Manali Masjid: ಮಳಲಿಯಲ್ಲಿ ಮಸೀದಿಯಿದೆ ಎಂದು ಮತ್ತೆಮತ್ತೆ ಸಾಬೀತುಪಡಿಸುವ ಅಗತ್ಯ ಇಲ್ಲ; ಮಸೀದಿ ಪರ ವಕೀಲರ ವಾದ
ಮಳಲಿಯಲ್ಲಿರುವುದು ಮಸೀದಿ ಎಂದು ಮತ್ತೊಮ್ಮೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್ ದಾಖಲೆ ಪ್ರಕಾರವೇ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ ಎಂದು ಮಸೀದಿ ಪರ ವಕೀಲರು ಹೇಳಿದರು.
ಮಂಗಳೂರು: ನಗರದ ಮಳಲಿ ಮಸೀದಿ (Malali Masjid Controversy) ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಶುಕ್ರವಾರವೂ (ಜೂನ್ 10) ಮುಂದುವರಿಯಿತು. ನಿನ್ನೆ ವಿಶ್ವ ಹಿಂದೂ ಪರಿಷತ್ (VHP) ವಕೀಲರ ವಾದ ಆಲಿಸಿದ್ದ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಇಂದು ಮಳಲಿ ಮಸೀದಿ ಪರ ವಕೀಲ ಎಂ.ಪಿ.ಶೆಣೈ ಅವರ ವಾದ ಆಲಿಸಿತು. ಮಳಲಿಯಲ್ಲಿರುವುದು ಮಸೀದಿ ಎಂದು ಮತ್ತೊಮ್ಮೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್ ದಾಖಲೆ ಪ್ರಕಾರವೇ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ಮಸೀದಿ ಎಂದರೆ ವಕ್ಫ್ ಕಾನೂನಿನ ಪ್ರಕಾರ ಪ್ರಾರ್ಥನಾ ಸ್ಥಳ ಎಂದು ಅರ್ಥ. ಅಂಥ ಸ್ಥಳವನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿಯೆಂದು ಕರೆಯುತ್ತಾರೆ ಎಂದು ಶೆಣೈ ವಿವರಿಸಿದರು.
ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದ ಅಧಿಸೂಚನೆ ಇರಬೇಕು. ಆದರೆ ಮಳಲಿ ಮಸೀದಿಯ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಶನ್ ಇರಲಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಲ್ಲದೇ ಇದನ್ನ ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್ಗೆ ಅಧಿಕಾರ ಇಲ್ಲ. ಹೀಗಾಗಿ ವಿಎಚ್ಪಿ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ಪರವಾಗಿ ವಕೀಲರು ವಾದ ಮಂಡಿಸಿದರು. ಮುಂದಿನ ವಿಚಾರಣೆಯನ್ನು ಜೂನ್ 14ಕ್ಕೆ ನ್ಯಾಯಾಲಯವು ಮುಂದೂಡಿತು.
ಸ್ಮಾರಕ ಏನೆಂದು ತಿಳಿಯಲು ಸರ್ವೆ ಅಗತ್ಯ- ವಿಪಿಎಚ್ ವಾದ
ವಿಶ್ವ ಹಿಂದೂ ಪರಿಷತ್ ಪರವಾಗಿ ಜೂನ್ 9ರಂದು ವಾದ ಮಂಡಿಸಿದ್ದ ವಕೀಲ ಚಿದಾನಂದ ಕೆದಿಲಾಯ, ‘ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ಗೆ ಬರುವುದಿಲ್ಲ. ನಾವು ಎಲ್ಲಿಯೂ ಇದನ್ನು ವಕ್ಫ್ ಆಸ್ತಿಯೋ ಅಲ್ಲವೋ ಎಂದು ಪ್ರಶ್ನೆ ಮಾಡಿಲ್ಲ. ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇಗುಲ ಎಂದೇ ಹೇಳಿದ್ದೇವೆ. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿದ್ದೇವೆ’ ಎಂದು ಹೇಳಿದ್ದರು.
ಇದು ಸ್ಮಾರಕವೋ ಮಸೀದಿಯೋ ಎನ್ನುವುದನ್ನು ವಕ್ಫ್ ಟ್ರಿಬ್ಯುನಲ್ ನಿರ್ಧರಿಸಲು ಆಗುವುದಿಲ್ಲ. ಮಳಲಿ ಮಸೀದಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೆಗೆ ಆದೇಶಿಸಿದರೆ ಅಲ್ಲಿನ ಸ್ಮಾರಕದ ಯಾವುದೆಂದು ತಿಳಿಯುತ್ತದೆ ಎಂದು ಕೋರಿದರು. ವಿಎಚ್ಪಿ ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರುವುದಿಲ್ಲ. 1991ರ ಪೂಜಾ ಸ್ಥಳ ಕಾಯ್ದೆಯಡಿ ಅರ್ಜಿಯನ್ನು ವಜಾ ಮಾಡಲು ಆಗುವುದಿಲ್ಲ. ಪೂಜಾ ಸ್ಥಳ ಕಾಯ್ದೆಯಲ್ಲೂ ಸ್ಮಾರಕ ರಕ್ಷಣೆ ಬಗ್ಗೆ ಉಲ್ಲೇಖಿಸಲಾಗಿದೆ. ಅರ್ಜಿದಾರರ ವಾದದಂತೆ ಅಲ್ಲಿರುವ ಸ್ಮಾರಕ ಏನೆಂದು ಗೊತ್ತಾಗಬೇಕು. ಸರ್ವೆ ಮೂಲಕ ಗೊತ್ತಾದರೆ ಸ್ಥಳದ ಸಂರಕ್ಷಣೆ ಮಾಡಲು ಸಾಧ್ಯವಿದೆ ಎಂದು ವಿನಂತಿಸಿದರು. ಈಗಿರುವ ತಡೆಯಾಜ್ಞೆ ತೆರವುಗೊಳಿಸಿದರೆ ಅಲ್ಲಿ ಮಸೀದಿ ನಿರ್ಮಾಣವಾಗುತ್ತದೆ. ಇದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆಯ ಅವಕಾಶ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Fri, 10 June 22