AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆ ಆರಂಭವಾಗಿ ತಿಂಗಳು ಕಳೆದರೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗದ ಪಠ್ಯಪುಸ್ತಕ: ಸರ್ಕಾರದ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಶಾಲೆ ಆರಂಭವಾಗಿ ತಿಂಗಳು ಕಳೆದರೂ ಗಡಿ ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆಯಾಗಿಲ್ಲ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿ ಭಾಗದ ಹಲವು ಶಾಲೆಗಳ ಶಿಕ್ಷಕರು ಒಂದು ಪುಸ್ತಕವನ್ನು 7–8 ವಿದ್ಯಾರ್ಥಿಗಳು ಹಂಚಿಕೊಂಡು ಓದುವಂತೆ ವ್ಯವಸ್ಥೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಆಟವಾಡುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಶಾಲೆ ಆರಂಭವಾಗಿ ತಿಂಗಳು ಕಳೆದರೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗದ ಪಠ್ಯಪುಸ್ತಕ: ಸರ್ಕಾರದ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ
ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗದ ಪಠ್ಯಪುಸ್ತಕ
ಪ್ರಸನ್ನ ಹೆಗಡೆ
|

Updated on:Jul 14, 2026 | 5:53 PM

Share

ರಾಯಚೂರು, ಜುಲೈ 14: ಶಾಲೆಗಳು ಆರಂಭವಾಗಿ ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಕರ್ನಾಟಕ–ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಗಡಿ ಭಾಗಗಳಲ್ಲಿರುವ 10 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಎಲ್ಲಾ ವಿಷಯಗಳ ಕನ್ನಡ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಒಟ್ಟು 16 ಪ್ರಾಥಮಿಕ ಹಾಗೂ 17 ಪ್ರೌಢಶಾಲೆಗಳಿಗೆ ಇನ್ನೂ ಪಠ್ಯಪುಸ್ತಕಗಳು ತಲುಪಬೇಕಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಸ್ತಕ ಹಂಚಿಕೊಂಡು ಓದುತ್ತಿರುವ ವಿದ್ಯಾರ್ಥಿಗಳು

ಗಡಿ ಭಾಗದ ಹಲವು ಶಾಲೆಗಳ ಶಿಕ್ಷಕರು ಒಂದು ಪುಸ್ತಕವನ್ನು 7–8 ವಿದ್ಯಾರ್ಥಿಗಳು ಹಂಚಿಕೊಂಡು ಓದುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ. ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಯುತ್ತಿದೆ. ಮೇ ತಿಂಗಳಲ್ಲೇ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರೂ ಇನ್ನೂ ಪುಸ್ತಕಗಳು ಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ; ಕಾರಣವೇನು?

ಹೋರಾಟಗಾರರ ಕಿಡಿ

ಕೃಷ್ಣ ಮಂಡಲ, ಮಗನೂರು, ಕುನ್ಸಗಿ, ಹಿಂದುಪುರ, ಗುಲ್ಯಂ, ಹೊಳಗುಂದ, ಹಸನಾಳ, ಬಡಿನೆಹಾಳ, ಕುಂಟನಾಳ, ಸುಳೇಕೆರೆ, ಬಾಪುರ, ದೊಡ್ಡಹರಿವಾಣ, ನಡಿಚಾಗಿ, ರೌದೂರು, ಆದೋನಿ, ಕೌತಾಳಂ, ಹಳಹರವಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಶತಮಾನಕ್ಕೂ ಹೆಚ್ಚು ಕಾಲದಿಂದ ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಬಿಟ್ಟು ತೆಲುಗು ಹಾಗೂ ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಬಸವರಾಜ ಕಲಸಾ ಹೇಳಿದ್ದಾರೆ. ಒಂದೊಮ್ಮೆ ಕರ್ನಾಟಕದ ಶಾಲೆಗಳಲ್ಲಿ ಓದಲು ಮಕ್ಕಳನ್ನು ಕಳುಹಿಸಿದರೂ, ಅವರು ಕರ್ನಾಟಕದ ನಿವಾಸಿಗಳಲ್ಲ ಎಂಬ ಕಾರಣ ನೀಡಿ ವಸತಿ ನಿಲಯಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಯಚೂರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಜಿ., ಪಠ್ಯಪುಸ್ತಕಗಳ ಬೇಡಿಕೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಂತ ಹಂತವಾಗಿ ಪುಸ್ತಕಗಳು ಬರುತ್ತಿದ್ದು, ನೆರೆಯ ರಾಜ್ಯಗಳಲ್ಲಿರುವ ಕನ್ನಡ ಶಾಲೆಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:51 pm, Tue, 14 July 26

Follow Us