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಕೆಲ ಗ್ರಾಮಗಳಲ್ಲಿ ರೋಗಪೀಡಿತ ಜಾನುವಾರುಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜಾನುವಾರು ಸಂತೆ, ಜಾನುವಾರು ಸಾಗಾಣಿಕೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಆದೇಶ ಹೊರಡಿಸಿದ್ದಾರೆ. ಚರ್ಮಗಂಟು ರೋಗವು ರೈತರಲ್ಲಿ ಆತಂಕ ಮೂಡಿಸಿದೆ.
ಚರ್ಮಗಂಟು ರೋಗಕ್ಕೆ ‘ಕ್ಯಾಪ್ರಿಫಾಕ್ಸ್’ ಹೆಸರಿನ ವೈರಾಣು ಮುಖ್ಯ ಕಾರಣ. ಈ ವೈರಾಣುವಿನ ಜೀವಂತ ಲಸಿಕೆಯನ್ನೇ ಪ್ರತಿರೋಧಕ ಔಷಧವಾಗಿ ನೀಡಲಾಗುತ್ತಿದೆ. ಒಂದು ವೇಳೆ ಈಗಾಗಲೇ ಜಾನುವಾರು ರೋಗದಿಂದ ಬಳಲುತ್ತಿದ್ದರೆ ಲಸಿಕೆ ನೀಡಿ ಪ್ರಯೋಜನವಾಗುವುದಿಲ್ಲ. ಅಂಥ ಜಾನುವಾರುಗಳಿಗೆ ಔಷಧ-ಆರೈಕೆ ಸಿಗಬೇಕು. ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಲಸಿಕೆ ಪಡೆದ ಜಾನುವಾರುಗಳ ದೇಹದಲ್ಲಿ ನಿರೋಧಕ ಶಕ್ತಿ ಬೆಳವಣಿಗೆಯಾಗಲು ಕನಿಷ್ಠ 21 ದಿನಗಳಾದರೂ ಬೇಕು ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೂಲಗಳು ಹೇಳಿವೆ.
ಯಾದಗಿರಿ: ರೋಗ ಹರಡುವ ಆತಂಕ
ಯಾದಗಿರಿ ಜಿಲ್ಲೆಯಲ್ಲಿಯೂ ಜಾನುವಾರಗಳಿಗೆ ಚರ್ಮಗಂಟು ರೋಗ ಹರಡುವ ಆತಂಕ ಕಂಡುಬಂದಿದೆ. ಜಿಲ್ಲಾಡಳಿತದ ನಿಷೇಧವಿದ್ದರೂ ಯಾದಗಿರಿಯ ಎಪಿಎಂಸಿ ಯಾರ್ಡ್ನಲ್ಲಿ ಜಾನುವಾರು ಸಂತೆ ಭರ್ಜರಿಯಾಗಿ ನಡೆಯಿತು. ಪಕ್ಕದ ಕಲಬುರ್ಗಿ ಹಾಗೂ ತೆಲಂಗಾಣದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡು ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 31ರವರೆಗೆ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿತ್ತು. ಆದರೆ ಈಗ ನಿಷೇಧದ ನಡುವೆಯೂ ಸಂತೆ ನಡೆದಿದೆ.
ಹೇಗೆ ಹರಡುತ್ತದೆ?
ರೋಗಪೀಡಿತ ಜಾನುವಾರುಗಳ ಬಾಯಿ, ಮೂಗಿನಿಂದ ಸುರಿಯುವ ಲೋಳೆಯಂತಹ ದ್ರವ ಬಿದ್ದ ಕಡೆ ಆರೋಗ್ಯವಂತ ರಾಸುಗಳು ಆಹಾರ ಸೇವಿಸಿದರೆ ರೋಗ ಹರಡುತ್ತದೆ. ಜಾನುವಾರುಗಳು ಕುಡಿಯುವ ನೀರಿನಲ್ಲಿ ರೋಗ ಬಂದ ಹಸುವಿನ ಜೊಲ್ಲು, ಇತರ ದ್ರವ ಸೇರಿದ್ದರೂ ರೋಗ ಹರಡುತ್ತದೆ. ರೋಗಪೀಡಿತ ಆಕಳಿನ ಸಂಪರ್ಕದ ಕೀಟ, ನೋಣ, ಸೊಳ್ಳೆ ಇತರ ಜಾನುವಾರುಗಳಿಗೆ ಕಡಿದಾಗಲೂ ರೋಗ ಹರಡುತ್ತದೆ.
ರೋಗ ಲಕ್ಷಣಗಳು
ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ವಾರಗಟ್ಟಲೆ ಜ್ವರ ಇರುವುದರೊಂದಿಗೆ ಹಾಲು ನೀಡುವ ಪ್ರಮಾಣವೂ ಕಡಿಮೆಯಾಗುತ್ತದೆ. ಈ ರೋಗವು ಮನುಷ್ಯರಿಗೆ, ಕುರಿ, ಮೇಕೆಗಳಿಗೆ ಹರಡುವುದಿಲ್ಲ. ಆದರೆ ಹಸು-ದತ್ತುಗಳಿಗೆ ಮಾತ್ರ ಜೀವಕಂಟಕವಾಗಬಲ್ಲದು.
ವಿಧಾನಸಭೆಯಲ್ಲಿ ಪ್ರಸ್ತಾಪ; ಮುಖ್ಯಮಂತ್ರಿಯಿಂದ ಪರಿಹಾರದ ಭರವಸೆ
ಕರ್ನಾಟಕದಲ್ಲಿ ಚರ್ಮಗಂಟು ರೋಗ ಹರಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕಳೆದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ದೇಶದಲ್ಲಿ ಲಕ್ಷಾಂತರ ಜಾನುವಾರುಗಳು ಮೃತಪಟ್ಟಿವೆ. ಮೂರು ವರ್ಷಗಳ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಹೋದರೆ, ಗೋಡೆ ಕುಸಿದು ಸತ್ತರೆ ಮಾತ್ರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ ಪರಿಹಾರ ಕೊಡುತ್ತಾರೆ. ಆದರೆ ರೋಗದಿಂದ ಮೃತಪಟ್ಟರೆ ಪರಿಹಾರ ಕೊಡುತ್ತಿಲ್ಲ. ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುವ ಜಾನುವಾರುಗಳಿಗೂ ಪರಿಹಾರ ಕೊಟ್ಟು ರೈತರನ್ನು ಕಾಪಾಡಬೇಕು. ಜೋಡೆತ್ತು ಒಂದೂವರೆ ಲಕ್ಷ ಬೆಲೆ ಬಾಳುತ್ತೆ. ಎಮ್ಮೆ-ಆಕಳುಗಳು 50 ಸಾವಿರಕ್ಕೂ ಹೆಚ್ಚು ಬೆಲೆ ಬಾಳುತ್ತವೆ. ರಾಸುಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡು ಕಷ್ಟ ಅನುಭವಿಸುವ ರೈತರಿಗೆ ಪರಿಹಾರ ಒದಗಿಸಬೇಕು’ ಎಂದು ಅವರು ವಿನಂತಿಸಿದ್ದರು.
ಶಾಸಕರ ವಿನಂತಿಗೆ ಉತ್ತರಿಸಿದ್ದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದೇನೆ. ಲಸಿಕೆ ಅಭಿಯಾನ ನಡೆಸುತ್ತೇವೆ. ಎನ್ಡಿಆರ್ಎಫ್ ಮಾರ್ಗದರ್ಶಿ ಸೂತ್ರಗಳ ಬಗ್ಗೆಯೂ ಚರ್ಚೆ ನಡೆಸುತ್ತೇವೆ. ಸೂಕ್ತ ಪರಿಹಾರ ಒದಗಿಸಲು ಗಮನ ಕೊಡುತ್ತೇವೆ ಎಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ‘ಕಾಯಿಲೆಯ ಬಗ್ಗೆ ಸಮಸ್ಯೆಯ ವಿವರ ತರಿಸಿಕೊಂಡು ಪರಿಶೀಲಿಸುತ್ತೇನೆ. ರೋಗಪೀಡಿತ ರಾಸುಗಳಿಗೆ ಚಿಕಿತ್ಸೆ ಮತ್ತು ಮೃತ ರಾಸುಗಳಿಗೆ ತಕ್ಕಷ್ಟು ಪರಿಹಾರ ಒದಗಿಸಲು ಕ್ರಮ ಜರುಗಿಸುತ್ತೇನೆ’ ಎಂದು ಭರವಸೆ ನೀಡಿದ್ದರು.
Published On - 11:14 am, Tue, 4 October 22