
ತಮ್ಮ ಖಾತೆ ಬದಲಾವಣೆಯ ವಿಷಯ ಇಟ್ಟುಕೊಂಡು, ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮುನಿಸಿಕೊಂಡಿದ್ದಾರೆ. ಹಾಗಾಗಿ ಅವರು ರಾಜೀನಾಮೆಯನ್ನು ಕೊಡಬಹುದು ಅಥವಾ ಮುಖ್ಯಮಂತ್ರಿಗೆ ತಲೆನೋವು ಕೊಡುವ ಹಲವಾರು ರಾಜಕೀಯ ಪಟ್ಟನ್ನು ಪ್ರದರ್ಶಿಸಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಲು ಪ್ರಾರಂಭಿಸಿದ್ದಾರೆ. ಇದು ಸಾಧ್ಯವೇ?
ಮೊದಲು ಶ್ರೀರಾಮುಲು ಆರೋಗ್ಯ ಸಚಿವರಾಗಿ ಕೋವಿಡ್-19ನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ನೋಡಲೇಬೇಕು. ಮೊದಲಿನಿಂದಲೂ ಉಪ-ಮುಖ್ಯಮಂತ್ರಿ ಆಗಬೇಕೆಂಬ ಬಹಳ ಆಸೆ ಇಟ್ಟುಕೊಂಡದ್ದ ಶ್ರೀರಾಮುಲು ಅವರಿಗೆ ಅವರದೇ ಸಮಾಜದ ರಮೇಶ ಜಾರಕಿಹೊಳಿ ಮುಳ್ಳಾದರು. ಜಾರಕಿಹೊಳಿ ಬಿಜೆಪಿ ಪಕ್ಷಕ್ಕೆ ಬಂದಾಗಿನಿಂದ, ಶ್ರೀರಾಮುಲು ಅನಧಿಕೃತವಾಗಿ ಸಂಪುಟ ಮತ್ತು ಪಕ್ಷದಲ್ಲಿ ಮೂಲೆಗುಂಪಾಗಿದ್ದು ನಿಜ.
ತನ್ನನ್ನು ಬಿಟ್ಟರೆ ಈ ಪಕ್ಷದಲ್ಲಿ ಎಸ್ ಟಿ ಮತ ತರುವ ತಾಕತ್ತು ಯಾರಿಗೂ ಇಲ್ಲ ಎಂದು ಶ್ರೀರಾಮುಲು ಬೀಗುತ್ತಿರುವಾಗಲೇ, ರಮೇಶ್ ಜಾರಕಿಹೊಳಿ, ತಮ್ಮ ಬೀಗರಾದ ವೈ. ದೇವೇಂದ್ರಪ್ಪ ಅವರಿಗೆ ಸಂಸತ್ತಿನ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬಂದಿದ್ದು ಶ್ರೀರಾಮುಲು ಅವರಿಗೆ ಭಾರಿ ಶಾಕ್ ನೀಡಿತ್ತು. ಆ ಬೆಳವಣಿಗೆಯಿಂದ ಅವರ ಅಸ್ತಿತ್ವದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಎದ್ದಿತ್ತು.
ಕೋವಿಡ್ ನಿರ್ವಹಣೆಯಲ್ಲಿ ವಿಫಲ?
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರು ಮಂತ್ರಿ ಆದರು ಮತ್ತು ಈ ಹಿಂದೆ ನಿರ್ವಹಿಸಿದ್ದ ಆರೋಗ್ಯ ಖಾತೆಯನ್ನೇ ಅವರಿಗೆ ನೀಡಲಾಗಿತ್ತು. ಓರ್ವ ನಾಯಕರಾಗಿ ಮುಂದೆ ನಿಂತು, ಕೋವಿಡ್ ನಿರ್ವಹಣೆಯ ಜವಾಬ್ದಾರಿ ಹೊರಬೇಕಾಗಿತ್ತು. ಆದರೆ ಅವರು ಮಾಡಿದ್ದೇನು?
ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಕೋವಿಡ್-19 ರ ನಿರ್ವಹಣೆ ಬಗ್ಗೆ ನಡೆಯುವ ಇಲಾಖಾ ಸಭೆಯಲ್ಲಿ ಮಂತ್ರಿಗಳಿಗೆ ವೈದ್ಯಕೀಯ ತಾಂತ್ರಿಕ ಮಾಹಿತಿ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ಕೋವಿಡ್ ನಿರ್ವಹಣೆ ಮಾಡಲಾಗುತ್ತದೆ ಎನ್ನುವುದರ ಕುರಿತು ವೈದ್ಯಕೀಯ ವಿವರ ನೀಡುತ್ತಿದ್ದರೆ, ಶ್ರೀರಾಮುಲು ಅಧ್ಯಯನ ಮಾಡಿ, ಪಕ್ಕದ ಕೇರಳ ರಾಜ್ಯದಲ್ಲಿ ಅಲ್ಲಿಯ ಆರೋಗ್ಯ ಸಚಿವರು ಮೊದ ಮೊದಲು ಮಹಾಮಾರಿಯನ್ನು ನಿರ್ವಹಿಸಿದಂತೆ ಇಲ್ಲಿಯೂ ಮಾಡಬೇಕಾಗಿತ್ತು. ವೈದ್ಯಕೀಯ ಪರಿಭಾಷೆ ಅರ್ಥವಾಗದೆ ತುಂಬಾ ತಿಣುಕಾಡಿದ್ದನ್ನೂ ಕಾಣಬೇಕಾಯಿತು. ಇದರಿಂದ ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾದ ವಿಚಾರ ಕರ್ನಾಟಕದ ಜನತೆಗೆ ತಿಳಿಯಲು ಬಹಳ ದಿನ ಬೇಕಾಗಲಿಲ್ಲ.
ಈ ಹಿಂದೆ ಬಿಜೆಪಿ ಬಿಟ್ಟು, ಬಿ ಎಸ್ ಅರ್ ಕಾಂಗ್ರೆಸ್ ಪಕ್ಷ ಕಟ್ಟಿ, 2013ರ ವಿಧಾನ ಸಭಾ ಚುನಾವಣೆಯಲ್ಲಿ 150 ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಬರೀ ನಾಲ್ಕು ಸೀಟು ಗೆದ್ದು ಬರೀ 2.7 ಪ್ರತಿಶತ ಮತ ತೆಗೆದುಕೊಂಡಾಗಲೇ ಅವರ ಜನಪ್ರಿಯತೆಯ ಆಳ ಎಷ್ಟು ಎಂಬುದು ಕರ್ನಾಟಕದ ಜನತೆಗೆ ತಿಳಿಯಿತು. ಆಮೇಲೆ ಅವರೇ ಪಕ್ಷವನ್ನ ಬಿಜೆಪಿ ಜೊತೆ ವಿಲೀನಗೊಳಿಸಿ ತಮ್ಮ ರಾಜಕೀಯ ಭವಿಷ್ಯವನ್ನು ಪುನಃ ಕಟ್ಟಿಕೊಳ್ಳಲು ಕಷ್ಟಪಟ್ಟರು. ಈಗ ಅವರು ಖಾತೆ ಬದಲಾವಣೆ ವಿಷಯ ಇಟ್ಟುಕೊಂಡು ಮತ್ತೆ ಕ್ಯಾತೆ ತೆಗೆಯಲು ಹೊರಟಂತಿದೆ. ಆದರೆ, ಈಗ ಸರಕಾರ ಸುಭದ್ರವಾಗಿದ್ದು, ಅವರ ಯಾವ ರಾಜಕೀಯ ದಾಳವೂ ಸದ್ಯಕ್ಕೆ ನಡೆಯಲಾರದು ಎಂದು ಪಕ್ಷದ ಮೂಲಗಳು ತಿಳಿಸಿವೆ.