ಬಸ್ ಶೆಲ್ಟರ್ ನಿರ್ಮಾಣಕ್ಕೆ ಜೆಡಿಎಸ್ ಸೇರಿ ಇತರರ ವಿರೋಧ: ಗುದ್ದಲಿ ಪೂಜೆ ಮಾಡದೆ ತೆರಳಿದ ಕಾಂಗ್ರೆಸ್​ ಶಾಸಕ

ರಾಮನಗರದಲ್ಲಿ ಇದೀಗ ನೂತನ ಬಸ್ ಶೆಲ್ಟರ್ ನಿರ್ಮಾಣ ವಿಚಾರ ವಿವಾದಕ್ಕೆ ಕಾರಣವಾಗಿದೆ. ನಗರದ ಐಜೂರು ವೃತ್ತದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ನೂತನ ಬಸ್ ಶೆಲ್ಟರ್ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆಗೆ ಬಂದಿದ್ದರು. ಆದರೆ ಯೋಜನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ, ಶಾಸಕರು ಪೂಜೆ ನೆರವೇರಿಸದೆ ವಾಪಸ್ ತೆರಳಿದ್ದಾರೆ.

ಬಸ್ ಶೆಲ್ಟರ್ ನಿರ್ಮಾಣಕ್ಕೆ ಜೆಡಿಎಸ್ ಸೇರಿ ಇತರರ ವಿರೋಧ: ಗುದ್ದಲಿ ಪೂಜೆ ಮಾಡದೆ ತೆರಳಿದ ಕಾಂಗ್ರೆಸ್​ ಶಾಸಕ
ಶಾಸಕ ಇಕ್ಬಾಲ್ ಹುಸೇನ್ ಮತ್ತು ಜನರ ಮಧ್ಯೆ ಮಾತಿನ ಚಕಮಕಿ
Image Credit source: tv9 kannada
Edited By:

Updated on: Mar 28, 2026 | 9:12 PM

ರಾಮನಗರ, ಮಾರ್ಚ್​ 28: ರೇಷ್ಮೆನಗರಿ ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರ. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದರು, ಜಿಲ್ಲಾ ಕೇಂದ್ರದಲ್ಲಿ ಒಂದು ಬಸ್ ಶೆಲ್ಟರ್ (bus shelter) ಇಲ್ಲ. ಹೀಗಾಗಿ ಪ್ರಾಧಿಕಾರದ ವತಿಯಿಂದ ಸುಸಜ್ಜಿತ ಬಸ್ ಶೆಲ್ಟರ್ ಕಾಮಗಾರಿಗೆ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗುದ್ದಲಿಪೂಜೆ ನೆರವೇರಿಸಲು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ (MLA Iqbal Hussain)​ ಕೂಡ ಆಗಮಿಸಿದ್ದರು. ಆದರೆ‌ ತಂಗುದಾಣ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು‌. ಹೀಗಾಗಿ ಗುದ್ದಲಿಪೂಜೆ ನೆರವೇರಿಸದೇ ಶಾಸಕರು ವಾಪಾಸ್ ತೆರಳಿದ್ದಾರೆ.

ವಿವಾದಕ್ಕೆ ಕಾರಣವಾದ ನೂತನ ಬಸ್ ಶೆಲ್ಟರ್ ನಿರ್ಮಾಣ 

ಹೌದು. ನೂತನ ಬಸ್ ಶೆಲ್ಟರ್ ನಿರ್ಮಾಣ ವಿಚಾರ ರಾಮನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಶಾಸಕ ಇಕ್ಬಾಲ್ ಹುಸೇನ್​ ಆಗಮಿಸಿದ್ದರು. ಸ್ಥಳೀಯರ ವಿರೋಧದ ಹಿನ್ನೆಲೆ ಗುದ್ದಲಿ ಪೂಜೆ ನಡೆಸದೇ ವಾಪಾಸ್ ತೆರಳಿದ ಘಟನೆ ನಡೆದಿದೆ. ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಐಜೂರು ವೃತ್ತದ ಬಳಿ, ರಾಮನಗರ ಪ್ರಾಧಿಕಾರದ ವತಿಯಿಂದ ಬಸ್ ಶೆಲ್ಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.

ಇದನ್ನೂ ಓದಿ: ರಾಜ್ಯ ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ

ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣಿಸುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದ್ದರು. ಇನ್ನು ಪ್ರತಿನಿತ್ಯ ಬಸ್ ಶೆಲ್ಟರ್ ಇಲ್ಲದೆ ಬಿಸಿಲಿನಲ್ಲಿ ನಿಲ್ಲಬೇಕಾಗಿರುವ ಪ್ರಯಾಣಿಕರಿಗೆ ಈ ಯೋಜನೆ ಸಹಾಯಕವಾಗಬೇಕಿತ್ತು. ಹೀಗಾಗಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಕಾಂಪ್ಲೆಕ್ಸ್ ಮಾಲೀಕರು ಹಾಗೂ ಜೆಡಿಎಸ್ ಮುಖಂಡರು, ಶೆಲ್ಟರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ತಮ್ಮ ಅಂಗಡಿಗಳ ಮುಂದೆ ಶೆಲ್ಟರ್ ನಿರ್ಮಾಣವಾದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದರು. ಈ ಹಿನ್ನೆಲೆ ಗುದ್ದಲಿ ಪೂಜೆಗೆ ಆಗಮಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸದೇ ವಾಪಾಸ್ ತೆರಳಿದ್ದಾರೆ.

ವ್ಯಾಪಾರಕ್ಕೆ ತೊಂದರೆ

ಅಂದಹಾಗೆ ನೂತನ ಬಸ್ ಶೆಲ್ಟರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುತ್ತಾರೆ ಎಂಬ ವಿಚಾರ ತಿಳಿದು ಕಾಂಪ್ಲೆಕ್ಸ್ ಮಾಲೀಕರು ಮೊದಲೇ ಜಮಾವಣೆಗೊಂಡಿದ್ದರು. ಈ ವೇಳೆ ಗುದ್ದಲಿ ಪೂಜೆಗೆ ಆಗಮಿಸಿದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಗುದ್ದಲಿ ಪೂಜೆ ನಡೆಸದೇ ಶಾಸಕ ಸ್ಥಳದಿಂದ ವಾಪಾಸ್ ತೆರಳಿದರು. ಇನ್ನು ಈ ಬಗ್ಗೆ ಮಾತನಾಡಿದ ಕಾಂಪ್ಲೆಕ್ಸ್ ಮಾಲೀಕ ಜಯರಾಮ್, ನಮ್ಮ ಕಾಂಪ್ಲೆಕ್ಸ್ ಮುಂಭಾಗ ನಿರ್ಮಾಣ‌ ಮಾಡಿದರೆ, ನಮ್ಮ ವ್ಯಾಪಾರಕ್ಕೆ ತೊಂದರೆ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಂಗುದಾಣ ನಿರ್ಮಾಣಕ್ಕೆ ಅವಕಾಶ ಕೊಡಲ್ಲ‌ ಎಂದಿದ್ದಾರೆ.

ಇದನ್ನೂ ಓದಿ: ರೆಸಾರ್ಟ್ ರಾಜಕೀಯ ಶುರು: ಬಿಡದಿಯ ವಂಡರ್ ಲಾ ರೆಸಾರ್ಟ್​ನತ್ತ 14 ಕಾಂಗ್ರೆಸ್ ಶಾಸಕರು!

ಒಟ್ಟಾರೆ ರಾಮನಗರದ ಐಜೂರು ವೃತ್ತದ ಬಳಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಯೋಜನೆ ರೂಪಿಸಿದ್ದರೂ, ವ್ಯಾಪಾರಿಗಳಿಗೆ ಉಂಟಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತವಾಗಿದೆ. ಇದೀಗ ಅಧಿಕಾರಿಗಳು ಮುಂದಿನ ಕ್ರಮ ಏನು ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us