
ಬೆಂಗಳೂರು, ನವೆಂಬರ್ 24: ಕ್ಷೇತ್ರ ಮರುವಿಂಗಡಣೆಯಿಂದಾಗಿ 2022ರಿಂದ ವಿಳಂಬವಾಗಿದ್ದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯದ 1,101 ಜಿಲ್ಲಾ ಪಂಚಾಯಿತಿ ಮತ್ತು 3580 ತಾಲೂಕು ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ, 2027ರ ಜನವರಿಯಲ್ಲಿ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ಚುನಾವಣೆ ನಡೆಯಲಿದ್ದು, ಶೀಘ್ರದಲ್ಲೇ ಚುನಾವಣಾ ಆಯೋಗ ಅಧಿಕೃತ ವೇಳಾಪಟ್ಟಿ ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ, 1,101 ಜಿಲ್ಲಾ, ಹಾಗೂ 234 ತಾಲೂಕು ಪಂಚಾಯಿತಿಗಳ 3,580 ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಜನವರಿಯಲ್ಲಿ ಚುನಾವಣೆ ನಡೆಯಲಿದೆ. ನಾವು ಅಂತಿಮ ಅಧಿಸೂಚನೆ ಹೊರಡಿಸಿದ್ದೇವೆ. ಯಾವ ಮತದಾರರ ಪಟ್ಟಿ ಬಳಕೆ ಎಂಬುದು ಆಯೋಗಕ್ಕೆ ಬಿಟ್ಟದ್ದು. ಹಳೇ ಮತದಾರರ ಪಟ್ಟಿ ಬಳಕೆ ಎಂಬ ಪ್ರಸ್ತಾವನೆ ಸರ್ಕಾರದ್ದಾಗಿದೆ. ಆದ್ರೆ, ಮುಂದಿನ ಪ್ರಕ್ರಿಯೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಟ್ಟದ್ದು ಎಂದರು.
ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿಯು 2022ರಲ್ಲೇ ಮುಕ್ತಾಯಗೊಂಡಿದ್ದರೂ, ಹಲವು ಕಾರಣಗಳಿಂದ ಚುನಾವಣೆ ನಡೆದಿರಲಿಲ್ಲ. ಹಲವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿದ್ದು ಮಾತ್ರವಲ್ಲದೆ, ಕೆಲ ಗ್ರಾಮೀಣ ಪ್ರದೇಶಗಳು ಸಮೀಪದ ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದವು. ಇದರಿಂದಾಗಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ಮರುವಿಂಗಡಣೆ ಮಾಡುವುದು ಅನಿವಾರ್ಯವಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲೇ ಚುನಾವಣೆ ನಡೆಯಬೇಕಿತ್ತಾದರೂ, ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ವಿಳಂಬವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವ ಸರ್ಕಾರದ ಪಾಲಿನ ಪ್ರಮುಖ ಕರ್ತವ್ಯ ಪೂರ್ಣಗೊಂಡಿದೆ. ಇನ್ನು ಬ್ಯಾಲೆಟ್ ಪೇಪರ್ ಚುನಾವಣೆ ನಡೆಸಲು ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದು, ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೂ ಶಿಫಾರಸ್ಸು ಮಾಡಿದೆ. ಸದ್ಯ ಚುನಾವಣಾ ದಿನಾಂಕ, ನೀತಿ ಸಂಹಿತೆ ಹಾಗೂ ವೇಳಾಪಟ್ಟಿಯನ್ನು ನಿಗದಿಪಡಿಸುವ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗ ಮೇಲಿದೆ. ಆಯೋಗವು ದಿನಾಂಕ ಪ್ರಕಟಿಸಿದ ತಕ್ಷಣವೇ ಚುನಾವಣೆಗಳು ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕವೇ ನಡೆಯಲಿವೆ.
ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಕಾಂಕ್ಷಿಗಳು ಟಿಕೆಟ್ಗಾಗಿ ತಮ್ಮ ನಾಯಕರ ಬೆನ್ನುಬಿದ್ದಿದ್ದಾರೆ.
Published On - 3:46 pm, Tue, 24 November 26