ಡಿ ರೂಪಾ-ರೋಹಿಣಿ ಸಿಂಧೂರಿ ಕಲಹ: ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಲಹ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಹಾಗಾದ್ರೆ, ಇಂದು ಇಬ್ಬರು ಕಡೆ ವಕೀಲರ ವಾದ ಹೇಗಿತ್ತು ಎನ್ನುವ ವಿವರ ಇಲ್ಲಿದೆ.
ನವದೆಹಲಿ, (ಜನವರಿ 12): ಐಪಿಎಸ್ ಅಧಿಕಾರಿ ಡಿ.ರೂಪಾ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ನಡುವಿನ ಕಲಹ ಪ್ರಕರಣ ಸುಪ್ರೀಂಕೋರ್ಟ್ (supreme court ) ಮೆಟ್ಟಿಲೇರಿದ್ದು, ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರವರಿ 16ಕ್ಕೆ ಮುಂದೂಡಿದೆ. ಆದ್ರೆ, ಮಧ್ಯಂತರ ಆದೇಶ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ವಾದ-ಪ್ರತಿವಾದ ಹೀಗಿದೆ
ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ ತೆಗೆದು ಹಾಕಬಹುದು. ಆದರೆ ಘಟನೆಯಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಇದಕ್ಕಾಗಿ ಡಿ.ರೂಪಾ ಬೇಷರತ್ ಕ್ಷಮೆಯಾಚಿಸಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿದರು. ಆದ್ರೆ, ಇದಕ್ಕೆ ತೀವ್ರ ಆಕ್ಷೇಪವ್ಯಕ್ತಪಡಿಸಿದ ಡಿ.ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ಅವಹೇಳನಕಾರಿ ಮಾತನಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ ಎಂದು ಪ್ರತಿವಾದ ಮಂಡಿಸಿದರು. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಂಧೂರಿ ಪರ ವಕೀಲರು, ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೊಸ್ಟ್ ಮಾಡ್ತಾರೆ ಎಂದಿದ್ದೆ. ಡಿ.ರೂಪಾಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ ಎಂದರು.
ವಾದ ಪ್ರತಿವಾದ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾಯಮೂರ್ತಿ ಎ.ಎಸ್.ಓಕಾ, ನೀವು ಒಂದು ನಿರ್ಧಾರಕ್ಕೆ ಬರಬೇಕು, ಇಬ್ಬರಿಗೂ ಉಜ್ವಲ ಭವಿಷ್ಯವಿದೆ ಎಂದು ಸಲಹೆ ನೀಡಿದರು. ಬಳಿಕ ರೋಹಿಣಿ ಸಿಂಧೂರಿ ಪರ ವಕೀಲ ಪ್ರತಿಕ್ರಿಯಿಸಿ, ಉಜ್ವಲ ಭವಿಷ್ಯ ಇರಬಹುದು, ಆದರೆ ಜನರು ಬೇರೆ ರೀತಿ ನೋಡುತ್ತಿದ್ದಾರೆ. ನಾನು ಮೌನವಾಗಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಬಳಿಕ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದರು. ಆದ್ರೆ, ಮಧ್ಯಂತರ ಆದೇಶ ಮುಂದುವರಿಸುವಂತೆ ಸೂಚನೆ ನೀಡಿದರು.
Published On - 2:33 pm, Fri, 12 January 24