ಕಾಂಗ್ರೆಸ್ ಪಕ್ಷಕ್ಕಾಗಿ ಕತ್ತೆ ರೀತಿ ದುಡಿಯುತ್ತಿದ್ದೇನೆ: ಸಚಿವ ಮಧು ಬಂಗಾರಪ್ಪ
ಶಿಕಾರಿಪುರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಪಕ್ಷಕ್ಕಾಗಿ ಕತ್ತೆ ರೀತಿ ದುಡಿಯುತ್ತಿದ್ದೇನೆ. ಪಕ್ಷ ಅವಕಾಶ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಹೆಚ್ಚಿನ ಅನುದಾನ ಜಿಲ್ಲೆಗೆ ತರುತ್ತೇನೆ. ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಮಗೆ ಕೇಳಬೇಡಿ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗ, ಫೆಬ್ರವರಿ 18: ನಾನು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಗ್ಯಾರಂಟಿ ಇಟ್ಟುಕೊಂಡು ಮತ ಕೇಳುತ್ತೆ. ಕಾಂಗ್ರೆಸ್ ಪಕ್ಷಕ್ಕಾಗಿ ಕತ್ತೆ ರೀತಿ ದುಡಿಯುತ್ತಿದ್ದೇನೆ ಎಂದು ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಅವಕಾಶ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ಬಗ್ಗೆ ಅಧಿಕೃತವಾಗಿ ನನಗೆ ಏನೂ ಹೇಳಿಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷದವರಿಗೆ ಜನರು ಉತ್ತರ ಕೊಡುತ್ತಾರೆ. ಇವತ್ತು ಶಿಕಾರಿಪುರ ಸೇರಿ ರಾಜ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಟೀಕಾ ಟಿಪ್ಪಣಿಗಳಿಗೆ ಈ ಸಮಾವೇಶ ಉತ್ತರ ಆಗುತ್ತೆ ಎಂದಿದ್ದಾರೆ.
ಜಿಲ್ಲೆಗೆ ಹೆಚ್ಚಿನ ಅನುದಾನ ತರುತ್ತೇನೆ
ಧೈರ್ಯವಾಗಿ ಜನರ ಬಳಿ ಬಂದು ಆಶೀರ್ವಾದ ಕೇಳುತ್ತೆವೆ. ಇನ್ನೂ ಹೆಚ್ಚಿನ ಅನುದಾನ ಜಿಲ್ಲೆಗೆ ತರುತ್ತೇನೆ. ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರು ಬರಬೇಕಿತ್ತು. ಇದು ಪಕ್ಷದ ಕಾರ್ಯಕ್ರಮ ಅಲ್ಲ ಸರ್ಕಾರದ ಕಾರ್ಯಕ್ರಮ. ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಮಗೆ ಕೇಳಬೇಡಿ. ಅಧಿಕಾರಕ್ಕಾಗಿ, ಚುನಾವಣೆಗಾಗಿ ಈ ಸಮಾವೇಶ ಅಲ್ಲ ಎಂದರು.
ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರು ಮಾರುವಂತಿಲ್ಲ: ಶಾಸಕ ಎಸ್ಟಿ ಸೋಮಶೇಖರ್ ಎಚ್ಚರಿಕೆ
ಬಿಜೆಪಿ ರಾಜ್ಯಾಧ್ಯಕ್ಷರು ಕಮಿಷನ್ ತಿನ್ನುತಿದ್ದಾರೆ ಅಂತಾರೆ. ನಾನು ಜನರಿಗೆ ಕೇಳಿದನಲ್ಲ ಯಾರಾದರೂ ಹೇಳಿದ್ರಾ ಕಮಿಷನ್ ಕೊಡುತ್ತಿದ್ದೇವೆ ಅಂತ. ಯಾರು ವಿರೋಧ ಪಕ್ಷದವರು ಕಂಡಮ್ ಮಾಡ್ತಾರೆ ಅವರೇ ಕಂಡಮ್ ಆಗುತ್ತಾರೆ. ಜನರೇ ಬಂದು ನಮಗೆ ಯೋಜನೆ ತಲುಪುತ್ತಿದೆ ಅನ್ನುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ ನೋಡಿ ಯೋಜನೆ ಕೊಡಲ್ಲ. ನುಡಿದಂತೆ ನಡೆದ ಸರ್ಕಾರಕ್ಕೆ ಜನ ಬೆಂಬಲ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾವೆಲ್ಲ ಭಾರತಾಂಬೆಯ ಮಕ್ಕಳು ಅಲ್ವ?
ಬಿಜೆಪಿ ಅವರಿಗೆ ದುರ್ಬುದ್ದಿ ಜಾಸ್ತಿ. ರಾಮನನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಕೋಡಬೇಕಂತೆ. ಮುಸ್ಲಿಂರು ಬಡವರು ತೆರಿಗೆ ಕಟ್ಟಿಲ್ವಾ. ನಾವೆಲ್ಲ ಭಾರತಾಂಬೆಯ ಮಕ್ಕಳು ಅಲ್ವ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನ ಗೆಲ್ಲಲು ಸಾಧ್ಯನಾ?: ಸಿದ್ದರಾಮಯ್ಯ ಪ್ರಶ್ನೆ
ರೈತರು ಟವಲ್ ತಿರುಗಿಸುತ್ತಿರಬೇಕು ಸರ್ಕಾರ ನಡುಗುತ್ತಾ ಇರಬೇಕು. ಬಂಗಾರಪ್ಪನವರಿಗೆ ಶಕ್ತಿ ಕೊಟ್ಟಿದ್ದು ಶಿವಮೊಗ್ಗದ ಜನರು. ನಿಮ್ಮ ಸಹಕಾರದಿಂದ ಈ ಸ್ಥಳದಲ್ಲಿ ಇದ್ದೇನೆ. ರೈತರು ಆರ್ಥಿಕವಾಗಿ ಇಷ್ಟು ಬೆಳೆದು ನಿಂತಿದ್ದಾರೆ ಎಂದರೆ ಬಂಗಾರಪ್ಪ ಪುಕ್ಸಟ್ಟೆ ವಿದ್ಯುತ್ನಿಂದ. ದಮ್ಮು ತಾಕತ್ತು ಇಲ್ಲ ಆ ಕಾರ್ಯಕ್ರಮ ನಿಲ್ಲಿಸುವುದಕ್ಕೆ ಎಂದು ಸವಾಲು ಹಾಕಿದ್ದಾರೆ.
ಗ್ರಾಮೀಣ ಕುಪಾಂಕ ನೀಡಿದ್ದು ಬಂಗಾರಪ್ಪ. ಈಗ ರಾಮನನ್ನು ಬೀದಿಗೆ ತಂದಿದ್ದಾರೆ. ಬಂಗಾರಪ್ಪ ಆಗಲೇ ಆರಾಧನಾ ಕಾರ್ಯಕ್ರಮ ಜಾರಿಗೆ ತಂದಿದ್ದರು. ಗ್ಯಾರಂಟಿ ಯೋಜನೆಯ ಸೃಷ್ಟಿ ಕರ್ತ ಇದೆ ಮಧು ಬಂಗಾರಪ್ಪ. ಯಾರ ಅಪ್ಪನ ಮನೆಯಿಂದ ಗ್ಯಾರಂಟಿ ತಂದು ಕೊಡುತ್ತಿಲ್ಲ. ನಿಮ್ಮ ಹಣವನ್ನು ನಿಮಗೆ ನೀಡುತ್ತಿದ್ದೇವೆ. ಬಡವರ ಮನೆಯಲ್ಲಿ ಬೆಳಕು ಬರಬೇಕು ಇದು ನಮ್ಮ ಸರ್ಕಾರದ ಕನಸು.
ಸರ್ಕಾರಿ ಶಾಲೆಯನ್ನು ಬದಲಾವಣೆ ತರುತ್ತೇನೆ
76 ಸರ್ಕಾರಿ ಶಾಲೆಗಳು ರಾಜ್ಯದಲ್ಲಿದೆ. ಮಕ್ಕಳ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಒಂದು ಕೋಟಿ 20 ಲಕ್ಷ ಮಕ್ಕಳ ನಮ್ಮ ಇಲಾಖೆಯಲ್ಲಿದ್ದಾರೆ. ಕಳೆದ ವರ್ಷ 37 ಸಾವಿರ ಕೋಟಿ ರೂ. ನನ್ನ ಇಲಾಖೆಗೆ ಕೊಟ್ಟಿದ್ದರು. ಈ ವರ್ಷ 44 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು ಎನ್ನಬೇಕು. ಹಾಗೇ ಸರ್ಕಾರಿ ಶಾಲೆಯನ್ನು ಬದಲಾವಣೆ ತರುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.