AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೋರ್ವ ಆರೋಪಿ ಎಸ್ಕೇಪ್: ಊಟದ ನೆಪ ಒಡ್ಡಿ ಅರಣ್ಯ ಇಲಾಖೆ ಸಿಬ್ಬಂದಿಯನ್ನ ತಳ್ಳಿ ಪರಾರಿ

Shivamogga prisoner escape: ಸೋಮವಾರ ಮಧ್ಯರಾತ್ರಿ ಕಲಬುರಗಿ ಸೆಂಟ್ರಲ್​ ಜೈಲಿನಿಂದ ಮೂರು ಸಜಾ ಕೈದಿಗಳು ಎಸ್ಕೇಪ್ ಆಗಿದ್ದರು. ಕಾರಗೃಹ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ಆಕ್ರೋಶ ಉಂಟಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಎಸ್ಕೇಪ್​ ಆಗಿದ್ದಾನೆ.

ಮತ್ತೋರ್ವ ಆರೋಪಿ ಎಸ್ಕೇಪ್: ಊಟದ ನೆಪ ಒಡ್ಡಿ ಅರಣ್ಯ ಇಲಾಖೆ ಸಿಬ್ಬಂದಿಯನ್ನ ತಳ್ಳಿ ಪರಾರಿ
ಆರೋಪಿ ವೆಂಕಟೇಶ್Image Credit source: tv9 kannada
Basavaraj Yaraganavi
| Edited By: |

Updated on:Jul 16, 2026 | 6:17 PM

Share

ಮುಖ್ಯಾಂಶಗಳು

  • ಶಿವಮೊಗ್ಗ ಸೆಂಟ್ರಲ್​ ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್​
  • ಅರಣ್ಯ ಇಲಾಖೆಯ ಅಕ್ರಮ ನಾಟಾ ಪ್ರಕರಣದ ಆರೋಪಿ
  • ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಶಿವಮೊಗ್ಗ, ಜುಲೈ 16: ರಾಜ್ಯದಲ್ಲಿ ಇತ್ತೀಚೆಗೆ ಜೈಲಿನಿಂದ ಪರಾರಿಯಾಗುತ್ತಿರುವ ಕೈದಿಗಳ (Prisoners Escape) ಸಂಖ್ಯೆ ಹೆಚ್ಚುತ್ತಿದೆ. ಮೊನ್ನೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿದ್ದರು. ಇದಕ್ಕೂ ಮುನ್ನ ಅಫಜಲಪುರ ಪೊಲೀಸ್ ಠಾಣೆಯಿಂದ ರಾತ್ರೋರಾತ್ರಿ ಪೋಕ್ಸೋ ಪ್ರಕರಣದ ಆರೋಪಿ ಒಬ್ಬ ಪರಾರಿಯಾಗಿದ್ದ. ಇವೆಲ್ಲಾ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಶಿವಮೊಗ್ಗ (shivamogga) ಸೆಂಟ್ರಲ್​ ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್ ಆಗಿದ್ದಾನೆ.

ನಡೆದಿದ್ದೇನು?

ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಅಕ್ರಮ ನಾಟಾ ಪ್ರಕರಣದ ಆರೋಪಿಯನ್ನ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಅಡುಗೋಡಿ ಗ್ರಾಮದ ನಿವಾಸಿ ವೆಂಕಟೇಶ್ (36) ಪರಾರಿಯಾದ ಆರೋಪಿ.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನಿಂದ ಕೈದಿಗಳು ಪರಾರಿ ಕೇಸ್: 8 ಜೈಲಧಿಕಾರಿಗಳ ಅಮಾನತು

ಅರಣ್ಯ ಇಲಾಖೆಯ ಅಕ್ರಮ ಮರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಾರಂಟ್ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿ ವೆಂಕಟೇಶನನ್ನು ವಶಕ್ಕೆ ಪೊಲೀಸರು ಪಡೆದಿದ್ದರು. ಬಳಿಕ ಆತನನ್ನು ಹೊಸನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವಂತೆ ಆದೇಶಿಸಿದ್ದರು.

ಊಟ ಕೊಡಿಸುವಂತೆ ಗೋಗರೆದಿದ್ದ ಆರೋಪಿ

ನ್ಯಾಯಾಲಯದ ಆದೇಶದಂತೆ ಅರಣ್ಯ ಉಪವಲಯ ಅಧಿಕಾರಿಗಳಾದ ಸುನೀಲ್ ಡಿ. ಕುಂಬಾರ್, ಇಬ್ರಾಹಿಂ, ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಇಲಾಖಾ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದರು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ವಾಹನವು ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ವೃತ್ತದ ಬಳಿ ತಲುಪಿದಾಗ, ವೆಂಕಟೇಶ್ ತನಗೆ ತೀವ್ರ ಹಸಿವಾಗುತ್ತಿದ್ದು ಊಟ ಕೊಡಿಸುವಂತೆ ಸಿಬ್ಬಂದಿ ಬಳಿ ಗೋಗರೆದಿದ್ದಾನೆ.

ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿ

ಆರೋಪಿಯ ಮಾತನ್ನು ನಂಬಿದ ಅಧಿಕಾರಿಗಳು ಜೀಪ್ ನಿಲ್ಲಿಸಿ, ಸಮೀಪದ ಸಹನಾ ಹೋಟೆಲ್‌ಗೆ ಊಟ ತರಲು ತೆರಳಿದ್ದಾರೆ. ಇದೇ ಸಮಯಕ್ಕೆ ಕಾದಿದ್ದ ವೆಂಕಟೇಶ್, ಜೀಪ್‌ನಲ್ಲಿ ತನ್ನ ಕಾವಲಿಗಿದ್ದ ಅರಣ್ಯ ವೀಕ್ಷಕ ಅಯಾನ್ ಹಾಗೂ ಚಕ್ರಪಾಣಿಯನ್ನ ಜೋರಾಗಿ ತಳ್ಳಿ, ಹಲ್ಲೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳ ಸಿನಿಮೀಯ ಎಸ್ಕೇಪ್: ಇಲ್ಲಿದೆ ನೋಡಿ ಸಿಸಿಟಿವಿ ದೃಶ್ಯ!

ಸದ್ಯ ಬಟ್ಟೆಮಲ್ಲಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಈವರೆಗೆ ಪತ್ತೆಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:16 pm, Thu, 16 July 26

Follow Us