ಮತ್ತೊಂದು ಪ್ರಕರಣದಲ್ಲಿ ರೇವಣ್ಣಗೆ ತಾತ್ಕಾಲಿಕ ರಿಲೀಫ್, ಒಂದು ದಿನದ ಮಟ್ಟಿಗೆ ಜಾಮೀನು ನೀಡಿದ ಕೋರ್ಟ್
ಸಂತ್ರಸ್ತೆ ಅಪಹರಣ ಆರೋಪ ಪ್ರಕರಣದಲ್ಲಿ ಜಾಮೀನು ಮೇಲೆ ಜೈನಿಂದ ಬಿಡುಗಡೆಯಾಗಿರುವ ಶಾಸಕ ಎಚ್ಡಿ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ರೇವಣ್ಣ ಅವರಿಗೆ ಕೋರ್ಟ್ ಒಂದು ದಿನದ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರು, (ಮೇ 16): ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ(Sexual assault case) ಸಂಬಂಧಿಸಿದಂತೆ ಶಾಸಕ ಎಚ್ಡಿ ರೇವಣ್ಣ (HD Revanna) ಅವರಿಗೆ ಮಧ್ಯಂತರ ಜಾಮೀನು (Bail) ಸಿಕ್ಕಿದೆ. ನಾಳೆ (ಮೇ 17( ಮಧ್ಯಾಹ್ನದವರೆಗೂ ಮಾತ್ರ ಜಾಮೀನು ನೀಡಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾಸನದ ಹೊಳೆನರಸೀಪುರದಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ರೇವಣ್ಣ, ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಾದ ಪ್ರತಿವಾದ ಆಲಿಸಿದ ಕೋರ್ಟ್, ಅಂತಿಮವಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶ್ಯೂರಿಟಿ, 5 ಲಕ್ಷ ರೂ. ಬಾಂಡ್ ಒದಗಿಸುವಂತೆ ಷರತ್ತು ವಿಧಿಸಿ ಮತ್ತೆ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ(ಮೇ 17) ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ಇದರೊಂದಿಗೆ ರೇವಣ್ಣಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಂತಾಗಿದೆ.
ವಾದ-ಪ್ರತಿವಾದ
ಜಾಮೀನು ನೀಡಬಹುದಾದ ಅಪರಾಧವಾಗಿರುವುದರಿಂದ ಆಕ್ಷೇಪಿಸುವಂತಿಲ್ಲ. ಆಕ್ಷೇಪ ಎತ್ತುವ ಲೋಕಸ್ ಸ್ಟಾಂಡಿ(ಅಧಿಕಾರ) ಎಸ್‌ಪಿಪಿಗೆ ಇಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಪರ ವಕೀಲ ಅರುಣ್ ಮನವಿ ಮಾಡಿದರು. ಇದಕ್ಕೆ ತಕರಾರು ಎತ್ತಿರುವ ಎಸ್‌ಐಟಿ, ಜಾಮೀನು ಅರ್ಜಿ ವಿಚಾರಣೆ ಈ ಕೋರ್ಟ್ ನಲ್ಲಿ ನಡೆಯುವಂತಿಲ್ಲ ಎಂದು ಜಾಮೀನು ಅರ್ಜಿಯ ಕಾನೂನುಬದ್ಧತೆ ಪ್ರಶ್ನಿಸಿದ ಎಸ್ ಪಿಪಿ ಜಾಯ್ನಾ ಕೊಥಾರಿ , ಈ ಪ್ರಕರಣದಲ್ಲಿ ಜಾಮೀನು ರಹಿತ ಸೆಕ್ಷನ್ ಗಳೂ ಇವೆ. ಹೀಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಆಕ್ಷೇಪಣೆ ಎತ್ತಿದ್ದು, ನ್ಯಾಯಾಂಗ ಬಂಧನಕ್ಕೆ ವಹಿಸಲು ಮನವಿ ಮಾಡಿದರು.
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲೂ ಮೊದಲನೇ ಆರೋಪಿ ಆಗಿರುವ ರೇವಣ್ಣ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಹಾಜಾರಾಗಿದ್ದರು. ನ್ಯಾಯಾಧೀಶರ ಮುಂದೆಯೇ ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೊಳೆನರಸೀಪುರದ ಕೇಸ್ ಜಾಮೀನುಸಹಿತ ಕೇಸ್ ಆಗಿದ್ದರೂ ವಶಕ್ಕೆ ಪಡೆಯಬಹುದು ಎಂಬ ಅನುಮಾನದಿಂದ ಕೋರ್ಟ್‌ಗೆ ಹಾಜರಾಗಿದ್ದರು. ಈ ಹಿಂದೆಯೂ ಬಂಧನದ ಬೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಎಸ್ಐಟಿ ಎಸ್‌ಪಿಪಿ, ಜಾಮೀನು ರಹಿತ ಪ್ರಕರಣಗಳನ್ನ ದಾಖಲಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟ ಬಳಿಕ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದಿದ್ದರು.
ಕಿಡ್ನ್ಯಾಪ್ ಕೇಸ್ನಲ್ಲಿ ರೇವಣ್ಣಗೆ ಮತ್ತೆ ಸಂಕಷ್ಟ?
ಮೈಸೂರಿನ ಕೆ.ಆರ್ ನಗರದ ಕಿಡ್ನ್ಯಾಪ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಾಮೀನು ರದ್ದು ಕೋರಿ ಎಸ್ಐಟಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ. ಯಾಕಂದರೆ, ಕಿಡ್ನ್ಯಾಪ್ ಪ್ರಕರಣದಲ್ಲಿ 2ನೇ ಆರೋಪಿ ಸತೀಶ್ ಬಾಬು ವಿಚಾರಣೆ ನಡೆಸಿರುವ ಎಸ್ಐಟಿಗೆ ಮಹತ್ವದ ಸಾಕ್ಷ್ಯಕಲೆಹಾಕಿದೆ. ಜೊತಗೆೆ ರೇವಣ್ಣ ವಿರುದ್ಧ ಬಲವಾದ ಸಾಕ್ಷ್ಯ ಕಲೆ ಹಾಕಲು ತಯಾರಿ ನಡೆಸಿದೆ. ಈ ಎಲ್ಲಾ ಅಂಶ ಮುಂದಿಟ್ಟು ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Thu, 16 May 24