ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈ ಹೈಅಲರ್ಟ್, ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ

ನೆರೆರಾಜ್ಯ ಕೇರಳದಲ್ಲಿ ಭೀತಿ ಹುಟ್ಟಿಸಿರುವ ಸಾಂಕ್ರಾಮಿಕ ‘ಶಿಗೆಲ್ಲಾ’ ಬ್ಯಾಕ್ಟೀರಿಯಾ ಸೋಂಕಿಗೆ ನಾಲ್ಕು ವರ್ಷದ ಮಗು ಬಲಿಯಾಗಿದ್ದು, 300ಕ್ಕೂ ಹೆಚ್ಚು ಮಕ್ಕಳಲ್ಲಿ ಲಕ್ಷಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ತೀವ್ರ ನಿಗಾ ವಹಿಸಿದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುವ ಈ ಕರುಳಿನ ಸೋಂಕಿನ ವಿರುದ್ಧ ಪೋಷಕರು ಕಟ್ಟುನಿಟ್ಟಿನ ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈ ಹೈಅಲರ್ಟ್, ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ
ಆರೋಗ್ಯ ಸಚಿವ ಯುಟಿ ಖಾದರ್
Image Credit source: tv9
Edited By:

Updated on: Jun 12, 2026 | 11:34 AM

ಬೆಂಗಳೂರು, ಜೂನ್ 12: ನೆರೆಯ ರಾಜ್ಯ ಕೇರಳದಲ್ಲಿ ಮಾರಣಾಂತಿಕ ಶಿಗೆಲ್ಲೋಸಿಸ್ (Shigella) ಸೋಂಕು ತೀವ್ರವಾಗಿ ಹರಡುತ್ತಿದ್ದು, ಪೋಷಕರಲ್ಲಿ ಭಾರಿ ಆತಂಕ ಮೂಡಿಸಿದೆ. ಕರುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕಿಗೆ ಈಗಾಗಲೇ ಕೇರಳದ ಕೋಝಿಕ್ಕೋಡ್‌ನಲ್ಲಿ ನಾಲ್ಕು ವರ್ಷದ ಬಾಲಕಿ ಬಲಿಯಾಗಿದ್ದಾಳೆ. ವಯನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಶಾಲಾ ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದ್ದು, ಇದುವರೆಗೆ 300ಕ್ಕೂ ಹೆಚ್ಚು ಮಕ್ಕಳಲ್ಲಿ ಶಿಗೆಲ್ಲಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಕೇರಳದ ಈ ಆತಂಕಕಾರಿ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಇಲಾಖೆಯು ಗಡಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿದೆ.

ಮುಖ್ಯಾಂಶಗಳು

  • ಕೇರಳದಲ್ಲಿ ಶಿಗೆಲ್ಲಾ ಸೋಂಕಿಗೆ ಬಾಲಕಿ ಬಲಿ.
  • ಮಕ್ಕಳ ಕರುಳಿನ ಮೇಲೆ ಬ್ಯಾಕ್ಟೀರಿಯಾ ದಾಳಿ.
  • ಕರ್ನಾಟಕ ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ.

ಏನಿದು ಶಿಗೆಲ್ಲೋಸಿಸ್ ಸೋಂಕು? ಇದು ಹರಡುವುದು ಹೇಗೆ?

ವೈದ್ಯರ ಪ್ರಕಾರ, ಶಿಗೆಲ್ಲಾ ಎಂಬುದು ಯಾವುದೇ ವೈರಸ್ ಅಲ್ಲ, ಇದೊಂದು ಅತ್ಯಂತ ಸಾಂಕ್ರಾಮಿಕ ಬ್ಯಾಕ್ಟೀರಿಯಾ (Bacterial Infection) ಆಗಿದೆ. ಇದು ಮುಖ್ಯವಾಗಿ ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳಿನ ಮೇಲೆ ತೀವ್ರವಾಗಿ ದಾಳಿ ಮಾಡುತ್ತದೆ. ಅನೈರ್ಮಲ್ಯ ಹೊಂದಿರುವ ಪ್ರದೇಶಗಳಲ್ಲಿ ಇದು ಅತಿ ವೇಗವಾಗಿ ಹರಡುತ್ತದೆ. ಕಲುಷಿತ ನೀರು, ಕಲುಷಿತ ಆಹಾರ ಸೇವನೆ ಹಾಗೂ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ಬ್ಯಾಕ್ಟೀರಿಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ವಿಶೇಷವಾಗಿ 5 ವರ್ಷದೊಳಗಿನ ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಸೋಂಕು ಬೇಗನೆ ಅಟ್ಯಾಕ್ ಮಾಡುತ್ತದೆ. ಆರಂಭದಲ್ಲೇ ಪೋಷಕರು ನಿರ್ಲಕ್ಷ್ಯ ವಹಿಸಿದರೆ ಇದು ಮಕ್ಕಳ ಜೀವಕ್ಕೇ ಕಂಟಕವಾಗುವ ಸಾಧ್ಯತೆ ಇರುತ್ತದೆ ಎಂದು ಕೆಸಿಜಿ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಲಕ್ಷ್ಮೀಪತಿ ಎಚ್ಚರಿಕೆ ನೀಡಿದ್ದಾರೆ.

ಶಿಗೆಲ್ಲೋಸಿಸ್ ಸೋಂಕಿನ ಪ್ರಮುಖ ಲಕ್ಷಣಗಳು

  • ತೀವ್ರ ಜ್ವರ ಮತ್ತು ಅತಿಯಾದ ಆಯಾಸ, ದೌರ್ಬಲ್ಯ.
  • ಹೊಟ್ಟೆ ನೋವು ಮತ್ತು ಹೊಟ್ಟೆ ತೊಳಸುವಿಕೆ (ಸೆಳೆತ).
  • ನಿರಂತರ ವಾಂತಿ ಹಾಗೂ ತೀವ್ರ ರಕ್ತ ಮಿಶ್ರಿತ ಅತಿಸಾರ (ಭೇದಿ).
  • ದೇಹದಲ್ಲಿ ನೀರಿನಂಶ ಸಂಪೂರ್ಣ ಕಡಿಮೆಯಾಗಿ ತೀವ್ರ ನಿರ್ಜಲೀಕರಣ (Dehydration) ಉಂಟಾಗುವುದು.

ಸೋಂಕು ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳು

  • ಮಕ್ಕಳಿಗೆ ಹೊರಗಿನ ಹಾಗೂ ಕಲುಷಿತ ನೀರು ಮತ್ತು ತೆರೆದಿಟ್ಟ ಆಹಾರ ನೀಡಬೇಡಿ.
  • ಮಕ್ಕಳು ಆಹಾರ ಸೇವಿಸುವ ಮುನ್ನ ಹಾಗೂ ಶೌಚಾಲಯ ಬಳಕೆಯ ನಂತರ ಸಾಬೂನು ಬಳಸಿ 20 ಸೆಕೆಂಡುಗಳ ಕಾಲ ಕೈಗಳನ್ನು ಚೆನ್ನಾಗಿ ತೊಳೆಯುವುದನ್ನು ರೂಢಿಸಿ.
  • ಕುಡಿಯಲು ಯಾವಾಗಲೂ ಸುರಕ್ಷಿತ ಹಾಗೂ ಚೆನ್ನಾಗಿ ಕಾಯಿಸಿ ಆರಿಸಿದ ಶುದ್ಧ ನೀರನ್ನೇ ಬಳಸಿ.
  • ಹಸಿ ಅಥವಾ ಸರಿಯಾಗಿ ಬೇಯಿಸದ ಮಾಂಸ ಹಾಗೂ ಹಳಸಿದ ಆಹಾರ ಪದಾರ್ಥಗಳ ಸೇವನೆ ಬೇಡ.
  • ಮಕ್ಕಳಲ್ಲಿ ಜ್ವರ ಅಥವಾ ಅತಿಸಾರದಂತಹ ಸಣ್ಣ ಲಕ್ಷಣಗಳು ಕಂಡುಬಂದರೂ ಸ್ವಯಂ ಚಿಕಿತ್ಸೆ ಮಾಡದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಇಲಾಖೆ ಅಲರ್ಟ್

ರಾಜ್ಯದಲ್ಲಿ ಶಿಗೆಲ್ಲೋಸಿಸ್ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆಯು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್, ಗಡಿ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಪರಿಸ್ಥಿತಿಯ ಬಗ್ಗೆ ತಜ್ಞರೊಂದಿಗೆ ಸೂಕ್ತ ಚರ್ಚೆ ನಡೆಸಿ ರಾಜ್ಯದಲ್ಲಿ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us