ಸಿಎಂ ಆದ ಮೊದಲ ಬಾರಿಗೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ: ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ತಾವು ನಂಬುವ ಆರಾಧ್ಯ ಸನ್ನಿಧಿ ಅಜ್ಜಯ್ಯನ ಮಠಕ್ಕೆ ಇಂದು ಭೇಟಿ ನೀಡಿದರು. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಸಿಎಂ ಆದ ಬಳಿಕ ಭೇಟಿ ನೀಡಿ ಅಜ್ಜಯ್ಯನ ಆಶೀರ್ವಾದ ಪಡೆದರು. ಈ ವೇಳೆ ಕೆಲಕಾಲ ಮಠದ ಆವರಣದಲ್ಲಿ ಓಡಾಡಿದರು.

ತುಮಕೂರು, ಜೂನ್ 06: ಗಂಗಾಧರನ ಅಜ್ಜನ ಹೆಸರಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ ಶಿವಕುಮಾರ್ (DK Shivakumar), ಇಂದು ಅದೇ ಅಜ್ಜನ ಸನ್ನಿಧಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಭಾರಿಗೆ ಭೇಟಿ ನೀಡಿದರು. ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟು ಅಜ್ಜಯ್ಯನ ಆಶೀರ್ವಾದ ಪಡೆದರು. ಶಿವಯೋಗೀಶ್ವರ ಶ್ರೀಗಳ ಸಮ್ಮುಖದಲ್ಲಿ ಮಠದ ಗದ್ದುಗೆಯಲ್ಲಿ 20 ನಿಮಿಷ ವಿಶೇಷ ಪೂಜೆ ನೆರವೇರಿತು. ಇದಕ್ಕೂ ಮುನ್ನ ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸದರು.
ಮುಖ್ಯಾಂಶಗಳು
- ಸಿಎಂ ಡಿಕೆ ಶಿವಕುಮಾರ್ ಮೊದಲ ತುಮಕೂರು ಕ್ಷೇತ್ರ ದರ್ಶನ
- ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ
- ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ನೇರವಾಗಿ ಗವಿ ಬಳಿ ತೆರಳಿ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಅಜ್ಜಯ್ಯನಿಗೆ 20 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಈಡುಗಾಯಿ ಹೊಡೆದರು. ಬಳಿಕ ಆನೆ ಲಕ್ಷ್ಮೀಯಿಂದ ಆಶಿರ್ವಾದ ಪಡೆದರು. ಕೆಲಕಾಲ ಮಠದ ಆವರಣದಲ್ಲಿ ಓಡಾಡಿದ ಸಿಎಂ, ಬಂದ ಅಭಿಮಾನಿಗಳತ್ತ ಕೈಬೀಸಿದರು.
ಮುಖ್ಯಮಂತ್ರಿ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ: ಡಿಕೆ ಶಿವಕುಮಾರ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಮಠಕ್ಕೆ ಮುಖ್ಯಮಂತ್ರಿ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ. ಮಠದ ಭಕ್ತನಾಗಿ ಬಂದು ನಾನು ಪ್ರಾರ್ಥನೆ ಮಾಡಿದ್ದೇನೆ. ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಸಂಬಂಧವಿದು. 24 ವರ್ಷದಿಂದ ನಾನು ಕಾಡಸಿದ್ದೇಶ್ವರ ಮಠಕ್ಕೆ ಬರ್ತಿದ್ದೇನೆ. ಮಠಕ್ಕೆ ಬಂದು ದರ್ಶನ, ಮಾರ್ಗದರ್ಶನವನ್ನ ಪಡೆದಿದ್ದೇನೆ. ನನಗೂ ಸೇರಿದಂತೆ ರಾಜ್ಯಕ್ಕೆ ಒಳ್ಳೆದಾಗಲೆಂದು ಪ್ರಾರ್ಥಿಸಿದ್ದೇನೆ ಎಂದರು.
ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ
ಇನ್ನು ಇದಕ್ಕೂ ಮುನ್ನ ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಐತಿಹಾಸಿಕ ಮತ್ತು ಪವಿತ್ರ ಮಲ್ಲಘಟ್ಟ ಕೆರೆಗೆ 3-4 ಬಾರಿ ಬಂದಿದ್ದೇನೆ. ಎಲ್ಲಾ ದೇವರನ್ನು ಇಲ್ಲಿಗೆ ಕತೆರಂದು ಸ್ನಾನಮಾಡಿಸಿ ಪೂಜೆ ಮಾಡಿತ್ತಾರೆ. ನಮ್ಮ ಗೃಹಪ್ರವೇಶದ ವೇಳೆ ಮಲ್ಲಘಟ್ಟ ಕೆರೆ ಸೇರಿದಂತೆ 5 ಕಡೆಯಿಂದ ನೀರು ತಂದಿದ್ದೆವು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೂತನ ಸಿಎಂ ಡಿಕೆ ಶಿವಕುಮಾರ್ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು
ಮಲ್ಲಘಟ್ಟ ಕೆರೆ ಯಾವಾಗಲೂ ತುಂಬಿತುಳುಕುತ್ತಾ ಇರುತ್ತದೆ. ಕಳೆದ 25 ವರ್ಷಗಳಿಂದ ನಾನು ಈ ಜಾಗ ಗಮನಿಸುತ್ತಾ ಇದ್ದೀನಿ. ಈ ಪವಿತ್ರ ಕ್ಷೇತ್ರಕ್ಕೆ ಬಂದರೆ ಬಹಳ ಸಂತಸ, ನೆಮ್ಮದಿ ಸಿಗುತ್ತದೆ. ಈ ಭಾಗದಲ್ಲಿ 35 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದೆ. ಸೋಪಾನ ಮಂಟಪ, ಗೆಸ್ಟ್ ಹೌಸ್ ಸೇರಿ ಸುಮಾರು ಖರ್ಚುಮಾಡಿದೆ. ಅಕ್ಕಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಕಾಲುವೆ ನಿರ್ಮಿಸಲಾಗುವುದು. ಅಜ್ಜಯ್ಯನವರು, ಸ್ಥಳೀಯ ಸಂಸ್ಥೆಯನ್ನು ಕೇಳಿ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ.
ಹರಕೆ ಏನಿಲ್ಲ, ನನ್ನ ಭಾವನೆ ನನ್ನ ಭಕ್ತಿ ಎಂದ ಸಿಎಂ
ಇನ್ನು ಹರಕೆ ವಿಚಾರವಾಗಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಮಲ್ಲಘಟ್ಟದ ಗಂಗಾಧರೇಶ್ವರನಿಗೆ ಹರಕೆ ಏನಿಲ್ಲ, ನನ್ನ ಭಾವನೆ ನನ್ನ ಭಕ್ತಿ. ಲೋಕಕಲ್ಯಾಣಕ್ಕಾಗಿ ಜನರಿಗೆ ಒಳ್ಳೆಯದಾಗಲಿ ಎಂದು ಬಂದಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರ ಜನರಿಗೆ ಸಮರ್ಪಿಸಬೇಕೆಂದು ಬಂದಿರುವೆ. ಜನರು ನೆಮ್ಮದಿ, ಶಾಂತಿಯಿಂದ ಇರಬೇಕು, ಮಳೆ ಬೆಳೆ ಆಗಬೇಕು. ಈ ಭಾಗದ ಕೆರೆ ಕಟ್ಟೆಗಳು ಯಾವಾಗಲೂ ತುಂಬಿ ತುಳುಕಬೇಕು ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Sat, 6 June 26




