ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಸೇರಿಸುವ ಸಂಚು ನಡೆದಿತ್ತು: ಡಾ. ಸಿ. ಸೋಮಶೇಖರ್
ರಾಜ್ಯಗಳ ನಡುವೆ ಗಡಿ ವಿವಾದ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಅಡ್ವೊಕೇಟ್ ಜನರಲ್ ಜೊತೆಗೂ ಸಿಎಂ ಚರ್ಚೆ ಮಾಡಿದ್ದು, ಕಾನೂನಾತ್ಮಕವಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ಆಗಿದೆ.
ಬೆಂಗಳೂರು: ಮರಾಠಿ ಶಾಲೆಗಳಿಗೆ ಕನ್ನಡಿಗರ ಮಕ್ಕಳನ್ನು ಸೇರಿಸುವ ಸಂಚು ನಡೆಯುತ್ತಿತ್ತು. ಎಂಇಎಸ್ ಸಂಘಟನೆಗಳು, ಮಹಾರಾಷ್ಟ್ರದ ನಿಯೋಗಗಳು ಬಂದು ನಮ್ಮಲ್ಲಿ ಮರಾಠಿ ಶಾಲೆಗಳನ್ನು ತೆರೆಯಲು ಮಾಡಿದ್ದರು. ಅಲ್ಲದೇ ಇಲ್ಲಿ ಮರಾಠಿ ಶಾಲೆಗಳನ್ನು ತೆರೆಯಲು ಸಂಚು ಮಾಡಿದ್ದರು. ಈ ಸಂಚನ್ನು ನಮ್ಮ ಪ್ರಾಧಿಕಾರದಿಂದ ತಡೆದಿದ್ದೇವೆ ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಡಿಸೆಂಬರ್ 02) ಮಾತನಾಡಿದ ಅವರು, ಅಕ್ಕಲಕೋಟೆ, ಜತ್ತ ಹಾಗೂ ಕಾಸರಗೋಡಿನಲ್ಲಿ ಪ್ರೌಢ ಶಾಲೆಯ ಮಕ್ಕಳನ್ನು ಆಕರ್ಷಣೆ ಮಾಡಲು ಒಂದೇ ಶಾಲೆಯಲ್ಲಿ ಪ್ರೌಢಶಾಲೆ ಮುಗಿಸುವ ಮಕ್ಕಳಿಗೆ ಪ್ರೋತ್ಸಾಹಿಸಲು ಪ್ರತೀ ಮಗುವಿಗೆ ತಲಾ ಐದು ಸಾವಿರ ರೂ. ಠೇವಣಿ ಇಡಲು ನಿರ್ಧಾರ ಮಾಡಲಾಗಿದ್ದು, ಈ ಯೋಜನೆ ಬಗ್ಗೆ ಸರ್ಕಾರಕ್ಕೆ 2.50 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಂದಿನ ಬಜೆಟ್ನಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.
7ನೇ ತರಗತಿಯವರೆಗೆ ಓದಿದ ಮಕ್ಕಳು ಆ ನಂತರ ಬೇರೆ ಕಡೆ ಹೋಗುತ್ತಾರೆ. ಅವರು ಅದೇ ಶಾಲೆಯಲ್ಲೇ ವಿದ್ಯಾಭ್ಯಾಸ ಮುಂದುವರಿಸಲು ಯೋಜನೆ ತರಲಾಗುತ್ತಿದೆ. ಗಡಿ ಭಾಗದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂಬ ಚಿಂತನೆ ಇದ್ದು, ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ, 351 ಸಂಸ್ಥೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಸುಮಾರು 400 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಮಾಹಿತಿ ನೀಡಿದರು.
ರಾಷ್ಟ್ರ ಭಕ್ತಿ, ನಾಡ ಪ್ರೀತಿ ಹೆಸರಿನಲ್ಲಿ ಕವಿಗೋಷ್ಠಿ ನಡೆಯಲಿದೆ. ಕನ್ನಡದ ಭದ್ರತೆ ಒದಗಿಸುವುದು ಪ್ರಾಧಿಕಾರದ ಆಶಯ, ಡಿಸಿಗಳೇ ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನು ಪರಿಶೀಲನೆ ಮಾಡಲು ಒಂದು ಕಮಿಟಿ ರಚನೆ ಮಾಡಿದ್ದೇವೆ. ಜಿಲ್ಲಾಧಿಕಾರಿ ಒಂದು ದಿನವಾದರೂ ಗಡಿ ಭಾಗದ ಜಿಲ್ಲೆಗಳಿಗೆ ಹೋಗಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಗ್ರಾಮ ವಾಸ್ತವ್ಯದ ಮೂಲಕ ಇದನ್ನು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಬೆಳಗಾವಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ
ಇದೇ ವೇಳೆ ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಗಡಿ ವಿವಾದದ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಅಡ್ವೊಕೇಟ್ ಜನರಲ್ ಜೊತೆಗೂ ಸಿಎಂ ಚರ್ಚೆ ಮಾಡಿದ್ದು, ಕಾನೂನಾತ್ಮಕವಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ಆಗಿದೆ. ಖಂಡಿತವಾಗಿಯೂ ಸರ್ಕಾರದ ಪರವಾಗಿ ಜಯ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಕೇರಳ ಸರ್ಕಾರ ಕಾಸರಗೋಡಿನ ಗಡಿಯಲ್ಲಿ ಇರುವ ಹಳ್ಳಿಗಳಿಗೆ ಹೆಸರು ಬದಲಾವಣೆ ಮಾಡುವ ಕೆಲಸ ಮಾಡುತ್ತಿದ್ದು, ಹೀಗಾಗಿ ಹೆಸರುಗಳ ಬದಲಾವಣೆ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಗಡಿ ಭಾಗದ ಜನರ ಆರ್ಥಿಕ, ಸಾಮಾಜಿಕ, ಶಿಕ್ಷಣದ ಬಗ್ಗೆ ಅಧ್ಯಯನ ಮಾಹಿತಿಯನ್ನು 8 ವಿಶ್ವವಿದ್ಯಾಲಯಗಳನ್ನು ಸಂಪರ್ಕ ಮಾಡಿ ವರದಿ ಕೊಡುವಂತೆ ಮನವಿ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ವರದಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಲಿದ್ದಾರೆ. ಕಾಸರಗೋ ಡು, ಗೋವಾ ಮತ್ತು ಅಕ್ಕಲಕೋಟೆಯಲ್ಲಿ ಕನ್ನಡ ಭವನ ನಿರ್ಮಾಣದ ಚಿಂತನೆ ಇದೆ. ಈಗಾಗಲೇ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಚರ್ಚೆಯೂ ನಡೆಸಿದ್ದೇವೆ ಎಂದು ವಿವರಿಸಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 2 December 22