ಸಿದ್ದರಾಮಯ್ಯ ಮಗ-ಸೊಸೆ ಹೆಸರಿನಲ್ಲಿ ಪಬ್: ವಿಶ್ವನಾಥ್ ಗಂಭೀರ ಆರೋಪ
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್ಸಿ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ನಾನು ಒಳ್ಳೆಯವನು ಅಂತ ಡಂಗೂರ ಸಾರುತ್ತಿದ್ದಾರೆ. ಆದರೆ ತಮ್ಮ ಮಗ ಮತ್ತು ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಇದಕ್ಕೆ ಸಚಿವ ಭೈರತಿ ಸುರೇಶ್ ಮಾಸ್ಟರ್ ಮೈಂಡ್ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು, ಅಕ್ಟೋಬರ್ 23: ಸಿಎಂ ಸಿದ್ದರಾಮಯ್ಯ ಮಗ ಮತ್ತು ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಅದಕ್ಕೆಲ್ಲ ಸಚಿವ ಭೈರತಿ ಸುರೇಶ್ ಮಾಸ್ಟರ್ ಮೈಂಡ್. ಇವರ ಕ್ಷೇತ್ರದಲ್ಲೇ ಆ ಪಬ್ ಇದೆ ಎಂದು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ (H Vishwanath) ಗಂಭೀರ ಆರೋಪ ಮಾಡಿದ್ದಾರೆ. ನಾನು ಸಿಎಂ ಆಗಿದ್ದರೂ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಸಿದ್ದರಾಮಯ್ಯ ನಿನ್ನೆ ವರುಣಾ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಇದೀಗ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾನು ಒಳ್ಳೆಯವನು ಅಂತ ಡಂಗೂರ ಸಾರುತ್ತಿದ್ದಾರೆ. ಸಿದ್ದರಾಮಯ್ಯ ಸಾಚಾತನದ ಬಗ್ಗೆ ಜನರಿಗೆ ಗೊತ್ತಾಗಿದೆ. ಸಚಿವ ಭೈರತಿ ಸುರೇಶ್ ಒಳಗೆ ಹಾಕಿದರೆ ಎಲ್ಲ ವಿಚಾರ ಹೊರಬರುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಭ್ರಷ್ಟ ಅಂತಾ ಜನ ತೀರ್ಮಾಣ ಮಾಡಿದ್ದಾರೆ: ಹೆಚ್.ವಿಶ್ವನಾಥ್
ನಾನು ಕೂಡ ಮೂರು ಪಾರ್ಟಿಗಳಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ನನ್ನ ತತ್ವ ಸಿದ್ಧಾಂತ ಬಿಟ್ಟಿಲ್ಲ, ಜಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ. ಇತ್ತೀಚೆಗೆ ಪಕ್ಷ ರಾಜಕಾರಣ ಬದಲು ವ್ಯಕ್ತಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ತತ್ವ ಸಿದ್ಧಾಂತಗಳು ಯೋಗೇಶ್ವರ್ಗೆ ಗೊತ್ತು, ಪಕ್ಷಕ್ಕೆ ಹೊಸಬರಲ್ಲ: ಡಿಕೆ ಸುರೇಶ್
ನಿನ್ನೆ ನಡೆದಿದ್ದು 500 ಕೋಟಿ ರೂ. ಶಿಲಾನ್ಯಾಸ ಕಾರ್ಯಕ್ರಮವೋ ಅಥವಾ ನಾನು ಸತ್ಯವಂತ ಅಂತಾ ಹೇಳಿಕೊಳ್ಳುವ ಕಾರ್ಯಕ್ರಮವೋ? ನೀವು ಎಷ್ಟೇ ಹೇಳಿದರೂ ಸಿದ್ದರಾಮಯ್ಯ ಭ್ರಷ್ಟ ಅಂತ ಜನ ನಿರ್ಧರಿಸಿದ್ದಾರೆ. ಮನೆ ಇಲ್ಲ ಮರಿಸ್ವಾಮಿ ಮನೇಲಿ ಮಲಿಗುತ್ತೇನೆ ಎನ್ನುತ್ತೇನೆ ಎಂದರೆ ಜನ ನಂಬಲ. ಸಿದ್ದರಾಮಯ್ಯ ಭ್ರಷ್ಟ ಅಂತಾ ಜನ ತೀರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಿ.ಪಿ.ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ, ಅವನೊಬ್ಬ ಫ್ರಾಡ್
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ ವಿಚಾರವಾಗಿ ಮಾತನಾಡಿದ್ದು, ಮಾಜಿ ಎಂಎಲ್ಸಿ ಯೋಗೇಶ್ವರ್ನನ್ನು ಸೈನಿಕ ಅಂತಾ ಕರೆಯಬಾರದು. ಸಿ.ಪಿ.ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ, ಅವನೊಬ್ಬ ಫ್ರಾಡ್. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷದವರೂ ಕರೆಯುತ್ತಿದ್ದಾರೆ. ಅವನೊಬ್ಬ ದೊಡ್ಡ ಲೀಡರ್ ಅಂತಾ ಎಲ್ಲರೂ ಕರೆಯುತ್ತಿದ್ದೀರಾ? ಸಿಎಂ ಅವರೇ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಏಕೆ ಹಾಳು ಮಾಡ್ತಿದ್ದೀರಿ? ಸರ್ಕಾರ ಈಗಾಗಲೇ ಮುಡಾ, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಿಲುಕಿದೆ ಇದರ ನಡುವೆ ಇನ್ನೊಬ್ಬ ಫ್ರಾಡ್ ಸೇರಿಸಿಕೊಂಡಿದ್ದೀರಿ ಎಂದಿದ್ದಾರೆ.
ಜನರ ಕಷ್ಟಗಳು ಇವರ ಕಣ್ಣಿಗೆ ಕಾಣುತ್ತಿಲ್ಲ
ಮಳೆ ವಿಚಾರವಾಗಿ ಮಾತನಾಡಿದ್ದು, ಕರ್ನಾಟಕದ ಹಲವಾರು ಜಿಲ್ಲೆಗಳು ಜಲಪ್ರಳಯದಲ್ಲಿ ಸಿಲುಕಿವೆ. ಜನರು ಹೊರಗಡೆ ಬರಲು ಸಾಧ್ಯವಾಗದೆ ಪರದಾಟ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಎಂ, ಡಿಸಿಎಂ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ. ಜಿಲ್ಲಾ ಮಂತ್ರಿಗಳು ಕೂಡ ಜಿಲ್ಲೆಗಳ ಬಗ್ಗೆ ಗಮನ ಕೊಡುತ್ತಿಲ್ಲ. ಇದು ವಿಷಾದನೀಯ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಯೋಗೇಶ್ವರ್ ರಾಜೀನಾಮೆ ಬೆನ್ನಲ್ಲೇ ಚುರುಕುಗೊಂಡ ತಂತ್ರಗಾರಿಕೆ: ಎನ್ಡಿಎ ಅಚ್ಚರಿ ಅಭ್ಯರ್ಥಿ ಯಾರು?
ಉಪಚುನಾವಣೆ ವಿಚಾರದಲ್ಲಿ ಮೂರು ಪಕ್ಷಗಳ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಜನರ ಕಷ್ಟಗಳು ಇವರ ಕಣ್ಣಿಗೆ ಕಾಣುತ್ತಿಲ್ಲ. ಜನರು ಸರ್ಕಾರದ ಬಗ್ಗೆ ಹೀನಾಯವಾಗಿ ಮಾತನಾಡುತ್ತಿದ್ದಾರೆ. ಎಲ್ಲರೂ ರಾಜಧಾನಿ ಬಿಟ್ಟು ಕದಲುತ್ತಿಲ್ಲ. ಸಮಸ್ಯೆಗಳನ್ನು ಎದುರಿಸಲು ಸಿದ್ದವಾಗಿದ್ದೇವೆ ಎನ್ನುತ್ತಾರೆ. ಆದರೆ ಜನರಿಗೆ ಯಾವ ಸೌಲಭ್ಯಗಳು ಸಿಗುತ್ತಿಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.