ಬೆಂಗಳೂರು, (ಜನವರಿ 15): ಬೆಂಗಳೂರು, (ಜನವರಿ 15): ಕರ್ನಾಟಕ ಕಾಂಗ್ರೆಸ್ನಲ್ಲಿ ಪಟ್ಟದ ಆಟ ಹೊಸ ಮಗ್ಗುಲಿಗೆ ಹೊರಳಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಇಷ್ಟು ದಿನ ಸೈಲೆಂಟ್ ಆಗಿ ಗೇಮ್ ಆಡುತ್ತಿದ್ದರು. ಆದ್ರೆ ಯಾವಾಗ CLP ಸಭೆಯಲ್ಲಿ ಬೆಳಗಾವಿ ಡಿಸಿಸಿ ಕಚೇರಿ ಕ್ರೆಡಿಟ್ ಫೈಟ್ ನಡೆಯಿತೋ ಅದಾದ ಬಳಿಕ ಸಾಹುಕಾರ್ ಸಿಡಿದೆದ್ದಂತೆ ಕಾಣುತ್ತಿದೆ. ಯಾಕಂದ್ರೆ ಮೊನ್ನೆ ಕಾಂಗ್ರೆಸ್ ಸಭೆ ಬಳಿಕ ಸುರ್ಜೇವಾಲ ಎಚ್ಚರಿಕೆ ನಮಗೆ ಕನ್ಸಿಡರ್ ಆಗಲ್ಲ ಎಂದಿದ್ದ ಸತೀಶ್ , ಇವತ್ತು ಹೊಸ KPCC ಅಧ್ಯಕ್ಷ ಬೇಕೆಂದು ಬಹಿರಂಗವಾಗಿಯೇ ಹೇಳಿದ್ದಾರೆ. ಆದಷ್ಟು ಬೇಗ ಕೆಪಿಸಿಸಿ ಹೊಸ ಅಧ್ಯಕ್ಷರ ಆಗಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಬಳಿ ಸಲಹೆ ನೀಡಿದ್ದೇವೆಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರು ಬದಲಾಗುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ 2023ರ ಮೇ 18ರಂದೇ ಪತ್ರಿಕಾ ಹೇಳಿಕೆ ನೀಡಿದ್ದರು. ಇದೇ ಟಿಪ್ಪಣಿ ಇಟ್ಟುಕೊಂಡು ಇದೀಗ ಅಹಿಂದ ನಾಯಕರ ವಾದ ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ವೋಟು ತರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಪಾಪ್ಯುಲರ್ ಇರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಒಂದು ಕಡೆ ತೆರೆಮರೆಯಲ್ಲೇ ಸಿಎಂ ಕುರ್ಚಿ ಫೈಟ್ ನಡೆಯುತ್ತಿದ್ದರೆ, ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಎಬ್ಬಿಸಿರೋ ಸಚಿವ ಸತೀಶ್ ಜಾರಕಿಹೊಳಿ, ನೇರಾ ನೇರವಾಗಿಯೇ ಹೊಸ ಅಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದಿದ್ದಾರೆ. ಹೌದು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ಶುರುವಾಗಿದೆ. ಕೊನೆ ಎರಡ್ಮೂರು ವರ್ಷವದಾರೂ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದ್ರೆ, ಇತ್ತ ಸತೀಶ್ ಜಾರಕಿಹೊಳಿ ಡಿಕೆಶಿ ಬಳಿ ಇರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ. ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಲಿದ್ದಾರೆ. ಜನವರಿ 27 ಅಥವಾ 28ರಂದು ದೆಹಲಿಗೆ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದು, ಈ ವೇಳೆ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರ ಜತೆ ಚರ್ಚಿಸಿರುವ ಸತೀಶ್, CLP ಸಭೆ ನಂತರ ಸುರ್ಜೇವಾಲ ಜತೆ ಸಹ ಮಾತುಕತೆ ಸಹ ಮಾಡಿದ್ದಾರೆ. ಇದೀಗ ಇನ್ನುಳಿದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಲು ಮುಂದಾಗಿದೆ.
ಇತ್ತ ಸಚಿವ ಸತೀಶ್ ಜಾರಕಿಹೊಳಿ, 2028ರ ಸಿಎಂ ಆಟವನ್ನೂ ಕಟ್ಟಿದ್ದಾರೆ. ನಾನು ಇದೀಗ ಫೈಟ್ ಮಾಡಲ್ಲ, 2028ಕ್ಕೆ ಫೈಟ್ ಮಾಡುತ್ತೇನೆ ಅಂತಿದ್ದಾರೆ. ಶಿಗ್ಗಾಂವಿ ಉಪಚುನಾವಣೆಯಲ್ಲೂ ತನ್ನ ಶಕ್ತಿ ಏನು ಎಂದು ತೋರಿಸಿದ್ದರು, ಅಲ್ಪಸಂಖ್ಯಾತರನ್ನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದರು. ಈಗ ಹಿಂದುಳಿದವರನ್ನ ಸೆಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಭವಿಷ್ಯದ ಅಹಿಂದ ಚಾಂಪಿಯನ್ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ.
ಕೊನೆ ಎರಡ್ಮೂರು ವರ್ಷವಾದರೂ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಅಹಿಂದ ನಾಯಕರು ವಿರೋಧಿಸುತ್ತಿದ್ದಾರೆ. ಈಗ ಸದ್ಯಕ್ಕೆ ಅಂತರೂ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಅರಿತ ಸತೀಶ್ ಜಾರಕಿಹೊಳಿ, 2028ರ ಮೇಲೆ ಕಣ್ಣಿಟ್ಟಿದ್ದಾರೆ. 2028ಕ್ಕೆ ಸಿಎಂ ಆಗುತ್ತೇನೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಸತೀಶ್ ಜಾರಕಿಹೊಳಿ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿ ಇಮೇಜ್ ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದ ಮೊದಲಿಗೆ ಸತೀಶ್ ಜಾರಕಿಹೊಳಿ ಅವರ ಟಾರ್ಗೆಟ್ ಕೆಪಿಸಿಸಿ ಅಧ್ಯಕ್ಷರಾಗುವುದು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದರೆ, ಡಿಸಿಎಂ ಡಿಕೆಶಿಯ ರಾಜಕೀಯ ಪ್ರಾಶಸ್ತ್ಯ ಕಡಿಮೆ ಆಗುತ್ತೆ ಎನ್ನುವ ಲೆಕ್ಕಾಚಾರವೂ ಇದೆ. ಇದರಿಂದ ದಲಿತ ನಾಯಕರ ಶಕ್ತಿಯೂ ಹೆಚ್ಚುತ್ತೆ. ಸರ್ಕಾರದಲ್ಲಿ ಸಿದ್ದರಾಮಯ್ಯ, ಪಕ್ಷದಲ್ಲಿ ಜಾರಕಿಹೊಳಿ ಫಾರ್ಮುಲಾ ಜಾರಿ ಮಾಡೋದಾಗಿದೆ. ಇನ್ನು ಎದುರಾಳಿ ಬಣಕ್ಕೆ ಮೇಲುಗೈ ಆಗದಂತೆಯೂ ತಡೆತಟ್ಟಬಹುದಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಮನೆಯಲ್ಲಿ ಪಟ್ಟದ ಫೈಟ್ ಮತ್ತೊಂದು ಹಂತಕ್ಕೆ ಹೋಗಿರುವುದು ಸುಳ್ಳಲ್ಲ, ಸಿಟ್ಟಾಗಿರುವ ಸಿಎಂ ಸಿದ್ದರಾಮಯ್ಯ, ಸತೀಶ್ ಜಾಹಿಹೊಳಿ, ಇದೀಗ ಓಪನ್ ಆಗಿಯೇ ಡಿಕೆಶಿ ವಿರುದ್ಧ ತಿರುಬಿದ್ದಿದ್ದು, ರಾಜಕೀಯ ಸಮರ ಸಾರಿದ್ದಾರೆ. ಪಕ್ಷದ ಅಧ್ಯಕ್ಷ ಗಾದಿಯನ್ನೇ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Wed, 15 January 25