MLC ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್: ಪೊಲೀಸರ ಮುಂದೆ ಮಂಡಿಯೂರಿದ ಆರೋಪಿಗಳು
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸಂಬಂಧಿಸಿದ ಸುಪಾರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಓರ್ವನನ್ನು ಬಂಧಿಸಲಾಗಿದೆ. ಸೋಮ ಎಂಬಾತನಿಗೆ 70 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿದ್ದು, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದನು ಎನ್ನಲಾಗಿದೆ. ಭರತ ಎಂಬಾತ ಹತ್ಯೆಯ ಯೋಜನೆ ರೂಪಿಸಲು ಸಹಾಯ ಮಾಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ತುಮಕೂರು, ಏಪ್ರಿಲ್ 02: ವಿಧಾನ ಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರ ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೋಮ ಮತ್ತು ಅಮಿತ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಬಂದ ಸೋಮನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸೋಮನ ವಿರುದ್ಧ ಸಚಿವ ಕೆ.ಎನ್ ರಾಜಣ್ಣ (KN Rajanna) ಪುತ್ರ ರಾಜೇಂದ್ರ ಹತ್ಯೆಗೆ 70 ಲಕ್ಷ ರೂ. ಡೀಲ್ ಮಾಡಿರುವ ಆರೋಪವಿದೆ. 5 ಲಕ್ಷ ರೂ. ಅಡ್ವಾನ್ಸ್ ಪಡೆದಿರೋ ಸೋಮನನ್ನ ವಿಚಾರಣೆಗೊಳಡಿಸಲಾಗಿದೆ. ಹತ್ಯೆಗೆ ಸುಪಾರಿ ಕೊಟ್ಟಿದ್ಯಾರು ಅಂತಾ ವಿಚಾರಣೆ ನಡೆಸಲಾಗುತ್ತಿದೆ.
ಇನ್ನು, ಪ್ರಕರಣದ ಮತ್ತೊಬ್ಬ ಆರೋಪಿ ಭರತ ಎಂಬವುನನ್ನು ಪೊಲೀಸರು ಬಂಧಿಸಿದ್ದಾರೆ. ಭರತ ವಿರುದ್ಧ ಕೊಲೆಯ ಸ್ಕೆಚ್ ಬಗ್ಗೆ ಮಾರ್ಗದರ್ಶನ ಮಾಡಿದ್ದ ಎಂಬ ಆರೋಪವಿದೆ. ಪೊಲೀಸರ ದಿಕ್ಕು ತಪ್ಪಿಸುವುದು ಹಾಗೂ ಸಾಕ್ಷ್ಯ ಸಿಗದ್ದಂತೆ ಹತ್ಯೆ ಮಾಡಲು ಸ್ಕೇಚ್ ಹಾಕಿದ್ದನು ಎನ್ನಲಾಗಿದೆ. ಸೋಮನ ಅಣತೆಯಂತೆ ಭರತ ಗ್ಯಾಂಗ್ ಅನ್ನು ಲೀಡ್ ಮಾಡುತ್ತಿದ್ದನು.
ಭರತ್ ಗ್ಯಾಂಗ್ ಹಾಗೂ ಸೋಮ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದನು. ಯಾರನ್ನ, ಎಲ್ಲಿ, ಯಾವಾಗ ಭೇಟಿ ಮಾಡ್ಬೇಕು ಅಂತ ಸೂಚನೆ ಕೊಡುತ್ತಿದ್ದನಂತೆ. ರಾಜೇಂದ್ರನ ಚಲನವಲನ ಗಮನಿಸಿ ಸೋಮನಿಗೆ ಭರತ ಮಾಹಿತಿ ನೀಡುತ್ತಿದ್ದನು ಎನ್ನಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅನಾಮಧೇಯ ಮೂಲಗಳಿಂದ ಆಡಿಯೋ ಸಿಕ್ಕ ಹಾಗೂ ಆಡಿಯೋದಲ್ಲಿ ರಾಜೇಂದ್ರ ಸುಪಾರಿ ಬಗ್ಗೆ ನಡೆಸಿದ್ದ ಮಾತುಕತೆ ಮಾಹಿತಿ ಮೇರೆಗೆ ಸೋಮ, ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿರುವುದು ಬಹಿರಂಗವಾಗಿದ್ದು, ಈ ಸಂಬಂಧ ಈ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಸಿದ್ದಾರೆ.
ಇದನ್ನೂ ಓದಿ: ಸಚಿವ ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಸದ್ದಿಲ್ಲದೇ ತನಿಖೆ ಶುರು!
ಮಗಳ ಜನ್ಮದಿನವೇ ಹತ್ಯೆಗೆ ಪ್ಲ್ಯಾನ್
ರಾಜೇಂದ್ರ ಅವರ ಮಗಳ ಜನ್ಮದಿನವೇ ಹತ್ಯೆಗೆ ಪ್ಲ್ಯಾನ್ ನಡೆದಿತ್ತು. ಆದ್ರೆ, ಸಮಯ ಸಂದರ್ಭ ಕಾರಣದಿಂದ ಕೃತ್ಯವೆಸಗಲಾಗಿರಲಿಲ್ಲ. ಮುಂದೊಂದು ದಿನ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿಯೇ ರಾಜೇಂದ್ರ ಹತ್ಯೆಗೆ ಹೊಸ ಕಾರು, ಶಸ್ತ್ರಾಸ್ತ್ರ ಖರೀದಿಸಿದ್ದರು. ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿದ್ದು, 70 ಲಕ್ಷಕ್ಕೆ ಡೀಲ್ ಮಾಡಿಕೊಂಡು ಅದರಲ್ಲಿ 5 ಲಕ್ಷ ಮುಂಗಡವಾಗಿ ಪಡೆದಿದ್ದರು. ಮಧುಗಿರಿ, ತುಮಕೂರು, ಬೆಂಗಳೂರು, ಕಲಾಸಿಪಾಳ್ಯಗಳಲ್ಲಿ ಚಲನವಲನಗಳ ಬಗ್ಗೆ ಆಪ್ಡೇಟ್ ಮಾಡುತ್ತಿದ್ದ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.