ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆ, ಮೂವರ ಬಂಧನ: ಎಸ್ಪಿ ಜಿ.ಕೆ.ಮಿಥುನ್ ಕುಮಾರ್
ಶಿವಮೊಗ್ಗದಲ್ಲಿ ಯುವಕನ ಮೇಲೆ ಇಟ್ಟಿಗೆ, ಕಲ್ಲಿನಿಂದ ಹಲ್ಲೆ ಪ್ರಕರಣ ಹಿನ್ನೆಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.

ಶಿವಮೊಗ್ಗ: ನಗರದಲ್ಲಿ ಯುವಕನ ಮೇಲೆ ಇಟ್ಟಿಗೆ, ಕಲ್ಲಿನಿಂದ ಹಲ್ಲೆ ಪ್ರಕರಣ ಹಿನ್ನೆಲೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೌಝಾನ್ ಆಲಿಯಾಸ್ ಮಾರ್ಕೆಟ್ ಫೌಝಾನ್, ಅಸ್ಗರ್, ಫರಾಜ್ ಬಂಧಿತರು. ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದರು. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೂರು ಬೈಕ್ಲ್ಲಿ ಐವರು ಸೀಗೆಹಟ್ಟಿಗೆ ಬಂದಿದ್ದಾರೆ. ಕ್ಲಾರ್ಕ್ ಪೇಟೆಯಲ್ಲಿ ಪ್ರವೀಣ್ ಅಲಿಯಾಸ್ ಕುಲ್ಡ ಪ್ರವೀಣ್ ಜೊತೆ ಚಕಮಕಿ ಉಂಟಾಗಿದೆ. ಇಬ್ಬರನ್ನ ಅಲ್ಲಿಯೇ ಇಳಿಸಿ ಬಂಧಿತ ಆರೋಪಿಗಳು ಭರ್ಮಪ್ಪನಗರಕ್ಕೆ ಆಗಮಿಸಿದ್ದಾರೆ. ಪ್ರಕಾಶ್ ಎಂಬಾತನಿಗೆ ನಿಂದಿಸಿ ಇಟ್ಟಿಗೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರವೀಣ್, ಪ್ರಕಾಶ್ ಮಾರ್ಕೆಟ್ ಫೌಝಾನ್ ಮಧ್ಯೆ ಮಾತಿನ ಚಕಮಕಿಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಹಲ್ಲೆ ಮಾಡಲು ಆರೋಪಿಗಳು ಬಂದಿದ್ದರು ಎಂದು ಮಿಥುನ್ ಕುಮಾರ್ ಹೇಳಿದರು.
ಹಿಜಾಬ್ ನಂತರ ಉಂಟಾದ ಕಲಹ ಹರ್ಷನ ಕೊಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಶಾಂತ ಸ್ಥಿತಿಗೆ ಮರಳಿದ್ದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ನಲ್ಲಿ ಕೂಗುತ್ತಾ ಓಡಾಡಿದ ಅನ್ಯಕೋಮಿನ ಯುವಕರ ಗುಂಪೊಂದು ಮೃತ ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ.
ಮಾಹಿತಿ ತಿಳಿದ ಸ್ಥಳೀಯರು ದುಷ್ಕರ್ಮಿಗಳನ್ನು ಹಿಂಬಾಲಿಲು ಆರಂಭಸಿದರೂ ಅಷ್ಟರಲ್ಲಾಗಲೇ ಪರಾರಿಯಾಗಿದ್ದರು. ಈ ವೇಳೆ ಭರಮಪ್ಪ ನಗರದಲ್ಲಿ ಪ್ರಕಾಶ್ (25) ಎಂಬ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೀಗೆಹಟ್ಟಿ ಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಗಾಯಾಳು ಪ್ರಕಾಶ್ ಸಹೋದರ ಹೇಳಿದ್ದೇನು?
ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಪ್ರಕಾಶ್ ಸಹೋದರ ಟಿವಿ9 ಜೊತೆ ಮಾತನಾಡಿದ್ದು, ಭಜರಂಗದಳ ಮತ್ತು ಆರ್‌ಎಸ್‌ಎಸ್ ವಿರುದ್ದ ರಸ್ತೆಯಲ್ಲಿ ಬೈದುಕೊಂಡು ಹೋಗತ್ತಿದ್ದರು. ಲಾಂಗ್ ಮಚ್ ಹಿಡಿದುಕೊಂಡು ಗಲಾಟೆ ಮಾಡಿಕೊಂಡು ಹೋಗುತ್ತಿದ್ದರು. ರಾತ್ರಿ ಮೂರು ಬೈಕ್‌ಗಳಲ್ಲಿ ಸುಮಾರು 9 ಮಂದಿ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದರು. ನಮ್ಮ ಏರಿಯಾದ ಜನರು ಎಲ್ಲಾರು ಅವರನ್ನ ನೋಡಿದ್ದಾರೆ. ಈ ಹಿಂದೆ ಗಣೇಶ ಹಬ್ಬ ಸೇರಿದಂತೆ ಕೆಲವು ಹಿಂದೂ ಕಾರ್ಯಕ್ರಮಗಳಲ್ಲಿ ನನ್ನ ಸಹೋದರ ಭಾಗಿಯಾಗಿದ್ದ ಎಂದರು.
ಹರ್ಷನ ಹಂತಕರನ್ನು ಎನ್‌ಕೌಂಟರ್ ಮಾಡಿದ್ದಿದ್ದರೆ ಹೀಗಾಗುತ್ತಿರಲಿಲ್ಲ
ಕುಟುಂಬಸ್ಥರಿಗೆ ಬೆದರಿಕೆ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಮೃತ ಹರ್ಷನ ಸಹೋದರಿ ಅಶ್ವಿನಿ, ನಿನ್ನೆ ಕೆಲವರು ನಮ್ಮ ಮನೆ ಬಳಿ ಬಂದು ನಿಮ್ಮನ್ನ ಬಿಡಲ್ಲ ಎಂದು ಧಮ್ಕಿ ಹಾಕಿ ಹೋಗಿದ್ದಾರೆ. ನಾವು ಜೈ ಶ್ರೀರಾಮ್ ಅನ್ನೋದು ಬೇಡ ಅಂದರೆ ಹೇಗೆ? ನಮ್ಮ ಮಕ್ಕಳು ಹೊರಗಡೆ ಓಡಾಡುವುದು ಬೇಡವಾ? ನಮ್ಮ ಮಕ್ಕಳನ್ನು ಮನೆ ಒಳಗಿಟ್ಟುಕೊಂಡೆ ಊಟ ಹಾಕಬೇಕಾ ನನ್ನ ತಮ್ಮ ಹರ್ಷನನ್ನ ಬಲಿ ಪಡೆದರು, ಇನ್ನೂ ಬಲಿ ಬೇಕಾ? ರಾಜಾರೋಷವಾಗಿ ಬಂದು ಧಮ್ಕಿ ಹಾಕುತ್ತಾರೆ ಅಂದರೆ ಹೇಗೆ? ಹರ್ಷ ಹಂತಕರನ್ನ ಎನ್‌ಕೌಂಟರ್ ಮಾಡಿದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ನಮಗೆ ಭದ್ರತೆ ಕಲ್ಪಿಸಿ ಎಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:47 pm, Tue, 25 October 22




