ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಭಾರಿ ಕೊರತೆ: ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು, ಇಲ್ಲಿದೆ ವಿವರ
Karnataka Dam Water Level: ರಾಜ್ಯದಲ್ಲಿ ಮಳೆ ಕೊರತೆಯ ತೀವ್ರತೆ ಇನ್ನೇನು ಬೇಸಿಗೆ ಆರಂಭವಾಗುವ ಮುಂಚಿತವಾಗಿಯೇ ಗಮನಕ್ಕೆ ಬರಲಾರಂಭಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಕೆಎಆರ್ಎಸ್, ಕಬಿನಿ, ಹೇಮಾವತಿ ಸೇರಿದಂತೆ ಯಾವ ಅಣೆಕಟ್ಟೆಯಲ್ಲಿ ಎಷ್ಟು ನೀರಿದೆ? ಕಳೆದ ವರ್ಷಕ್ಕೆ ಹೋಲಿಸಿದರೆ ಎಷ್ಟು ಕೊರತೆ ಇದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 5: ಮಳೆ ಕೊರತೆಯ ಕಾರಣ ಕಾವೇರಿ ಜಲಾನಯನ ಪ್ರದೇಶದ (Cauvery Basin) ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಇಳಿಕೆಯಾಗಿದೆ. ಫೆಬ್ರವರಿ 4, ಭಾನುವಾರದ ವೇಳೆಗೆ ಕೃಷ್ಣ ರಾಜ ಸಾಗರ (KRS Dam) ಜಲಾಶಯದಲ್ಲಿ ನೀರಿನ ಸಂಗ್ರಹವು ಕೇವಲ ಶೇ 35, ಕಬಿನಿ ಅಣೆಕಟ್ಟಿನಲ್ಲಿ ಶೇ 66, ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟುಗಳಲ್ಲಿ ತಲಾ ಶೇ 30 ರಷ್ಟಿದೆ ಎಂಬುದು ತಿಳಿದುಬಂದಿದೆ.
ಅಲ್ಲದೆ, ಕೆಆರ್‌ಎಸ್ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ದಿನದ ಸಂಗ್ರಹಕ್ಕೆ ಹೋಲಿಸಿದರೆ ಶೇ 51ರಷ್ಟು ಮತ್ತು ಹೇಮಾವತಿಯಲ್ಲಿ ಶೇ 34ರಷ್ಟು ಕಡಿಮೆ ಸಂಗ್ರಹ ಕಂಡುಬಂದಿರುವುದಾಗಿ ವರದಿಯಾಗಿದೆ.
ಭಾನುವಾರದ ವರದಿಯ ಪ್ರಕಾರ, ಕೆಆರ್‌ಎಸ್ ಅಣೆಕಟ್ಟಿನ ನೀರಿನ ಮಟ್ಟ 91.84 ಅಡಿಗಳಷ್ಟಿತ್ತು. ಅದರ ಗರಿಷ್ಠ ಸಂಗ್ರಹ ಸಾಮರ್ಥ್ಯ 124.80 ಅಡಿ ಆಗಿದೆ. ಕಬಿನಿ ಅಣೆಕಟ್ಟಿನಲ್ಲಿ 2,272.44 (ಸಂಪೂರ್ಣ ಜಲಾಶಯದ ಮಟ್ಟ 2,284 ಅಡಿ) ಅಡಿ ವರೆಗೆ ನೀರು ಇತ್ತು. ಹೇಮಾವತಿ ಅಣೆಕಟ್ಟಿನಲ್ಲಿ 2,891.39 ಅಡಿ ನೀರು (ಅದರ ಸಾಮರ್ಥ್ಯ 2,922 ಅಡಿಗಳು) ಮತ್ತು ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಸಾಮರ್ಥ್ಯ 2,859 ಅಡಿಗಳಿಗೆ ಹೋಲಿಸಿದರೆ 2,831.61 ಅಡಿಗಳಷ್ಟಿತ್ತು.
ಸಂಗ್ರಹ ಸಾಮರ್ಥ್ಯದ ಪ್ರಕಾರ, ಕೆಆರ್‌ಎಸ್ ಅಣೆಕಟ್ಟಿನಲ್ಲಿ 17.08 ಟಿಎಂಸಿ ಅಡಿ (Tmcft) ನೀರು ಇದೆ. ಅದರ ಸಾಮರ್ಥ್ಯ 49.45 ಟಿಎಂಸಿ ಅಡಿ ಆಗಿದೆ. ಕಳೆದ ವರ್ಷ ಇದೇ ದಿನದಂದು 34.95 ಟಿಎಂಸಿ ಅಡಿ ಇತ್ತು.
ಹೇಮಾವತಿ ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ 37.10 ಟಿಎಂಸಿ ಅಡಿ ಆಗಿದ್ದರೆ ಸದ್ಯ 14.85 ಟಿಎಂಸಿ ಅಡಿ ಸಂಗ್ರಹ ಇದೆ. ಕಳೆದ ವರ್ಷ 22.34 ಟಿಎಂಸಿ ಅಡಿ ಇತ್ತು.
ಕಬಿನಿ ಜಲಾಶಯ 12.95 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿದ್ದು, 19.52 ಟಿಎಂಸಿ ಅಡಿ ಸಂಗ್ರಹ ಇದೆ. ಕಳೆದ ವರ್ಷ ಇದೇ ದಿನ 12.41 ಟಿಎಂಸಿ ಅಡಿ ಸಂಗ್ರಹ ಇತ್ತು. ಹಾರಂಗಿ ಡ್ಯಾಂ 3.42 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿದ್ದರೆ, 8.50 ಟಿಎಂಸಿ ಅಡಿ ಸಂಗ್ರಹ ಇದೆ. ಕಳೆದ ವರ್ಷ 3.29 ಟಿಎಂಸಿ ಅಡಿ ಇತ್ತು.
ಇದನ್ನೂ ಓದಿ: ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ 2 ರಿಂದ 6ನೇ ಸ್ಥಾನಕ್ಕೆ ಇಳಿದ ಬೆಂಗಳೂರು
ತಮಿಳುನಾಡಿಗೆ ನೀರು ಬಿಡುವ ಮೊದಲು, 2023 ರ ಆಗಸ್ಟ್ 5 ರಂದು ಕೆಆರ್‌ಎಸ್ ಅಣೆಕಟ್ಟಿನ ಗರಿಷ್ಠ ನೀರಿನ ಮಟ್ಟ 113.44 ಅಡಿ, ಕಬಿನಿ 2,282.73 ಅಡಿ, ಹೇಮಾವತಿ 2,915.05 ಅಡಿ ಮತ್ತು ಹಾರಂಗಿ ಅಣೆಕಟ್ಟು 2,858.65 ಅಡಿ ಇತ್ತು.
ಮಳೆ ಕೊರತೆಯೇ ಮುಖ್ಯ ಕಾರಣ
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಶೇ 38 ರಷ್ಟು ಮಳೆ ಕೊರತೆ ಇತ್ತು. ಕಾವೇರಿಯಲ್ಲಿ ಜಲಾನಯನ ಪ್ರದೇಶದ ದಕ್ಷಿಣ ಒಳನಾಡಿನಲ್ಲಿ ಶೇ 31, ಮೈಸೂರಿನಲ್ಲಿ ಶೇ 1, ಮಲೆನಾಡು ಪ್ರದೇಶದಲ್ಲಿ ಶೇ 15, ಕೊಡಗಿನಲ್ಲಿ ಶೇ 10 ಮಳೆ ಕೊರತೆ ಇತ್ತು. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಶೇ 25 ರಷ್ಟು ಮಳೆ ಕೊರತೆ ಇತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ