Court News: ಮಳಲಿ ಮಸೀದಿ ವಿವಾದ; ಅಲ್ಲಿರುವ ಸ್ಮಾರಕ ಏನೆಂದು ತಿಳಿಯಲು ಸರ್ವೆ ಅಗತ್ಯ- ವಿಪಿಎಚ್ ವಾದ
ಈಗಿರುವ ತಡೆಯಾಜ್ಞೆ ತೆರವುಗೊಳಿಸಿದರೆ ಅಲ್ಲಿ ಮಸೀದಿ ನಿರ್ಮಾಣವಾಗುತ್ತದೆ. ಇದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆಯ ಅವಕಾಶ ತಪ್ಪುತ್ತದೆ ಎಂದು ವಿಎಚ್ಪಿ ಪರ ವಕೀಲರು ಹೇಳಿದರು.
ಮಂಗಳೂರು: ಮಳಲಿ ಮಸೀದಿ (Malali Masjid) ಪ್ರಕರಣದ ವಿಚಾರಣೆ ಗುರುವಾರ (ಜೂನ್ 9) ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ನಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷತ್ (Vishwa Hindu Parishat) ಪರ ವಕೀಲರಾದ ಚಿದಾನಂದ ಕೆದಿಲಾಯ ವಾದ ಮಂಡಿಸಿದರು. ‘ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ಗೆ ಬರುವುದಿಲ್ಲ. ನಾವು ಎಲ್ಲಿಯೂ ಇದನ್ನು ವಕ್ಫ್ ಆಸ್ತಿಯೋ ಅಲ್ಲವೋ ಎಂದು ಪ್ರಶ್ನೆ ಮಾಡಿಲ್ಲ. ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇಗುಲ ಎಂದೇ ಹೇಳಿದ್ದೇವೆ. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿದ್ದೇವೆ ಎಂದು ಹೇಳಿದರು.
ಇದು ಸ್ಮಾರಕವೋ ಮಸೀದಿಯೋ ಎನ್ನುವುದನ್ನು ವಕ್ಫ್ ಟ್ರಿಬ್ಯುನಲ್ ನಿರ್ಧರಿಸಲು ಆಗುವುದಿಲ್ಲ. ಮಳಲಿ ಮಸೀದಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೆಗೆ ಆದೇಶಿಸಿದರೆ ಅಲ್ಲಿನ ಸ್ಮಾರಕದ ಯಾವುದೆಂದು ತಿಳಿಯುತ್ತದೆ ಎಂದು ಕೋರಿದರು. ವಿಎಚ್ಪಿ ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರುವುದಿಲ್ಲ. 1991ರ ಪೂಜಾ ಸ್ಥಳ ಕಾಯ್ದೆಯಡಿ ಅರ್ಜಿಯನ್ನು ವಜಾ ಮಾಡಲು ಆಗುವುದಿಲ್ಲ. ಪೂಜಾ ಸ್ಥಳ ಕಾಯ್ದೆಯಲ್ಲೂ ಸ್ಮಾರಕ ರಕ್ಷಣೆ ಬಗ್ಗೆ ಉಲ್ಲೇಖಿಸಲಾಗಿದೆ. ಅರ್ಜಿದಾರರ ವಾದದಂತೆ ಅಲ್ಲಿರುವ ಸ್ಮಾರಕ ಏನೆಂದು ಗೊತ್ತಾಗಬೇಕು. ಸರ್ವೆ ಮೂಲಕ ಗೊತ್ತಾದರೆ ಸ್ಥಳದ ಸಂರಕ್ಷಣೆ ಮಾಡಲು ಸಾಧ್ಯವಿದೆ ಎಂದು ವಿನಂತಿಸಿದರು.
ಈಗಿರುವ ತಡೆಯಾಜ್ಞೆ ತೆರವುಗೊಳಿಸಿದರೆ ಅಲ್ಲಿ ಮಸೀದಿ ನಿರ್ಮಾಣವಾಗುತ್ತದೆ. ಇದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆಯ ಅವಕಾಶ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ (ಜೂನ್ 10) ಮುಂದೂಡಿತು.
ಸ್ಮಶಾನಕ್ಕೆ ಭೂಮಿ ಒದಗಿಸ ಸರ್ಕಾರ: ಹೈಕೋರ್ಟ್ ತರಾಟೆ
ಬೆಂಗಳೂರು: ರಾಜ್ಯದ ಎಲ್ಲ ಗ್ರಾಮಗಳಲ್ಲಿಯೂ ಶವಸಂಸ್ಕಾರಕ್ಕೆ ಭೂಮಿ ಒದಗಿಸಬೇಕು ಎನ್ನುವ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಜೈಲಿಗೆ ಕಳಿಸಬೇಕಾಗಬಹುದು ಎಂದು ನ್ಯಾಯಮೂರ್ತಿಗಳಾದ ಬಿ.ವೀರಪ್ಪ, ಕೆ.ಎಸ್.ಹೇಮಲೇಖಾ ಅವರಿದ್ದ ಪೀಠ ಎಚ್ಚರಿಕೆ ನೀಡಿತು.
ಈ ಸಂಬಂಧ 2019ರ ಆಗಸ್ಟ್ ತಿಂಗಳಲ್ಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿತ್ತು. ಮೃತಪಟ್ಟವರಿಗೂ ಘನತೆಯಿಂದ ಅಂತ್ಯಸಂಸ್ಕಾರ ಹೊಂದುವ ಹಕ್ಕಿದೆ. ಹೀಗಾಗಿ 6 ತಿಂಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸುವಂತೆ ಆದೇಶಿಸಲಾಗಿತ್ತು. 3 ವರ್ಷವಾದರೂ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್ ಆದೇಶ ಪಾಲಿಸದ ಸರ್ಕಾರಕ್ಕೆ ನಾಚಿಕೆಯಾಗಬೇಕು. ದಂತ ಗೋಪುರದಲ್ಲಿ ಕುಳಿತ ಡಿಸಿಗಳ ವರದಿಯಿಂದ ಉಪಯೋಗವಿಲ್ಲ. ವಿಚಾರಣೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು. ಆರೋಪ ನಿಗದಿ ಮಾಡುತ್ತೇವೆ, ಪರಿಣಾಮ ಎದುರಿಸಲಿ ನ್ಯಾಯಾಲಯ ಹೇಳಿತು.
ನಿರ್ಲಕ್ಷ್ಯ ಧೋರಣೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸುತ್ತೇವೆ. ಅಲ್ಲಿ ವ್ಯವಸ್ಥೆ ಚೆನ್ನಾಗಿದೆ. ನಮ್ಮ ತಾಳ್ಮೆಗೂ ಮಿತಿಯಿದೆ, ಅದನ್ನು ಪರೀಕ್ಷಿಸಬೇಡಿ. 3 ವರ್ಷಗಳಾದರೂ ಸರ್ಕಾರ ಕಣ್ತೆರೆದಿಲ್ಲ. ಆದೇಶ ಪಾಲಿಸಿ, ಇಲ್ಲ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ನ್ಯಾಯಾಲಯ ಎಚ್ಚರಿಸಿತು. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಲಲು ಕೊನೆಯದಾಗಿ 15 ದಿನಗಳ ಕಾಲಾವಕಾಶ ನೀಡಿತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ