Rajya Sabha Election Result: ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್​ ಸಿಂಗ್, ಜೈರಾಮ್ ರಮೇಶ್​ಗೆ ಗೆಲುವು

ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಮೂವರು, ಕಾಂಗ್ರೆಸ್​ನ ಒಬ್ಬರು ಜಯಶಾಲಿಯಾಗಿದ್ದಾರೆ. ಮತ್ತು ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಒಬ್ಬ ಅಭ್ಯರ್ಥಿಗೆ ಸೋಲಾಗಿದೆ.

Rajya Sabha Election Result: ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್​ ಸಿಂಗ್, ಜೈರಾಮ್ ರಮೇಶ್​ಗೆ ಗೆಲುವು
ರಾಜ್ಯಸಭಾ ಚುನಾವಣೆ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 10, 2022 | 9:28 PM

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಮೂವರು, ಕಾಂಗ್ರೆಸ್​ನ ಒಬ್ಬರು ಜಯಶಾಲಿಯಾಗಿದ್ದಾರೆ. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಒಬ್ಬ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್​ ಮತ್ತು ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಮನ್ಸೂರ್​ ಅಲಿ ಖಾನ್ ಅವರಿಗೆ ಸೋಲಾಗಿದ್ದು, ಜೈರಾಮ್ ರಮೇಶ್ ವಿಜಯಶಾಲಿಯಾಗಿದ್ದಾರೆ. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರಿಗೆ ಸೋಲಾಗಿದೆ.

ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ನಡೆದ ಮತದಾನ ಮಧ್ಯಾಹ್ನ 2 ಗಂಟೆ ವೇಳೆಗೆ ಅಂತ್ಯವಾಯಿತು. ಒಟ್ಟು 224 ಶಾಸಕರು ಮತ ಚಲಾಯಿಸಿದ್ದಾರೆ. ಇಬ್ಬರು ಶಾಸಕರಿಂದ ಅಡ್ಡ ಮತದಾನವಾಗಿದೆ (ಕ್ರಾಸ್​ ವೋಟಿಂಗ್). ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಿತು. ಜೆಡಿಎಸ್​ನ ಎಚ್​.ಡಿ.ರೇವಣ್ಣ ಅವರು ಸರಿಯಾದ ರೀತಿಯಲ್ಲಿ ಮತದಾನ ಮಾಡಲಿಲ್ಲ, ಅವರ ಮತ ಅಸಿಂಧುಗೊಳಿಸಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ದೂರು ಸಲ್ಲಿಸಿತ್ತು.

ಮೂರು ರಾಜ್ಯಗಳಲ್ಲಿ ಚುನಾವಣೆ

ಜೂನ್ 10ರಂದು ನಡೆದ ಮತದಾನದ ಮೂಲಕ ನಾಲ್ಕು ರಾಜ್ಯಗಳಲ್ಲಿ ಖಾಲಿ ಇರುವ 16 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಿತು. ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಹಲವು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕೇವಲ 16 ಸ್ಥಾನಗಳಿಗೆ ಮತದಾನ ನಡೆಯಿತು.

ರಾಜ್ಯಸಭೆಯು ಪ್ರಸ್ತುತ 245 ಸದಸ್ಯರನ್ನು ಹೊಂದಿದೆ. ಇದರಲ್ಲಿ 233 ಚುನಾಯಿತ ಮತ್ತು 12 ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ. ಸಂವಿಧಾನದ ಪ್ರಕಾರ ಮೇಲ್ಮನೆಯು 250 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬಾರದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 233 ಸದಸ್ಯರನ್ನು ಆಯ್ಕೆ ಮಾಡಿದರೆ ರಾಷ್ಟ್ರಪತಿಗಳು ಉಳಿದ 12 ಮಂದಿಯನ್ನು ನಾಮನಿರ್ದೇಶನ ಮಾಡುತ್ತಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:27 pm, Fri, 10 June 22