
ಬೆಂಗಳೂರು, (ನವೆಂಬರ್ 01): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ್ದು, ಆರೋಪಿ ಜೊತೆಗೆ ಲಿಂಕ್ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ , ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಎಕ್ಸ್ಚೇಂಜ್ ಆಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿಳಾಸದಲ್ಲಿ ರಿತೇಶ್ ಪಾಂಡೆ ಇದ್ದರು. ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೋ ಅಪ್ಲೋಡ್ ಆಗಿದೆ. ರಿತೀಶ್ ಮತ್ತು ಪ್ರಜ್ವಲ್ ಪ್ರಸಾದ್‌ಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದರು. ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿದ್ದರಿಂದ ಪ್ರಕರಣ ಅಲ್ಲಿಗೆ ಅಂತ್ಯವಾಯ್ತು ಎನ್ನುವಷ್ಟರಲ್ಲೇ ಪೊಲೀಸ್ ಆಯುಕ್ತರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ವಿಡಿಯೋ ಅಪ್ಲೋಡ್ ಗೆ ಬಳಕೆ ಆಗಿದ್ದ ಮೊಬೈಲ್ ಎಲ್ಲಿಯದ್ದು ಎಂದು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದೇ ರೋಚಕವಾಗಿದೆ.ರಿತೇಶ್ ಪಾಂಡೆ ವಿನೋದ್ ಶರ್ಮಾ, ಸೆ.26 ರಂದು ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದ.
ಆದ್ರೆ ಅವರಿಗೆ ಸಿಮ್ ಕಾರ್ಡ್ ಬಳಸಿ ವಿಡಿಯೋ ಅಪ್ಲೋಡ್ ಮಾಡುವ ಪ್ಲಾನ್ ಇರಲಿಲ್ಲ. ಹಾಗಾಗಿ ಮೊಬೈಲ್ ವಿಡಿಯೋ ಅಪ್ಲೋಡ್ ಆದಾಗ ಸಿಮ್ ಕಾರ್ಡ್ ಇರಲಿಲ್ಲ. ಆದರೂ ಪೊಲೀಸರು, ಮೊಬೈಲ್ ಖರೀದಿ ಜಾಲ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಟಿಂಗ್ ಪ್ರಕರಣ ಸಂಬಂಧ ಪೊಲೀಸರು, ಆರೋಪಿ ರಿತೀಶ್ ಕುಮಾರ್ ಹೇಳಿಕೆ ದಾಖಲಿಸಿದ್ದರು. ಈ ವೇಳೆ ಪ್ರಜ್ವಲ್ ಪ್ರಸಾದ್ ಸೂಚನೆ ಮೇರೆಗೆ ಮೊಬೈಲ್ ಖರೀದಿಸಿದ್ದಾಗಿ ರಿತೇಶ್ ಹೇಳಿಕೆ ನೀಡಿದ್ದ. ಅಲ್ಲದೆ ಕೇಂದ್ರ ಸಚಿವರ ಮನೆ ಬಳಿ ಬರುವಂತೆ ಹೇಳಿದ್ರು. ಅಲ್ಲಿ ಅವರಿಗೆ ಮೊಬೈಲ್ ಕೊಟ್ಟಿರೋದಾಗಿ ಪೊಲೀಸ್ ವಿಚಾರಣೆ ಮುಂದೆ ಹೇಳಿದ್ದಾನೆ. ರಿತೇಶ್ ಹೇಳಿಕೆ ಸಂಬಂಧ ಸತ್ಯಾಸತ್ಯತೆ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಪ್ರಜ್ವಲ್ ಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ಪ್ರಜ್ವಲ್ ಹೇಳಿಕೆ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಮನೆ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.
Published On - 2:42 pm, Sun, 1 November 26