ಒಂದೆಡೆ ಬಯೋಮೆಟ್ರಿಕ್, ಮತ್ತೊಂದೆಡೆ ರೇಷನ್ ವಿತರಣೆಗೆ ಜನಾಕ್ರೋಶ: ರಾತ್ರೋರಾತ್ರಿ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಮಾಲೀಕರಿಗೆ ಕ್ಲಾಸ್

ಸಾಗರದ ನ್ಯಾಯಬೆಲೆ ಅಂಗಡಿಯಲ್ಲಿನ ಪಡಿತರ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಮನೆಯಲ್ಲಿ ಬಯೋಮೆಟ್ರಿಕ್ ನಡೆಸಿ, ಬೇರೆಡೆ ಪಡಿತರ ವಿತರಿಸುವುದು, ಸರ್ವರ್ ಸಮಸ್ಯೆ ಮತ್ತು ಸರಿಯಾದ ಸಮಯಕ್ಕೆ ಬಾರದಿರುವ ಆರೋಪಗಳು ಕೇಳಿಬಂದಿವೆ. ತಹಶೀಲ್ದಾರ್ ಸ್ಥಳಕ್ಕೆ ದೌಡಾಯಿಸಿ, ಅಂಗಡಿ ಮಾಲೀಕರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಒಂದೆಡೆ ಬಯೋಮೆಟ್ರಿಕ್, ಮತ್ತೊಂದೆಡೆ ರೇಷನ್ ವಿತರಣೆಗೆ ಜನಾಕ್ರೋಶ: ರಾತ್ರೋರಾತ್ರಿ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಮಾಲೀಕರಿಗೆ ಕ್ಲಾಸ್
ಸ್ಥಳಕ್ಕೆ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ಭೇಟಿ
Edited By:

Updated on: Nov 29, 2026 | 7:31 PM

ಮುಖ್ಯಾಂಶಗಳು

  • ಸಾಗರದಲ್ಲಿ ರೇಷನ್ ವಿತರಣೆಯಲ್ಲಿ ಅವ್ಯವಸ್ಥೆ
  • ಬಯೋಮೆಟ್ರಿಕ್ ಒಂದು ಕಡೆ, ರೇಷನ್​ ವಿತರಣೆ ಮತ್ತೊಂದೆಡೆ
  • ರೊಚ್ಚಿಗೆದ್ದ ಸಾರ್ವಜನಿಕರು

ಶಿವಮೊಗ್ಗ, ನವೆಂಬರ್​​ 29: ಜಿಲ್ಲೆಯ ಸಾಗರ ನಗರದ ಕೆಳದಿ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿನ ಪಡಿತರ ವಿತರಣೆಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವರ್ ಸಮಸ್ಯೆ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ನಿಗದಿತ ಸಮಯಕ್ಕೆ ಅಂಗಡಿ ತೆರೆಯದಿರುವುದನ್ನು ಖಂಡಿಸಿ ಪಡಿತರ ಚೀಟಿದಾರರು ಪ್ರತಿಭಟನೆ ಮಾಡಿದ್ದಾರೆ.

ಒಂದು ಕಡೆ ಬಯೋಮೆಟ್ರಿಕ್: ಮತ್ತೊಂದು ಕಡೆ ಪಡಿತರ ವಿತರಣೆ

ಕೆಳದಿ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಖಾಸಗಿ ಮನೆಯೊಂದರಲ್ಲಿ ಬಯೋಮೆಟ್ರಿಕ್ ಪ್ರಕ್ರಿಯೆ ನಡೆಸಿ, ಮತ್ತೊಂದು ಕಡೆ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದೇ ಸ್ಥಳದಲ್ಲಿ ಬಯೋಮೆಟ್ರಿಕ್ ಮತ್ತು ಪಡಿತರ ವಿತರಣೆ ನಡೆಯದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪಡಿತರ ಚೀಟಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Loading...

ತಿಂಗಳಲ್ಲಿ ಕೇವಲ 6 ದಿನ ಮಾತ್ರ ಪಡಿತರ ವಿತರಣೆ

ನ್ಯಾಯಬೆಲೆ ಅಂಗಡಿ ಮಾಲೀಕರು ಬೆಳಗ್ಗೆ 10.30ಕ್ಕೆ ಅಂಗಡಿ ತೆರೆದು ಮಧ್ಯಾಹ್ನ 12.30ಕ್ಕೆ ಬಾಗಿಲು ಹಾಕುತ್ತಿದ್ದಾರೆ. ಅಲ್ಲದೆ, ತಿಂಗಳಲ್ಲಿ ಕೇವಲ ಆರು ದಿನ ಮಾತ್ರ ಪಡಿತರ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸರ್ವರ್ ಸಮಸ್ಯೆ ಹಾಗೂ ಸಮಯ ಪಾಲನೆ ಮಾಡದಿರುವುದರಿಂದ ಪಡಿತರ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.

ರಾತ್ರಿ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್

ಸಾರ್ವಜನಿಕರ ಸಮಸ್ಯೆ ತಿಳಿದ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್. ರಜೆಯ ದಿನವಾದರೂ ರಾತ್ರಿ 9 ಗಂಟೆಗೆ ಸ್ಥಳಕ್ಕೆ ಧಾವಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಒಂದೇ ಸೂರಿನಡಿ ಬಯೋಮೆಟ್ರಿಕ್ ಮತ್ತು ಪಡಿತರ ವಿತರಣೆ ಮಾಡುವಂತೆ ಸೂಚಿಸಿದರು. ಪಡಿತರ ವಿತರಣೆಯಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇನ್ನು ಮುಂದೆ ನಿಯಮ ಉಲ್ಲಂಘನೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿಗೆ ಹಣ ಕೇಳಿದರೆ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು: ಸಚಿವ ರಿಜ್ವಾನ್ ಅರ್ಷದ್ ಖಡಕ್ ಎಚ್ಚರಿಕೆ

ಇನ್ನು ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರ ಕಾರ್ಯವೈಖರಿಗೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More
Loading...
Unable to load recommendations.
Follow Us