ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ? 64 ಜನರ ವಿರುದ್ಧ ಎಫ್ಐಆರ್ ದಾಖಲು
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಲು 4 ದಿನವಷ್ಟೇ ಬಾಕಿ ಇದೆ. ಈ ಮಧ್ಯೆ ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ ಆಯೋಜನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 64 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಂಧಿತ 64 ಜನರ ಪೈಕಿ 8 ಯುವತಿಯರಿದ್ದಾರೆ.
ಮೈಸೂರು, ಸೆಪ್ಟೆಂಬರ್ 29: ನಗರದಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ (Rave party) ಆಯೋಜನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 64 ಜನರ ಪೈಕಿ 8 ಯುವತಿಯರಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ 64 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 221, 223, 121(2), BNS15(a), 32, 34, 38(a) KE ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತರನ್ನು ಮೈಸೂರು, ಮಡಿಕೇರಿ, ಬೆಂಗಳೂರು, ತಮಿಳುನಾಡು ಮೂಲದವರು ಎನ್ನಲಾಗುತ್ತಿದ್ದು, ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಕೆಆರ್ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಎಂಬಾತನಿಂದ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಪಾರ್ಟಿ ಆಯೋಜಿಸಿದ್ದರು.
ಇದನ್ನೂ ಓದಿ: ದಸರಾ ಉತ್ಸದ ನಡುವೆ ಮೈಸೂರು ಹೊರವಲಯದಲ್ಲಿ ರೇವ್ ಪಾರ್ಟಿ?
ಇನ್ನು ಪಾರ್ಟಿಗೆ ಅಧಿಕೃತವಾಗಿ ಅನುಮತಿ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಅಪ್ಲೋಡ್ ಮಾಡಿದ್ದರು. ಇದನ್ನು ನಂಬಿ 50ಕ್ಕೂ ಹೆಚ್ಚು ಜೋಡಿ ಪಾರ್ಟಿಗೆ ನೋಂದಾಯಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ತಲಾ 2 ಸಾವಿರ ವಸೂಲಿ ಮಾಡಿ, ಇಸ್ರೇಲ್ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ ಕರೆಸಿದ್ದರು. ಪೊಲೀಸರಿಂದ ಯಾವುದೇ ಅನುಮತಿ ಪಡೆಯದೆ ಖುಲ್ಲಂ ಖುಲ್ಲಾ ಮಸ್ತಿಯಲ್ಲಿ ತೊಡಗಿದ್ದರು.
ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಎಸ್ಪಿಗೆ ಮಾಹಿತಿ ನೀಡಲಾಗಿದೆ. ಮೈಸೂರು ಎಸ್ಪಿ ಆದೇಶದಂತೆ ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ನೇತೃತ್ವದಲ್ಲಿ ರೇವ್ ಪಾರ್ಟಿ ಮೇಲೆ ರೇಡ್ ಮಾಡಲಾಗಿದೆ.
ಯುವತಿಯರ ಜೊತೆ ಕುಣಿದು ಕುಪ್ಪಳಿಸ್ತಿದ್ದವರು ಖಾಕಿ ಎಂಟ್ರಿ ಕೊಡ್ತಿದ್ದಂತೆ ಎದ್ನೋ ಬಿದ್ನೋ ಅಂತ ಕಾಲ್ಕಿತ್ತಿದ್ದರು. ಕೆಲ ಪುಂಡರು ಪೊಲೀಸರ ಮೇಲೂ ದಾಳಿ ಮಾಡಿದ್ದರು. ಆದರೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸ್ ಎಲರ ರಕ್ತದ ಮಾದರಿ ಸಂಗ್ರಹಿಸಿದ್ದರು. ಕಾರ್ಯಕ್ರಮ ಆಯೋಜಕರು, ಜಮೀನಿನ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದೆ. ಆದರೆ ಪಾರ್ಟಿ ನಡೆದ ಸ್ಥಳದಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:22 pm, Sun, 29 September 24