ಗಿಡಮರಗಳು ಪಾಲಿಸುವಂತೆ, ನಾವೂ ನಮ್ಮ ಧರ್ಮ ಪಾಲಿಸೋಣ; ವಿಜ್ಞಾನ ಬರಹಗಾರ ನಾಗೇಶ ಹೆಗಡೆ

|

Updated on: Apr 02, 2021 | 7:08 PM

Bedti-Varada River Linking: ಬೇಡ್ತಿ ಈಗಲೂ ಹರಿಯುತ್ತಿರಲು ಕಾರಣ ಏನೆಂದರೆ ಭೂಮಿಯೊಳಗಿನ ಇರುವೆ ಗೆದ್ದಲುಗಳಿಂದ ಹಿಡಿದು ಗಿಡಮರ, ಉಡ-ಪಡ, ಗಾಳಿಯಲ್ಲಿನ ಜೇನು-ದುಂಬಿ, ಆಕಾಶದಲ್ಲಿನ ಗಿಡುಗ, ಮಂಗಟ್ಟೆ ಪಕ್ಷಿ ಎಲ್ಲವೂ ತಂತಮ್ಮ ಧರ್ಮವನ್ನು ಪಾಲಿಸುತ್ತಿವೆ. ಆದರೆ ನಾವೇಕೆ ಪಾಲಿಸುತ್ತಿಲ್ಲ?

ಗಿಡಮರಗಳು ಪಾಲಿಸುವಂತೆ, ನಾವೂ ನಮ್ಮ ಧರ್ಮ ಪಾಲಿಸೋಣ; ವಿಜ್ಞಾನ ಬರಹಗಾರ ನಾಗೇಶ ಹೆಗಡೆ
ಕಾರ್ಯಾಗಾರದಲ್ಲಿ ವಿಜ್ಞಾನಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಹೋರಾಟಗಾರರು, ಪರಿಸರ ಕಾರ್ಯಕರ್ತರು (ಚಿತ್ರಕೃಪೆ: ಸ್ವರ್ಣವಲ್ಲಿ ಮಠ)
Follow us on

‘ಬೇಡ್ತಿ ನದಿ ತಿರುವುʼ ಯೋಜನೆ ಕುರಿತು ಕಳೆದ ವಾರ ಶಿರಸಿಯಲ್ಲಿ ಒಂದು ಸಮಾಲೋಚನ ಸಭೆ ಏರ್ಪಾಟಾಗಿತ್ತು. ಶಿರಸಿ ಸಮೀಪದ ಸೋಂದಾ ಸ್ವರ್ಣವಲ್ಲಿ ಮಠ ಅದನ್ನು ಆಯೋಜಿಸಿತ್ತು. ನಾಡಿನ ‘ಹಸಿರು ಸ್ವಾಮಿʼ ಎಂದೇ ಖ್ಯಾತಿ ಪಡೆದ ಗಂಗಾಧರೇಂದ್ರ ಸ್ವಾಮೀಜಿಯವರ ಆಮಂತ್ರಣದ ಮೇರೆಗೆ  ವಿಜ್ಞಾನ ಬರಹಗಾರ ನಾಗೇಶ ಹೆಗಡೆ ‘ದಿಕ್ಸೂಚಿ ಭಾಷಣʼ ಮಾಡಿದ್ದರು. ಉತ್ತರ ಕನ್ನಡದ ಜೀವ ನದಿಗಳಾದ ಬೇಡ್ತಿ-ವರದಾ-ಅಘನಾಶಿನಿಗಳ ನದಿ ಜೋಡಣೆ, ತಿರುವು ವಿರೋಧಿಸಿ ನಡೆದ ಸಭೆಯಲ್ಲಿ ಈ ಯೋಜನೆಗಳ ವಿರುದ್ಧ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ನಾಗೇಶ ಹೆಗಡೆ ಅವರ ಭಾಷಣದ ಅಕ್ಷರ ರೂಪವನ್ನು ಅವರ ಅನುಮತಿಯ ಮೇರೆಗೆ ಟಿವಿ9 ಕನ್ನಡ ಡಿಜಿಟಲ್ ಪ್ರಕಟಿಸುತ್ತಿದೆ. 

ಬೇಡ್ತಿ ಪರಿಸರದ ಬಗ್ಗೆ ಮಾತಾಡುವುದೇನೂ ಉಳಿದಿಲ್ಲ. ಸದರಿ ನದಿಗೆ ಈ ಕಂಟಕ ಮೂರನೆಯ ಬಾರಿ ಬರುತ್ತಿದೆ. ಸಭೆಗೆ ಬಂದವರಲ್ಲಿ ಬಹುಪಾಲು ಹಿರಿಯರು ಇಂಥ ಭಾಷಣಗಳನ್ನು ಅನೇಕ ಬಾರಿ ಕೇಳಿದ್ದಾರೆ. ಲೇಖನಗಳನ್ನೂ ಓದಿದ್ದಾರೆ. ಹೊಸದೇನು ಹೇಳುವುದು? ನದಿಯನ್ನು ತಿರುಗಿಸಿ ಬಯಲುಸೀಮೆಗೆ ಒಯ್ದರೆ ಏನೇನು ಆಗುತ್ತದೆ ಎಂಬುದನ್ನು ವಿವರಿಸಲು ಹೇಗೂ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ ಬಂದಿದ್ದಾರೆ. ಅದರ ಬಗ್ಗೆ ಕೂಡ ಮಾತಾಡುವಂತಿಲ್ಲ. ಇನ್ನು ಇಡೀ ಯೋಜನೆಯ ಆರ್ಥಿಕ ಲಾಭನಷ್ಟದ ಬಗ್ಗೆ ಮಾತಾಡಲು ಶಿವಮೊಗ್ಗದ ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಮ್‌. ಕುಮಾರಸ್ವಾಮಿ ಬಂದಿದ್ದಾರೆ. ಅದನ್ನೂ preempt ಮಾಡುವಂತಿಲ್ಲ. ಉಳಿದಂತೆ ಪರಿಸರ ರಕ್ಷಣೆಯ ಧಾರ್ಮಿಕ/ ದಾರ್ಶನಿಕ ವಿಚಾರಗಳ ಬಗ್ಗೆ ಮಾತಾಡಲು ಸ್ವತಃ ಸ್ವಾಮೀಜಿ ಪಕ್ಕದಲ್ಲಿ ಆಸೀನರಾಗಿದ್ದಾರೆ.
ನನಗೆ ಹೇಳಲು ಏನು ಉಳಿದಿದೆ? ಅದೂ ದಿಕ್ಸೂಚಿ ಭಾಷಣ ಮಾಡಲು?

“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ಎಂಬ ಮಾತು ಭಗವದ್ಗೀತೆಯಲ್ಲಿ ಬರುತ್ತದೆ.  ಇಲ್ಲಿ ಸ್ವಧರ್ಮ ಎಂದರೆ, ಬೇರೆಯವರಿಗೆ ತೊಂದರೆ ಆಗದಂತೆ, ಮುಂದಿನ ಪೀಳಿಗೆಗೂ ಕಂಟಕ ಬಾರದಂತೆ ನನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬದುಕಿ ಬಾಳುವುದು.
ಈ ಧರ್ಮವನ್ನು ಪಾಲಿಸಬೇಕೆಂದರೆ, ಬೇಡ್ತಿ ಸೇರಿದಂತೆ ನನ್ನ ಬದುಕಿಗೆ ಆಸರೆ ಕೊಟ್ಟ ಎಲ್ಲ ಘಟಕಗಳನ್ನೂ ರಕ್ಷಣೆ ಮಾಡುವುದು. ಬೇಡ್ತಿ ಈಗಲೂ ಹರಿಯುತ್ತಿರಲು ಕಾರಣ ಏನೆಂದರೆ ಭೂಮಿಯೊಳಗಿನ ಇರುವೆ ಗೆದ್ದಲುಗಳಿಂದ ಹಿಡಿದು ಗಿಡಮರ, ಉಡ-ಪಡ, ಗಾಳಿಯಲ್ಲಿನ ಜೇನು-ದುಂಬಿ, ಆಕಾಶದಲ್ಲಿನ ಗಿಡುಗ, ಮಂಗಟ್ಟೆ ಪಕ್ಷಿ ಎಲ್ಲವೂ ತಂತಮ್ಮ ಧರ್ಮವನ್ನು ಪಾಲಿಸುತ್ತಿವೆ (ಇರುವೆ/ಗೆದ್ದಲುಗಳು ಎಕರೆಗೆ ಲಕ್ಷಾಂತರ ರಂದ್ರ ಮಾಡಿದ್ದರಿಂದಲೇ ನೀರು ಇಂಗುತ್ತಿದೆ). ಈ ವನಸಂಪದ ಹಾಳಾಗದಂತೆ ನೋಡಿಕೊಳ್ಳುವುದು ನನ್ನ ಧರ್ಮ. ಇದು ನನ್ನ ಜಾಗತಿಕ ಹೊಣೆಗಾರಿಕೆಯೂ ಹೌದು. ಏಕೆಂದರೆ ಈ ಪಶ್ಚಿಮ ಘಟ್ಟಗಳ ಪ್ರತಿಯೊಂದು ಜೀವಜಂತುವೂ ಇಡೀ ಪೃಥ್ವಿಯ ಆಸ್ತಿ. ನಾನು ಮತ್ತು ನೀವು ಬಿಟ್ಟರೆ ಈ ಅದ್ಭುತ ವನಸಂಪದದ ರಕ್ಷಣೆಗೆ ಬಿಹಾರ, ಹರ್ಯಾಣ, ರಷ್ಯ, ಅಮೆರಿಕ, ಜಪಾನಿನ ಜನ ಬರಲಾರರು. ನಾವೇ ರಕ್ಷಣೆ ಮಾಡಬೇಕು. ಕೊನೆಯ ಉಸಿರಿರುವವರೆಗೂ ಅದು ನಮ್ಮ ಧರ್ಮವಾಗಬೇಕು. ಭೂಗ್ರಹದ ಒಳಿತಿಗಾಗಿ; ಮತ್ತು ಅದರಲ್ಲೇ ಅಡಗಿದ ನಮ್ಮ ಸ್ವಾರ್ಥಕ್ಕಾಗಿ.
ಇನ್ನು ʼʼಪರಧರ್ಮೋ ಭಯಾವಹಃ” ಎಂಬ ಮಾತಿಗೆ ನನ್ನ ಅರ್ಥ ಹೀಗಿದೆ: ಈ ವನಸಿರಿಯಲ್ಲಿ ತಮಗೂ ಪಾಲು ಬೇಕು ಎಂದು ಹೊರಗಿನವರು ದಾಳಿಗೆ ಬಂದಾಗ ನಾವು ಎಚ್ಚರಿರಬೇಕು. ನಮಗೆ ಅವರ ಉದ್ದೇಶದ ಬಗ್ಗೆ ಭಯ, ಸಂಶಯಗಳಿರಬೇಕು. ಅವರಿಗೆ ಬಾಯಾರಿಕೆ ಆಗಿದ್ದರೆ ನಾವು ನೀರನ್ನು ಕೊಡೋದು ನಮ್ಮ ಧರ್ಮ. ಕೊಡೋಣ. ಆದರೆ ಅವರಲ್ಲಿ ‘ದಾಹʼ ಇದ್ದರೆ ನಾವು ಜಾಗೃತರಾಗಬೇಕು.

ಇಂಥ ಯೋಜನೆಗಳಲ್ಲಿ ಯಾರ ಯಾರ ದಾಹ ಹೇಗಿರುತ್ತದೆ ಎಂಬುದನ್ನು ನಾನು ಹೇಳುತ್ತೇನೆ. ಅವರಿಗೆ ನೀರು ಮುಖ್ಯ ಅಲ್ಲವೇ ಅಲ್ಲ. ಅಣೆಕಟ್ಟು ಕಟ್ಟಲು ಗುತ್ತಿಗೆ ಬೇಕು. ಅದಕ್ಕೆಂದು ಗ್ರಾನೈಟ್‌ ಗಣಿಗಾರಿಕೆ, ಡೈನಮೈಟ್‌- ಡೀಸೆಲ್ ಪೂರೈಕೆ, ಮರಳು ಸಾಗಣೆ, ಮರಗಳ ಸಾಗಾಟ, ಸಿಮೆಂಟ್‌ ಕಾಂಕ್ರೀಟ್‌ ಪೂರೈಕೆ, ಲೇಬರ್‌ ಪೂರೈಕೆ, ರಸ್ತೆ-ಟೌನ್‌ಶಿಪ್‌ ನಿರ್ಮಾಣಕ್ಕೆ ಗುತ್ತಿಗೆ ಇವೆಲ್ಲ ಆಗಬೇಕು. ಅವೆಲ್ಲವುಗಳನ್ನು ನಿಭಾಯಿಸಲೆಂದು ಸಾವಿರಾರು ಜೆಸಿಬಿ, ಅರ್ಥಮೂವರ್‌ಗಳ ಮೇಲೆ ಹಣ ಹೂಡಿದವರಿಗೆ ಆದಾಯ ಬೇಕು .ಇದಕ್ಕೆ ಚಿಕ್ಕದೊಂದು ಉದಾಹರಣೆ ಇಲ್ಲೇ ಯಲ್ಲಾಪುರದಲ್ಲಿದೆ. ಇದೇ ಬೇಡ್ತಿ ನದಿಯ ನೀರನ್ನು ಪಟ್ಟಣವಾಸಿಗಳಿಗೆ ಕುಡಿಯಲು ಒದಗಿಸುವ ಯೋಜನೆಯಲ್ಲಿ 26 ಕೋಟಿ ವೆಚ್ಚವಾಗಿ, ಜನರು ಮರೆತೂ ಬಿಟ್ಟಿದ್ದಾರೆ. ನೀರು ಮಾತ್ರ ಇಲ್ಲ. ಮುಂದೆ ಅಕಸ್ಮಾತ್‌ ಬೇಡ್ತಿಯ ನೀರು ಗದಗ್‌, ಬಳ್ಳಾರಿ ಜಿಲ್ಲೆಗಳಿಗೆ ಹರಿಯಿತು ಅನ್ನಿ. ಅಲ್ಲಿ ಬೇರೊಂದು ಶೋಷಣಾ ಪರ್ವ ಶುರುವಾಗುತ್ತದೆ. ರೈತರ ಕಲ್ಯಾಣ ಈ ನೀರಾವರಿಯ ಗುರಿ ಅಲ್ಲವೇ ಅಲ್ಲ. ಬದಲಿಗೆ ನೀರಾವರಿ ಭೂಮಿಗೆ ರಸಗೊಬ್ಬರ, ಪಂಪ್‌ಸೆಟ್‌, ಹೈಬ್ರಿಡ್‌ ಬೀಜ, ಕೀಟನಾಶಕ, ಟ್ರ್ಯಾಕ್ಟರ್‌ ಟಿಲ್ಲರ್‌, ಮಾರ್ಕೆಟ್‌ ಏಕಸ್ವಾಮ್ಯ, ಬ್ಯಾಂಕಿಂಗ್‌ ನೆರವು, ಬೆಳೆವಿಮೆ ಇತ್ಯಾದಿಗಳನ್ನು ಒದಗಿಸುವ ಕಂಪನಿಗಳಿಗೆ ಝಣಿಝಣಿ ರೊಕ್ಕ ಬೇಕು.

ಬೇಡ್ತಿ ನದಿಯ ದೃಶ್ಯ

ಇಂಥ ಕಂಪನಿಗಳಿಗೆ ಸುಖಸೌಲಭ್ಯ ಒದಗಿಸುತ್ತ ಇದುವರೆಗೆ ಮೂರುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಾವರಿ ವ್ಯವಸ್ಥೆಯಲ್ಲಿ ಕಂಗೆಟ್ಟವರ ಸಂಖ್ಯೆಯೇ ದೊಡ್ಡದಿದೆ. ಅವರ ಹಣೆಬರಹವನ್ನು ನಿರ್ಧರಿಸಿದ ಕಂಪನಿ ಸಿಇಓಗಳು, ಎಂಜಿನಿಯರ್‌ಗಳು, ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ನಮ್ಮಲ್ಲಿಲ್ಲ. ನಮಗೆ ಇಂಥವರ ಹುನ್ನಾರದ ಬಗ್ಗೆ ಭಯ, ಶಂಕೆ ಇರಬೇಕು. ಹುಬ್ಬಳ್ಳಿ, ಧಾರವಾಡದ ಜನರ ಬಾಯಾರಿಕೆ ನೀಗಿಸಲೆಂದು ಮಹಾದಾಯಿ ನದಿ ತಿರುಗಿಸುವ ಯೋಜನೆ ಗೊತ್ತಲ್ಲ? ಕೋಪಗೊಂಡ ಗೋವಾದ ಜನರು ಒಂದು ಮಹತ್ವದ ಸಂಗತಿಯನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿದ್ದರು: ಅದೇನೆಂದರೆ, ೧೬ ಸಾವಿರ ಕುಟುಂಬಗಳಿಗೆ ಸಾಲುವಷ್ಟು ನೀರನ್ನು ಇದೇ ಅವಳಿ ನಗರಗಳ ಮಧ್ಯೆ ಇರುವ ಪೆಪ್ಸಿ ಕಂಪನಿಗೆ ಸರಕಾರ ಕೊಡುತ್ತಿದೆ ಅಂತ. ನನಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ಇದೇ ಜಂಟಿನಗರ ಪ್ರತಿದಿನವೂ ಆರು ಕೋಟಿ ಲೀಟರ್‌ ನೀರನ್ನು ಕೊಳಕು ಮಾಡಿ, ಉಣಕಲ್‌ ಕೆರೆಯ ಜೀವಕೋಟಿಯ ಉಸಿರುಗಟ್ಟಿಸುತ್ತಿದೆ. ಇಂಥ ನಗರ ಪಾಲಿಕೆಗಳಿಗೆ ಇನ್ನಷ್ಟು ನೀರು ಕೊಡಲು ಹೊರಟವರ ಬಗ್ಗೆ ಭಯ, ಶಂಕೆ ಇರಬೇಕು.

ನಗರಗಳ ಕೊಳಚೆ ನೀರಿನ ರೊಚ್ಚೆಯಿಂದ ವಿದ್ಯುತ್ತನ್ನು ಉತ್ಪಾದಿಸಿ ಅದೇ ಶಕ್ತಿಯಿಂದ ಅದೇ ನೀರನ್ನು ಶುದ್ಧೀಕರಿಸಬಲ್ಲ ಯಂತ್ರವನ್ನು ಸೆನೆಗಾಲ್‌ ದೇಶದಲ್ಲಿ ಬಿಲ್‌ ಗೇಟ್ಸ್‌ ಸ್ಥಾಪಿಸಿದ್ದಾರೆ. ಕೊಳಚೆಯಿಂದ ಬಂದ ನೀರನ್ನು ಗ್ಲಾಸಿನಲ್ಲಿ ತುಂಬಿಸಿ ಆತ ಕುಡಿಯುವ ದೃಶ್ಯ ಕೂಡ ಯೂಟ್ಯೂಬಿನಲ್ಲಿ ಲಭ್ಯವಿದೆ. ನಮೀಬಿಯಾ ದೇಶದ ಭಣಗುಡುವ ರಾಜಧಾನಿಯಲ್ಲಿ ಚರಂಡಿ ನೀರನ್ನೇ ಮರುಬಳಕೆ ಮಾಡಿ ಕುಡಿಯಲು ಬಳಸುವ ವ್ಯವಸ್ಥೆ ಇದೆ. ಸಿಂಗಪುರದಲ್ಲೂ ಚರಂಡಿ ನೀರನ್ನು ಸಂಸ್ಕರಿಸಿ NeWater‌ ಹೆಸರಿನಲ್ಲಿ ಬಾಟಲಿಯಲ್ಲಿ ಒದಗಿಸಲಾಗುತ್ತಿದೆ. ಅದೇ ನಿಜವಾದ ʼಮಲ-ಪ್ರಭʼ. ಅಂಥ ಯೋಜನೆಗಳನ್ನು ನೋಡಲೆಂದು ಸರಕಾರಿ ವೆಚ್ಚದಲ್ಲಿ ಪ್ರವಾಸ ಹೋಗಿ ಬಂದು, ಆಮೇಲೆ ನದಿ ತಿರುಗಿಸುವ ಘಾತುಕ ಯೋಜನೆಗಳಿಗೆ ಸಹಿ ಹಾಕುವ ಅಧಿಕಾರಿಗಳ ಬಗ್ಗೆ ನಮಗೆ ಭಯ, ಶಂಕೆ ಇರಬೇಕು.

‘ಮಲಪ್ರಭಾ ನದಿಯ ನೀರು ʼಹುಬ್ಬಳ್ಳಿ-ಧಾರವಾಡಕ್ಕೆ ಸಾಲುತ್ತಿಲ್ಲ -ಆದ್ದರಿಂದ ಮಹಾದಾಯಿಯನ್ನು ಮಲಪ್ರಭಾಕ್ಕೆ ತಿರುಗಿಸಬೇಕುʼ ಅಂತ ನ್ಯಾಯಾಲಯಗಳಲ್ಲಿ ವಕೀಲರು ವಾದ ಮಾಡುತ್ತಿದ್ದಾರೆ. ಅಸಲೀ ಸ್ಥಿತಿ ಏನೆಂದರೆ ಮಲಪ್ರಭಾದ ಎರಡೂ ದಂಡೆಗಳಲ್ಲಿ ಪಂಪ್‌ಸೆಟ್‌ ಇಟ್ಟು ಕಬ್ಬಿನಗದ್ದೆಗಳಿಗೆ ಧಾರಾಳ ನೀರು ಹೋಗುತ್ತಿದೆ. ಎಷ್ಟು ನೀರುಣ್ಣಿಸಿದರೆ ಕಬ್ಬಿಗೆ ಒಳ್ಳೆಯದು ಎಂಬುದನ್ನು ಯಾರೂ ರೈತರಿಗೆ ತಿಳಿಸಿಲ್ಲ.
ವಿಶ್ವಸಂಸ್ಥೆಯ ಮಾನದಂಡದ ಪ್ರಕಾರ ಪ್ರತಿ ಕಿಲೊ ಸಕ್ಕರೆಗೆ ಬೇಕಾದ ಕಬ್ಬನ್ನು ಬೆಳೆಯಲು ೧೫೦೦ ಲೀಟರ್‌ ಸಾಕು. ನಮ್ಮವರು ೨೪೦೦ ಲೀಟರ್‌ ನೀರು ಸುರಿಯುತ್ತಿದ್ದಾರೆ. ಅದರಿಂದ ಸಕ್ಕರೆ ಇಳುವರಿ ಕಡಿಮೆ ಆಗುತ್ತಿದ್ದರೂ ಕಾರ್ಖಾನೆ ಮಾಲಿಕರು ರೈತರಿಗೆ ಪಾಠ ಹೇಳುತ್ತಿಲ್ಲ; ಬದಲಿಗೆ ರಸಗೊಬ್ಬರ, ಕೀಟನಾಶಕಗಳ ಜಾಹೀರಾತುಗಳು ಅಲ್ಲೆಲ್ಲ ರಾರಾಜಿಸುತ್ತಿವೆ. ಬೋರ್‌ವೆಲ್‌ ಕಂಪನಿಗಳು ಭರ್ಜರಿ ಸಂಪಾದನೆ ಮಾಡಿಕೊಳ್ಳುತ್ತಿವೆ.

ನಮ್ಮ ಸರಕಾರ ಕೃಷಿ ವಿಜ್ಞಾನಿಗಳನ್ನು ರೈತರ ಬಳಿ ಕಳಿಸುವ ಬದಲು ವಕೀಲರನ್ನು (ಗಂಟೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ) ಸರ್ವೋಚ್ಚ ನ್ಯಾಯಾಲಯಕ್ಕೆ ಕಳಿಸುತ್ತಿದೆ. ಹಸುರುಶಾಲು ಹೊದ್ದವರನ್ನು ರಸ್ತೆಯಲ್ಲಿ ಕುಣಿಸುತ್ತಿದೆ. ಅಂಥ ರಾಜಕೀಯ ಧೋರಣೆಗಳ ಬಗ್ಗೆ ನಮಗೆ ಭಯ, ಶಂಕೆ ಇರಬೇಕು. ಹೀಗೆ ನದಿ ತಿರುಗಿಸುವ ಯತ್ನದಲ್ಲಿ ಏನೇನು ಭಾನಗಡಿ ಆಗಿದೆ ನೋಡಿ: ಉತ್ತರ ಕನ್ನಡ ಜಿಲ್ಲೆಗಿಂತ ನಾಲ್ಕು ಪಟ್ಟು ಹೆಚ್ಚು ವಿಸ್ತಾರವಾಗಿದ್ದ Aral Sea ಎಂಬ ಸಮುದ್ರವನ್ನೇ ರಷ್ಯನ್ನರು ಒಣಗಿಸಿದ್ದಾರೆ. ಅದರ ದಯನೀಯ ಸ್ಥಿತಿ ಕುರಿತು ಬಿಬಿಸಿ ಸಾಕ್ಷ್ಯಚಿತ್ರವೊಂದು ಯೂಟ್ಯೂಬ್‌ನಲ್ಲಿದೆ. ಆ ಸಮುದ್ರದಲ್ಲಿ ಅರ್ಲು‌ (ಕೆಸರು) ಕೂಡ ಒಣಗಿದೆ.  ಆಫ್ರಿಕದ ಐದು ರಾಷ್ಟ್ರಗಳಿಗೆ ನೀರೊದಗಿಸುತ್ತಿದ್ದ ಚಾಡ್‌ ಸರೋವರವನ್ನು ನೀರಾವರಿ ಎಂಜಿನಿಯರುಗಳು ಒಣಗಿಸಿದ್ದಾರೆ. ಅತಿ ನೀರೆತ್ತಿದ್ದರಿಂದ ಚೀನಾದ ಅತಿ ದೊಡ್ಡ ಪೊಯಾಂಗ್‌ ಸರೋವರ ಬತ್ತಿಹೋಗಿದೆ. ಇತ್ತ ನಮಗೆಲ್ಲ ಅಷ್ಟು ಪವಿತ್ರವಾಗಿದ್ದ ಸಿಂಧೂ ನದಿ ಸಮುದ್ರಕ್ಕೆ ಸೇರುವ ಮೊದಲೇ ಒಣಗುತ್ತಿದೆ. ನಮ್ಮಲ್ಲೂ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳೆಲ್ಲ ಏಪ್ರಿಲ್‌-ಮೇ ತಿಂಗಳಲ್ಲಿ ಸಮುದ್ರಕ್ಕೆ ಸೇರಲಾರದೆ ಒಣಗಿ ನಿಂತಿರುತ್ತವೆ. ಸದ್ಗುರು ಜಗ್ಗಿ ವಾಸುದೇವ್‌ ತಮ್ಮ ಉಪನ್ಯಾಸಗಳಲ್ಲಿ ಇದನ್ನು ಪದೇ ಪದೇ ಹೇಳುತ್ತಿದ್ದಾರೆ.

ಯಲ್ಲಾಪುರ ಪಟ್ಟಣಕ್ಕೆ ನೀರು ಪೂರೈಸಲು ಬೇಡ್ತಿ ನದಿಗೆ ಕಟ್ಟಲಾದ ಒಡ್ಡು

ನಮ್ಮ ಪ್ರಧಾನಿ ಮೋದಿಯವರು ಹೇಳಿದ ಮಾತು ನನಗೆ ಇಲ್ಲಿ ನೆನಪಿಗೆ ಬರುತ್ತಿದೆ. “ಭಾರತದಲ್ಲಿ ಹರಿದು ಪಾಕಿಸ್ತಾನದ ಸಿಂಧೂ ನದಿಗೆ ಸೇರುವ ಸತ್ಲೆಜ್‌, ರಾವಿ, ಬಿಯಾಸ್‌ ನದಿಗಳ ಪ್ರತಿ ತೊಟ್ಟು ನೀರೂ ಭಾರತದಲ್ಲೇ ಬಳಕೆಯಾಗುವಂತೆ ಮಾಡುತ್ತೇನೆ” ಎಂದು ಅವರು 2016 ರಲ್ಲಿ ಹೇಳಿದ್ದರು. ಒಂದು ದೇಶದ ಮುಖ್ಯಸ್ಥರಾಗಿ, ತಾಯ್ನಾಡಿನ ಒಳಿತಿಗಾಗಿ ಅವರು ಹೇಳುವುದನ್ನು ನಾನು ಗೌರವಿಸುತ್ತೇನೆ. ನನ್ನಂಥ ಚಿಕ್ಕ ವ್ಯಕ್ತಿಯ ಮಟ್ಟಿಗೆ ಈ ಪಶ್ಚಿಮ ಘಟ್ಟವೇ ತಾಯ್ನಾಡು. ‘ಸ್ವದೇಶೋ ಭುವನತ್ರಯಂ’ ಎಂಬಂತೆ ಈ ನೆಲ, ಈ ಆಕಾಶ, ಈ ಭೂತಲ -ಈ ಮೂರೇ ನನ್ನ ಪಾಲಿಗೆ ಸ್ವದೇಶ, ಇದೇ ತ್ರಿಭುವನ. ಇಲ್ಲಿ ಹರಿಯುವ ತೊಟ್ಟು ನೀರೂ ಇಲ್ಲಿನ ಜೀವಕೋಟಿಯ ಒಳಿತಿಗಾಗಿಯೇ ಇರಬೇಕು. ಹೊರಗಿನ ಯಾರದೋ ಹಿತಾಸಕ್ತಿಗೆ, ಯಾರದೋ ʼದಾಹʼಕ್ಕೆ, ಇನ್ಯಾರದೋ ದುಂದುವೆಚ್ಚಕ್ಕೆ ಅದನ್ನು ಒಯ್ಯುವುದನ್ನು ನೋಡಿಯೂ ಸುಮ್ಮನಿರುವುದು ನನ್ನ ಧರ್ಮಕ್ಕೆ ವಿರುದ್ಧವಾಗಿದೆ. ನಾನದನ್ನು ತಡೆಯಲು ಶಕ್ತಿಮೀರಿ ಯತ್ನಿಸುತ್ತೇನೆ.

ಗದಗ, ಬಳ್ಳಾರಿ, ಚಿತ್ರದುರ್ಗಗಳ ಬಯಲುಸೀಮೆಯಲ್ಲಿ ಬಾಯಾರಿದ ಭೂಮಿಯ ಬಗ್ಗೆ, ಜೀವಸಂಕುಲದ ಬಗ್ಗೆ ನನಗೆ ಅನುಕಂಪವಿದೆ. ಅಲ್ಲಿ ಮಳೆ ಸಾಕಷ್ಟು ಚೆನ್ನಾಗಿಯೇ ಬೀಳುತ್ತಿದೆ. ಆದರೆ ನೀರಿನನಿರ್ವಹಣೆಯಲ್ಲಿ ದೋಷವಿದೆ. ಇಸ್ರೇಲಿನಲ್ಲಿ ಬೀಳುವ ಮಳೆಗಿಂತ ಇಮ್ಮಡಿ ಮಳೆ ಗದಗ ಜಿಲ್ಲೆಯಲ್ಲಿ ಬೀಳುತ್ತಿದೆ (ಸರಾಸರಿ 710 ಮಿಲಿಮೀಟರ್‌). ಇಸ್ರೇಲಿನಲ್ಲಿ 350 ಮಿ.ಮೀ. ಮಳೆ ಬೀಳುವಲ್ಲೂ ಸಮೃದ್ಧ ಹಣ್ಣು, ತರಕಾರಿ, ಧಾನ್ಯ, ಗಡ್ಡೆಗೆಣಸನ್ನು ಬೆಳೆಯುತ್ತಾರೆ. ವಿದೇಶಗಳಿಗೆ ರಫ್ತು ಮಾಡುತ್ತಾರೆ. ನಮ್ಮಲ್ಲಿ ಮಳೆ ನೀರಿನ ಸದ್ಬಳಕೆಯ ಬಗ್ಗೆ ಜನರಿಗೆ ತಿಳಿಸಿಹೇಳುವ ಯಾವುದೇ ಯೋಜನೆಯೂ ಜಾರಿಯಲ್ಲಿಲ್ಲ.

ಪ್ರಧಾನಿ ಮೋದಿಯವರು ವಿಶ್ವ ‘ಜಲ ದಿನʼದ ಸಂದರ್ಭದಲ್ಲಿ ಒಂದೊಂದು ಹನಿ ನೀರಿನ ಸದುಪಯೋಗದ ಬಗ್ಗೆ ಮಾತಾಡಿದ್ದಾರೆ. Per drop more crop ಎಂಬ ಘೋಷಣೆಯನ್ನೂ ದೇಶದ ಜನಕ್ಕೆ ಕೊಟ್ಟಿದ್ದಾರೆ. ಅದನ್ನು ನಮ್ಮ ಬರಪೀಡಿತ ಜಿಲ್ಲೆಗಳ ಜನರಿಗೆ ತಿಳಿಸಿ ಹೇಳುವ ಕೆಲಸ ಆಗಬೇಕಿದೆ. ಆಕಾಶದಿಂದ ಬರುವ ನೀರು ಮತ್ತು ನಾವು ಬಳಸಿ ಚೆಲ್ಲುವ ನೀರೇ ನಮಗೆ ‘ಶಾಶ್ವತ ನೀರಾವರಿʼ ಒದಗಿಸಬೇಕೆ ವಿನಾ ‘ಸಮುದ್ರಕ್ಕೆ ಸೇರುವ ನೀರು ವ್ಯರ್ಥʼ ಎಂದೆಲ್ಲ ವ್ಯರ್ಥ ಪ್ರಲಾಪ ಮಾಡಬಾರದು. ಹಾಗೆ ಪ್ರಲಾಪಿಸುವವರ ಬಗ್ಗೆ ನಮಗೆ ಭಯ, ಶಂಕೆ ಇರಬೇಕು.
ಸಮುದ್ರಕ್ಕೆ ಸೇರಬೇಕಾದ ನೀರನ್ನು ನಾವು ತಡೆ ಹಿಡಿಯುತ್ತಿದ್ದರೆ ನಮ್ಮ ಸಮುದ್ರವೂ ಮುಂದೊಂದು ದಿನ Dead Sea (ಮೃತ ಸಮುದ್ರ) ಆದೀತೆಂಬ ಭಯ ನಮಗಿರಬೇಕು.

ಬರುತ್ತಿರುವ ಬಿಸಿ ಪ್ರಳಯದ ಸಂಕಟಗಳ ಬಗ್ಗೆ ವಿಜ್ಞಾನಿಗಳು ನೀಡುವ ಎಚ್ಚರಿಕೆಯನ್ನು ಪ್ರಧಾನಿಯವರೂ ಪುನರುಚ್ಚರಿಸುತ್ತಿದ್ದಾರೆ. ನಮ್ಮನ್ನು ಎಚ್ಚರಿಸುತ್ತಿದ್ದಾರೆ. ನಾಳೆ ಅದೆಂಥ ಅನಿಶ್ಚಿತ ಪರಿಸ್ಥಿತಿ ಬರಲಿದೆ ಎಂದರೆ, ಬೇಡ್ತಿ ನದಿ ಪೂರ್ತಿ ಒಣಗಬಹುದು; ಅಥವಾ ಗದಗ ಜಿಲ್ಲೆಯಲ್ಲಿ ಭಾರೀ ವರ್ಷಾಘಾತ ಆಗಬಹುದು. ಅಥವಾ ಎರಡೂ ಕಡೆ ಉಲ್ಟಾ ಆಗಬಹುದು. ಹೇಗೇ ಆದರೂ ಈ ಯೋಜನೆ ಹಳ್ಳ ಹಿಡಿಯುತ್ತದೆ. ಅದಕ್ಕೆ ಸುರಿದ (ನಮ್ಮ ತೆರಿಗೆಯ) ಹಣವೆಲ್ಲ ಯಾರ್ಯಾರದೋ ಬ್ಯಾಂಕ್‌ ಖಾತೆಗೆ ಸೇರುತ್ತದೆ. ನೀರಿನ ಬವಣೆ ಎಂದಿಗಿಂತ ತೀವ್ರವಾಗಬಹುದಾಗಿದೆ.

ಹರಿಯುವ ನೀರಿನ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಯುವಕನ ಉದಾಹರಣೆ ನಮ್ಮದೇ ಜಿಲ್ಲೆಯಲ್ಲಿದೆ. ಕಾಳಿನದಿಗೆ ಅಣೆಕಟ್ಟು ಕಟ್ಟುವುದರ ವಿರುದ್ಧ ಪ್ರತಿಭಟಿಸಲು ಹೋಗಿ ಜೀವ ತೆತ್ತ ಶಂಕರ ಭಾಗವತ ನನ್ನ ನೆನಪಿಗೆ ಬರುತ್ತಾನೆ. ʼಸ್ವಧರ್ಮೇ ನಿಧನಂ ಶ್ರೇಯಃʼ ಎಂಬ ಮಾತಿಗೆ ಅವನಂಥ ಅನುರೂಪ ಉದಾಹರಣೆ ಇಡೀ ದೇಶದಲ್ಲೇ ಬೇರೆಲ್ಲೂ ಇಲ್ಲ.

ಹಿರಿಯ ಪರಿಸರ ತಜ್ಞ, ವಿಜ್ಞಾನ ಬರಹಗಾರ ನಾಗೇಶ ಹೆಗಡೆ

ನ್ಯೂಝಿಲ್ಯಾಂಡ್‌ನ ‘ವಾಂಗಾನೂಯಿʼ ಎಂಬ ನದಿಗೆ ಅಲ್ಲಿನ ಸರಕಾರ ‘ಮಾನವ ಹಕ್ಕುʼ ನೀಡಿ ಘೋಷಣೆ ಹೊರಡಿಸಿದೆ. ಅದರ ಅರ್ಥ ಏನೆಂದರೆ, ಆ ನದಿಯನ್ನೂ ವ್ಯಕ್ತಿಯೆಂದು ಪರಿಗಣಿಸಬೇಕು. ಅದರ ಚಲನೆಯನ್ನು ನಿರ್ಬಂಧಿಸುವುದು, ಅದನ್ನು ತಿರುಚುವುದು, ಅದಕ್ಕೆ ಕೊಳೆ ಎರಚುವುದು, ಮೀನು ಶಿಕಾರಿಗೆಂದು ಅಲ್ಲಿ ಡೈನಮೈಟ್‌ ಸಿಡಿಸುವುದು ಇವೆಲ್ಲವೂ ಶಿಕ್ಷಾರ್ಹ ಅಪರಾಧವಾಗುತ್ತದೆ. ಮನುಷ್ಯನಿಗೆ ನೀಡಲಾದ ಎಲ್ಲ ಸ್ವಾತಂತ್ರ್ಯ-ಸಮ್ಮಾನಗಳೂ ಆ ನದಿಗೆ ಸಿಕ್ಕಿದೆ. ನಮ್ಮ ದೇಶದಲ್ಲಿ ಅಂಥ ಸಮ್ಮಾನಕ್ಕೆ ಅತ್ಯಂತ ಯೋಗ್ಯವಾದ ಎರಡು ನದಿಗಳು ನನ್ನ ಈ ಜಿಲ್ಲೆಯಲ್ಲೇ ಇವೆ . ಒಂದು ಅಘನಾಶಿನಿ. ಇನ್ನೊಂದು ಬೇಡ್ತಿ. ಅವೆರಡಕ್ಕೂ ಇದುವರೆಗೆ ಅಣೆಕಟ್ಟು ಹಾಕಿಲ್ಲ. ಔದ್ಯಮಿಕ ತ್ಯಾಜ್ಯಗಳು ಅದಕ್ಕೆ ಸೇರ್ಪಡೆಯಾಗುತ್ತಿಲ್ಲ. ಈ ನದಿಗಳಿಗೂ ‘ಮಾನವ ಹಕ್ಕುʼ ಗಳನ್ನು ಘೋಷಿಸಿ, ಅವುಗಳ ಪಾವಿತ್ರ್ಯ, ಸೌಂದರ್ಯ ಮತ್ತು ಘನತೆಯನ್ನು ಮುಂದಿನ ಪೀಳಿಗೆಗಳೂ ನೋಡುವಂತೆ ಮಾಡಿ ಎಂದು ನಾನು ಸರಕಾರವನ್ನು ಕೋರುತ್ತೇನೆ.

ಜೊತೆಗೆ, ʼಸ್ವದೇಶʼ ಮತ್ತು ʼಸ್ವಧರ್ಮʼದ ನಿಜವಾದ ಅರ್ಥವನ್ನು ಜನರಿಗೆ ತಿಳಿಸುವಂತೆ ಪಂಡಿತೋತ್ತಮರನ್ನು, ಚಿಂತಕರನ್ನು ಕೋರುತ್ತೇನೆ.
ಕೊನೆಯದಾಗಿ ಹೇಳಬೇಕಾದ ಮಾತೊಂದಿದೆ: ಇಂದು, ಮಾರ್ಚ್‌ 24. ಅಂದರೆ ಪ್ರಧಾನಿ ಮೋದಿಯವರು ಲಾಕ್‌ಡೌನ್‌ ಘೋಷಣೆ ಮಾಡಿ ಇಂದಿಗೆ ಸರಿಯಾಗಿ ಒಂದು ವರ್ಷ ಕಳೆಯಿತು. ಆ ದಿನಾಂಕ ನಮಗೆ ಚೆನ್ನಾಗಿ ನೆನಪಿರುವಂತೆ ಈ ಪಶ್ಚಿಮ ಘಟ್ಟ ಪ್ರದೇಶಕ್ಕೂ ವಿಭಿನ್ನ ರಿತಿಯ ಲಾಕ್‌ಡೌನ್‌ ಘೋಷಣೆ ಮಾಡಬೇಕು. ಹೊರಗಿನವರ ಹಸ್ತಕ್ಷೇಪದಿಂದಾಗಿ ಪಶ್ಚಿಮ ಘಟ್ಟ ರೋಗಗ್ರಸ್ತ ಆಗಬಾರದು. ಅದರ ಪಾವಿತ್ರ್ಯಕ್ಕೆ, ಅದರ ಅಪೂರ್ವ ನಿಸರ್ಗ ಸಂಪದಕ್ಕೆ ಧಕ್ಕೆ ಬರಬಾರದು.

ಇದು ನಮ್ಮ ‘ಸ್ವದೇಶʼ; ಇದರ ರಕ್ಷಣೆ ನಮ್ಮ ‘ಸ್ವಧರ್ಮʼ.
ಇದು ಈ ಕಾಲದ ಭಗವದ್ಗೀತ.

(ಈ ಬರಹ ಬೇಡ್ತಿ-ವರದಾ -ಅಘನಾಶಿನಿ ನದಿ ತಿರುವು, ಜೋಡಣೆ ಯೋಜನೆ ಕುರಿತು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ  ಹಿರಿಯ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಮಾಡಿದ ‘ದಿಕ್ಸೂಚಿ ಭಾಷಣʼ. ಅವರ ಅನುಮತಿ ಮೇರೆಗೆ ಟಿವಿ9 ಕನ್ನಡ ಡಿಜಿಟಲ್ ಈ ಬರಹವನ್ನು ಪ್ರಕಟಿಸಿದೆ.)

ಇದನ್ನೂ ಓದಿ: ಬಯಲುಸೀಮೆಯಲ್ಲಿ ನೀರಿನ ಸಮಸ್ಯೆಗೆ ಪರ್ಯಾಯ ಕ್ರಮ ಕೈಗೊಳ್ಳಲಿ, ಮಲೆನಾಡಿನ ನದಿಗಳಿಗೆ ಕೈಹಾಕಬೇಡಿ; ಬೇಡ್ತಿ ವರದಾ ಅಘನಾಶಿನಿ ನದಿ ಜೋಡಣೆಗೆ ಪ್ರಬಲ ವಿರೋಧ

ಬೇಡ್ತಿ-ವರದಾ ನದಿ ಜೋಡಣೆ: ಕುಡಿಯುವ ನೀರಿನ ಯೋಜನೆಯೋ? ಪರಿಸರ ನಿರ್ನಾಮದ ತಂತ್ರವೋ?

ನೀರೇ ಇರದ ಬೇಡ್ತಿಯಿಂದ ಯಲ್ಲಾಪುರಕ್ಕೆ ಕುಡಿಯುವ ನೀರಿನ ಯೋಜನೆ; ಬೇಡ್ತಿ-ವರದಾ ಜೋಡಣೆ ಎಷ್ಟು ಸರಿ?

(Senior Science writer Nagesh Hegde wrotes oppose Bedti Varada Aghanashini river joining project in Sirsi Uttara Kannada)