ಸಚಿವ ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಸದ್ದಿಲ್ಲದೇ ತನಿಖೆ ಶುರು!
KN rajanna Honeytrap Case: ಹಿರಿಯ ಮಂತ್ರಿ ಕೆಎನ್ ರಾಜಣ್ಣ ಮತ್ತವರ ಪುತ್ರ MLC ರಾಜೇಂದ್ರ ಅವರಿಗೆ ಹನಿಟ್ರ್ಯಾಪ್ ಯತ್ನ ಆರೋಪ ಪ್ರಕರಣ ರಾಜ್ಯವಲ್ಲದೇ ದೇಶದ ರಾಜಕಾರಣದಲ್ಲೂ ಸದ್ದು ಮಾಡುತ್ತಿದೆ. ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ. ಈ ಕುರಿತು ತನಿಖೆ ಮಾಡಿ ಎಂದು ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್‌ಗೆ ಮನವಿ ಸಲ್ಲಿಸಿದ್ದರು. ಪರಮೇಶ್ವರ್, ಆ ಮನವಿಯನ್ನ ಡಿಜಿ, ಐಜಿಪಿ ಅಲೋಕ್ ಮೋಹನ್‌ಗೆ ರವಾಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸದ್ದಿಲ್ಲದೇ ಈ ಹನಿಟ್ರ್ಯಾಪ್ ಪ್ರಕರಣ ತನಿಖೆ ಶುರುವಾಗಿದೆ.

ಬೆಂಗಳೂರು, (ಮಾರ್ಚ್ 27): ಹನಿಟ್ರ್ಯಾಪ್ ಪ್ರಕರಣ (Honeytrap case) ಸಂಬಂಧ ಸಚಿವ ರಾಜಣ್ಣ(KN rajanna) ಅವರು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ಸಲ್ಲಿಸಲಾಗಿದ್ದ ಮನವಿಯನ್ನು ಡಿಜಿ, ಐಜಿಪಿ ಅಲೋಕ್ ಮೋಹನ್‌ಗೆ ರವಾಸಲಾಗಿದೆ. ಇದರ ಬೆನ್ನಲ್ಲೇ ಅಲೋಕ್ ಮೋಹನ್ ಅವರು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ. CID ಡಿಜಿಪಿ (CID investigation) ಸಲೀಂ ಅವರಿಗೆ ಅದೇ ಮನವಿಯನ್ನ ವರ್ಗಾಯಿಸಿ, ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಸಿಐಡಿ ತಂಡ ಪ್ರಾಥಮಿಕ ತನಿಖೆಗೆ ಮುಂದಾಗಿದ್ದು, ಇಂದು (ಮಾರ್ಚ್ 27) ಬೆಳಿಗ್ಗೆ ಸಿಐಡಿಯ ಅಧಿಕಾರಿಗಳು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸರ್ಕಾರಿ ನಿವಾಸ ಜಯಮಹಲ್‌ನಲ್ಲಿರುವ ಬಂಗಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಜಯಮಹಲ್ ರಸ್ತೆಯ ಸಚಿವ ರಾಜಣ್ಣರ ಸರ್ಕಾರಿ ಗೆಸ್ಟ್‌ಹೌಸ್‌ಗೂ ತೆರಳಿದ್ದ ಸಿಐಡಿ, ಸರ್ಕಾರಿ ಬಂಗಲೆಯಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳೀಯವಾಗಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು ರಾಜಣ್ಣರ ತುಮಕೂರು ನಿವಾಸಕ್ಕೂ ತೆರಳಿ ಪರಿಶೀಲಿಸಲಿದೆ. 14 ದಿನಗಳ ಕಾಲ ಸಾಕ್ಷಿ ಸಂಗ್ರಹಿಸುವ ಸಿಐಡಿ, ಆ ಬಳಿಕ ಪ್ರಕರಣವನ್ನ ಸಿಐಡಿಗೆ ಇಲ್ಲ ಎಸ್‌ಐಟಿಗೆ ವಹಿಸುವ ಬಗ್ಗೆ ತೀರ್ಮಾನಿಸಲಿದೆ.
ಇದನ್ನೂ ಓದಿ: ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ: PIL ವಜಾಗೊಳಿಸಿದ ಸುಪ್ರೀಂ
ಮಾಹಿತಿ ಪ್ರಕಾರ, ಸಿಐಡಿ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಪಡೆದು ನಂತರ ಬೇರೆ ಸ್ವರೂಪದ ತನಿಖೆ ನಡೆಸುವ ನಿಟ್ಟಿನಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯ ಸರ್ಕಾರ ಹನಿಟ್ರ್ಯಾಪ್ ಪ್ರಕರಣವನ್ನು ಸಿಐಡಿಗೆ ವಹಿಸಿ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಇನ್ನು ಸರ್ಕಾರಕ್ಕೆ ಹನಿಟ್ರ್ಯಾಪ್ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವ ಇರಾದೆ ಇದ್ದಿದ್ದರೆ ಈ ಮೊದಲೇ ಹೇಳಿದಂತೆ ಉನ್ನತ ಮಟ್ಟದ ತನಿಖೆ ನಡೆಸಬಹುದಿತ್ತು. ಸಿಐಡಿ ತನಿಖೆ ನಡೆಸುವುದೇ ಆಗಿದ್ದರೆ ಅದಕ್ಕೆ ಇಷ್ಟು ದಿನ ಕಾಯುವ ಅಗತ್ಯವಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ.
ಹನಿಟ್ರ್ಯಾಪ್ ಪ್ರಕರಣ ಕಳೆದ ತಿಂಗಳಿನಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಸ್ತಾಪವಾಗಿದ್ದ ಈ ವಿಚಾರವನ್ನು ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸುನಿಲ್ ಕುಮಾರ್‌ರವರು ಪ್ರಸ್ತಾಪಿಸಿದ್ದರು. ಬಳಿಕ ಸ್ವತಃ ರಾಜಣ್ಣ ಅವರೇ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಒಪ್ಪಿಕೊಂಡಿದ್ದರು. ಬಳಿ ಗೃಹಸಚಿವ ಜಿ.ಪರಮೇಶ್ವರ್, ರಾಜಣ್ಣ ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದರು.