ಅಯೋಧ್ಯೆಯಿಂದ ಲಂಕೆಗೆ ಹೋಗಿದ್ದ ರಾಮ-ಲಕ್ಷ್ಮಣರು ದಾರಿಯುದ್ದಕ್ಕೂ ಅನೇಕ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ. ಅದರಲ್ಲಿಯೂ ಅತೀ ಹೆಚ್ಚು ಕುರುಹಗಳು ಸಿಗೋದು ಕರ್ನಾಟಕದಲ್ಲಿ. ಈ ಮಧ್ಯೆ ಧಾರವಾಡ ಜಿಲ್ಲೆಯಲ್ಲಿಯೂ ರಾಮ ಓಡಾಡಿ ಹೋಗಿದ್ದ ಅನ್ನೋ ವಿಷಯವೊಂದು ಈಗ ಬಹಿರಂಗವಾಗಿದ್ದು, ಆಗ ಊರಿಲ್ಲದ ಅರಣ್ಯದಲ್ಲಿ ರಾಮ ನಿಂತು ಹೋಗಿದ್ದ ಜಾಗದಲ್ಲಿಯೇ ರಾಮನ ಮಂದಿರವಿದೆ.
ಇದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿರೋ ಶ್ರೀ ರಾಮನ ಮಂದಿರ. ಈ ಮಂದಿರದ ಶೈಲಿ ಅಯೋಧ್ಯೆಯ ಹಳೆಯ ವಿನ್ಯಾಸದಲ್ಲಿಯೇ ಇದೆ. ಅಂದ್ರೆ ವಿವಾದಿತ ಕಟ್ಟಡ ಇದ್ದಾಗಿನದ್ದೇ ವಿನ್ಯಾಸವಿದ್ದು, ಶಿಖರಗಳು ಮಾತ್ರ ಮಂದಿರದ ಮಾದರಿಯಲ್ಲಿ ಮಾಡಲಾಗಿದೆ. ಈ ಸ್ಥಳದಲ್ಲಿಯೇ ರಾಮಾಯಣ ಕಾಲದಲ್ಲಿ ರಾಮ ಬಂದು ಹೋಗಿದ್ದ ಎಂಬ ಪ್ರತೀತಿಯಿದೆ.
ಬೆಳಗಾವಿ ಜಿಲ್ಲೆಯ ಸುರೇಬಾನ ಗ್ರಾಮದ ಶಬರಿಕೊಳ್ಳದಿಂದ ರಾಮ ಪಂಪಾ ಸರೋವರದತ್ತ ಹೊರಟಿದ್ದಾಗ, ಆಗ ಅರಣ್ಯ ಪ್ರದೇಶವಾಗಿದ್ದ ಹೆಬ್ಬಳ್ಳಿಯ ಈ ಸ್ಥಳದಲ್ಲಿ ಬಂದು, ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸಿದ್ದನಂತೆ. ಇದು ಬೆಳಕಿಗೆ ಬಂದಿದ್ದು, 20 ವರ್ಷಗಳ ಹಿಂದೆ. ಈ ಗ್ರಾಮದಲ್ಲೆ ಮಹಾರಾಷ್ಟ್ರದ ಗೋಂದಾವಲೆಯಿಂದ ಬಂದು ದೊಡ್ಡ ಧಾರ್ಮಿಕ ಕ್ರಾಂತಿ ಮಾಡಿರೋ ದತ್ತಾವಧೂತ ಮಹಾರಾಜರು ಇಲ್ಲಿ ಬಂದು ನಿಂತಾಗ ರಾಮ ಬಂದು ಹೋಗಿದ್ದು ಅವರಿಗೆ ಗೋಚರವಾಗಿದೆ. ಅವರು ಅವತ್ತೇ ಸಂಕಲ್ಪ ಮಾಡಿ, 20 ವರ್ಷಗಳ ಹಿಂದೆಯೇ ಅಯೋಧ್ಯೆಯ ಹಳೆಯ ಮಂದಿರದ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೊಂದಾವಲೇಕರ ಮಹಾರಾಜರು 1909ರಲ್ಲಿ ಹೆಬ್ಬಳ್ಳಿಗೆ ಬಂದಾಗ ತಮ್ಮ ಪಾದುಕೆಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದರು. ಹೀಗಾಗಿ ಅವತ್ತಿನಿಂದಲೇ ಹೆಬ್ಬಳ್ಳಿ ಆಧ್ಯಾತ್ಮಿಕ ಕ್ಷೇತ್ರವಾಗಿ ಬೆಳಕಿಗೆ ಬಂದಿತ್ತು. ಅದಾದ ಬಳಿಕ 1984ರಲ್ಲಿ ಶ್ರೀ ದತ್ತಾವಧೂತ ಗುರುಜೀ ತಮ್ಮ ಗುರುಗಳ ಆಜ್ಞೆಯ ಮೇರೆಗೆ ಗೋಂದಾವಲೆಯಿಂದ ಹೆಬ್ಬಳ್ಳಿಗೆ ಬಂದು ಧಾರ್ಮಿಕ ಕಾರ್ಯ ಆರಂಭಿಸಿ, ಗ್ರಾಮದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾಗ, ನಾಡಗೇರ ಎಂಬುವವರಿಗೆ ಸೇರಿದ ಈ ಜಾಗದಲ್ಲಿ ಬಂದು ನಿಂತ ದತ್ತಾವಧೂತರು, ಇಲ್ಲಿಯೇ ರಾಮ ಬಂದು ಹೋಗಿದ್ದಾರೆ ಅನ್ನೋ ವಾಣಿಯನ್ನು ನುಡಿದರು.
ಆಗ ನಾಡಿಗೇರರು ತಮ್ಮ ಜಾಗ ಬಿಟ್ಟುಕೊಟ್ಟಾಗ ಇಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಎದುರಿಗೆ ಮಾರುತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ, ಅಯೋಧ್ಯೆ ಮಾದರಿಯಲ್ಲಿಯೇ ದೇವಸ್ಥಾನ ಮಾಡಿದ್ದಾರೆ. ಹೀಗಾಗಿ ಜನೆವರಿ 22ರಂದು ಇಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಧರಿಸಿದ್ದಾರೆ.
ಹೆಬ್ಬಳ್ಳಿ ಗ್ರಾಮದಲ್ಲಿ 101 ದೇವಸ್ಥಾನ, 101 ಬಾವಿಗಳಿಗೆ, ಅನಾದಿ ಕಾಲದಲ್ಲಿ ಯಾದವರ ಆಳ್ವಿಕೆಯ ಸಮಯದಲ್ಲಿ ಹೆಬ್ಬಳ್ಳಿ ಗ್ರಾಮ ಸ್ಥಾಪನೆಯಾಗಿದೆ. ಇಂತಹ ಐತಿಹ್ಯದ, ದೇವಸ್ಥಾನಗಳ ಊರಲ್ಲಿ ರಾಮನ ಪಾದ ಸ್ಪರ್ಶವಾಗಿದೆ. ಹೀಗಾಗಿ ಇಂದು ಜನವರಿ 22ರಂದು ರಾಮ ಮಂದಿರ ಮಾತ್ರವಲ್ಲ ಗ್ರಾಮದಲ್ಲಿರೋ 101 ದೇವಸ್ಥಾನಗಳಲ್ಲಿಯೂ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಇಡೀ ಗ್ರಾಮಸ್ಥರು ಮುಂದಾಗಿದ್ದಾರೆ.