ಉಕ್ಕಿ ಹರಿಯುತ್ತಿರುವ ಭೀಮಾ ನದಿಯಲ್ಲಿ ಮುಳುಗಿದ ಸೇತುವೆಗಳು, ಸಂಚಾರ ಅಸ್ತವ್ಯಸ್ತ: ಕರ್ನಾಟಕದಲ್ಲಿ ಮುಂದುವರಿದ ಮಳೆ
ಮಹಾರಾಷ್ಟ್ರದ ವೀರ, ಉಜನಿ ಜಲಾಶಯಗಳಿಂದ ಭೀಮಾನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ನೀರಿನಲ್ಲಿ ಗಾಣಗಾಪುರ ಹಾಗೂ ಘತ್ತರಗಿ ಸೇತುವೆಗಳು ಜಲಾವೃತಗೊಂಡಿವೆ.

ಬೆಂಗಳೂರು / ಕಲಬುರ್ಗಿ: ಮಹಾರಾಷ್ಟ್ರದ ಘಟ್ಟ ಪ್ರದೇಶದ ಮತ್ತು ಕರ್ನಾಟಕದ ವಿವಿಧೆಡೆ ಮಳೆ ಮುಂದುವರಿದಿದ್ದು ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಹಲವು ಕೆರೆಗಳು ಮತ್ತೆ ಕೋಡಿ ಹರಿಯುತ್ತಿದ್ದು, ರಸ್ತೆಗಳ ಮೇಲೆ ನೀರು ಬಂದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಸತತ ಮಳೆಯಿಂದ ಜನಜೀವನ ಹೈರಾಣಾಗಿದೆ. ಮಹಾರಾಷ್ಟ್ರದ ವೀರ, ಉಜನಿ ಜಲಾಶಯಗಳಿಂದ ಭೀಮಾನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ನೀರಿನಲ್ಲಿ ಗಾಣಗಾಪುರ ಹಾಗೂ ಘತ್ತರಗಿ ಸೇತುವೆಗಳು ಜಲಾವೃತಗೊಂಡಿವೆ. ಅಫಜಲಪುರ ಹಾಗೂ ವಿಜಯಪುರ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ನದಿ ಪ್ರವಾಹದಿಂದ ಅಫಜಲಪುರ ತಾಲ್ಲೂಕು ಮಣ್ಣೂರಿನ ಯಲ್ಲಮ್ಮ ದೇಗುಲ ಜಲಾವೃತಗೊಂಡಿದೆ. ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗಿದೆ.
ಜಗಳೂರು: ಮನೆಗಳಿಗೆ ನುಗ್ಗಿದ ನೀರು
ದಾವಣಗೆರೆ: ಜಗಳೂರು ಪಟ್ಟಣದ ರಾಜಕಾಲುವೆಯ ನೀರು ವರ್ತುಲ ರಸ್ತೆಯಲ್ಲಿರುವ 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಜಗಳೂರು ಕೆರೆ, ಮಾಚಿಕೆರೆ ಕೆರೆ ಸೇರಿದಂತೆ ಹಲವಾರು ಕೆರೆಗಳ ನೀರು ರಾಜಕಾಲುವೆಗೆ ಹರಿದು ಬರುತ್ತಿದೆ. ಬೆಳಿಗ್ಗೆಯಿಂದ ಒಂದಾದ ಮೇಲೆ ಒಂದರಂತೆ ಮನೆಗಳಿಗೆ ಮನೆಗಳಿಗೆ ನೀರು ನುಗ್ಗುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ. ನೀರು ಸರಾಗಬಾಗಿ ಹರಿದುಹೋಗುವಂತೆ ಗಮನ ಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಬೈಕ್ ಸಹಿತ ಕೊಚ್ಚಿ ಹೋಗುತ್ತಿದ್ದವನ ರಕ್ಷಣೆ
ತುಮಕೂರು: ಉತ್ತಮ ಮಳೆಯಾಗುತ್ತಿರುವುದರಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ತಿಮ್ಮಲಾಪುರದ ಕೆರೆ ಕೋಡಿ ಹರಿಯುತ್ತಿದೆ. ಸೊರಗೊಂಡನಹಳ್ಳಿ ರಸ್ತೆಯಲ್ಲಿ ಕೋಡಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದ ನವೀನ್ ಎಂಬಾತನನ್ನು ಸಾರ್ವಜನಿಕರು ಟ್ರ್ಯಾಕ್ಟರ್ ಬಳಸಿ ರಕ್ಷಿಸಿದ್ದಾರೆ. ಕೆರೆ ದಂಡೆಯ ಮೇಲೆ ಹೋಗುತ್ತಿದ್ದಾಗ ನವೀನ್ ಅವರ ಬೈಕ್ನ ಸೈಲೆನ್ಸರ್ಗೆ ನೀರು ನುಗ್ಗಿ ಎಂಜಿನ್ ಆಫ್ ಆಗಿತ್ತು. ತಕ್ಷಣ ಅಲ್ಲಿದ್ದವರು ಟ್ರ್ಯಾಕ್ಟರ್ ತಂದರು. ಅದನ್ನು ಹಿಡಿದುಕೊಂಡು ನವೀನ್ ಬಚಾವ್ ಆದರು.
ಕರ್ನಾಟಕದ ವಿವಿಧೆಡೆ ಇಂದಿನಿಂದ 4 ದಿನ ಭಾರೀ ಮಳೆ
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ (Karnataka Rain) ವರುಣನ ಆರ್ಭಟ ಜೋರಾಗಿದೆ. ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದು ಅವಾಂತರ ಸೃಷ್ಟಿಯಾಗಿತ್ತು. ಇಂದಿನಿಂದ 4 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಕೂಡ ಹಳದಿ ಎಚ್ಚರಿಕೆ (Yellow Alert) ನೀಡಲಾಗಿದೆ.
ಮುಂದಿನ 2 ದಿನಗಳಲ್ಲಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಂದು (ಗುರುವಾರ) ಭಾರೀ ಮಳೆಯಾಗಲಿದೆ. 4 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ಹಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ.