
ರಾಯಚೂರು, ಏಪ್ರಿಲ್ 17: ಯಾದಗಿರಿಯಲ್ಲಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (accident) ಸದ್ಯ ಸಾವನ್ನಪ್ಪಿದವರ (death) ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣ ನಾಯಕ್ (52) ಹಾಗೂ ಅವರ ಕುಟುಂಬದ 7 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಕೃಷ್ಣಾ ನಾಯಕ್ ಅಣ್ಣ ವೆಂಕೋಬಾ ಮಗಳಾದ ಶಶಿಕಲಾ ಹಾಗೂ ಆಕೆಯ ಮಗ ಇದೀಗ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.
ಈ ಭೀಕರ ಅಪಘಾತದಲ್ಲಿ ಸಿರವಾರದ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣಾ ನಾಯಕ್, ಅವರ ಪತ್ನಿ ಅನಂತಕಲಾ (45), ಪುತ್ರಿ ನಿಸರ್ಗ (30), ಅಳಿಯ ಶರಣಪ್ಪ (36), ಮೊಮ್ಮಕ್ಕಳಾದ ಸಿದ್ಧಾರ್ಥ (3) ಮತ್ತು ಅದ್ವಿಕಾ (5) ಹಾಗೂ ಶ್ರೀನಿಧಿ (1.6 ವರ್ಷ) ಮೃತಪಟ್ಟಿದ್ದಾರೆ. ಇವರ ಜೊತೆಗೆ ಕೃಷ್ಣಾ ನಾಯಕ್ ಅವರ ಅಣ್ಣ ವೆಂಕೋಬಾ ಅವರ ಮಗಳು ಶಶಿಕಲಾ (30) ಮತ್ತು ಆಕೆಯ ಪುತ್ರ ಚಂದನ್ (3) ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಸಿರವಾರ ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣ ನಾಯಕ್ (52) ಮತ್ತು ಅವರ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಯಾದಗಿರಿಯ ಮಾರ್ಗಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕೃಷ್ಣ ನಾಯಕ್ ಸೇರಿದಂತೆ ಅವರ ಕುಟುಂಬದ ಒಟ್ಟು ಎಂಟು ಸದಸ್ಯರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: 6 ಮಂದಿ ಸಜೀವ ದಹನ: ಅಪಘಾತ ಅದೆಷ್ಟು ಭಯಾನಕವಾಗಿದೆ ನೋಡಿ
ದುರಂತವೆಂದರೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಶ್ರೀನಿಧಿ, ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿಯಿಂದ ಕಲಬುರ್ಗಿಗೆ ಕರೆದೊಯ್ಯುವ ಮಾರ್ಗಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಸದ್ಯ ಶಶಿಕಲಾ ಅವರ ಹಿರಿಯ ಮಗ 5 ವರ್ಷದ ವಿರಾಟ್ ಅಪಘಾತದಲ್ಲಿ ಗಾಯಗೊಂಡಿದ್ದು, ಸದ್ಯ ಕಲಬುರ್ಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ಕೃಷ್ಣಾ ನಾಯಕ್ ಸಂಬಂಧಿಕರು ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಘಟನೆಗೂ ಎರಡು ನಿಮಿಷ ಮುನ್ನ ಬಸವರಾಜ್ ಎನ್ನುವ ಸಂಬಂಧಿ ಜೊತೆ ಕೃಷ್ಣಾ ನಾಯಕ್ ಫೋನ್ನಲ್ಲಿ ಮಾತನಾಡಿದ್ದಾರೆ. ಬಸವರಾಜ್-ಗೀತಾ ದಂಪತಿ ಮನೆಯಲ್ಲಿ ಸಮಾರಂಭದ ಕುರಿತು ಮಾತುಕತೆ ಮಾಡಿದ್ದು, ಕಾರ್ಯಕ್ರಮಕ್ಕೆ ಬರುತ್ತೇನೆ, ಬಂದ ಮೇಲೆ ಮಾತನಾಡುತ್ತೇವೆ ಎಂದಿದ್ದಾರೆ. ಹೀಗೆ ಫೋನ್ ಇಟ್ಟ ಎರಡೇ ನಿಮಿಷಕ್ಕೆ ಅಪಘಾತವಾಗಿರುವ ವಿಚಾರ ಗೊತ್ತಾಗಿದೆ ಎಂದು ಕೃಷ್ಣಾರ ಸಂಬಂಧಿ ಗೀತಾ ಅಳಲು ತೋಡಿಕೊಂಡರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.