KPSC ವಿವಾದ: ಕೆಲ ಸೀಕ್ರೆಟ್ ಬಿಚ್ಚಿಟ್ಟು ಪ್ರಿಯಾಂಕ್‌ ಖರ್ಗೆಗೆ ಕುಮಾರಸ್ವಾಮಿ ತಿರುಗೇಟು

KPSC ಅಕ್ರಮ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮತ್ತೆ ವಾಗ್ದಾಳಿ ಮಾಡಿದ್ದಾರೆ. ಓಎಂಆರ್ ಶೀಟ್‌ ತಿದ್ದಿ ಅಕ್ರಮ ನೇಮಕಾತಿಗಳು ಸಾಬೀತಾಗಿವೆ. ಸಿಬಿಐ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಟ್ವೀಟ್‌ ಮಾಡುವ ಮೊದಲು, ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲೆಸೆದಿದ್ದಾರೆ.

KPSC ವಿವಾದ: ಕೆಲ ಸೀಕ್ರೆಟ್ ಬಿಚ್ಚಿಟ್ಟು ಪ್ರಿಯಾಂಕ್‌ ಖರ್ಗೆಗೆ ಕುಮಾರಸ್ವಾಮಿ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ
Image Credit source: tv9 kannada
Edited By:

Updated on: Aug 30, 2026 | 11:03 PM

ತುಮಕೂರು, ಆಗಸ್ಟ್​​ 30: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿವೆ ಎನ್ನಲಾಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳು ಸದ್ಯ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮತ್ತು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಮಧ್ಯೆ ವಾಕ್​​ ಸಮರಕ್ಕೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸುತ್ತಿದ್ದಾರೆ ಎಂದಿರುವ ಕುಮಾರಸ್ವಾಮಿ, ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದೆ ಮನೆಯಲ್ಲಿ ಕುಳಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ‘KPSCಯಲ್ಲಿ ಅಕ್ರಮ ನಡೆದಿದೆ, ತಾವೊಬ್ಬರೇ ಪ್ರಾಮಾಣಿಕ ಅಂತಿದ್ದಾರೆ. ಆರ್‌ಡಿಪಿಆರ್‌ ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಒಎಂಆರ್ ಶೀಟ್ ತಿದ್ದಲಾಗಿತ್ತು, ಅವರ ರೀತಿ ಬಾಯಿ ಚಪಲಕ್ಕೆ ಮಾತಾಡುತ್ತಿಲ್ಲ. ಪ್ರಿಯಾಂಕ್ ಆ ಇಲಾಖೆ ಸಚಿವರಾಗಿದ್ದಾಗಲೇ ಅಕ್ರಮ ನಡೆದಿದೆ, ಪ್ರೂವ್ ಆಗಿದೆ. ಸಿಬಿಐ ಮೂಲಕ ತನಿಖೆ ಆಗಬೇಕು ಅನ್ನೋದು‌ ಹೈಕೋರ್ಟ್ ಅಭಿಪ್ರಾಯವಾಗಿದೆ. ಅರೆಸ್ಟ್ ಮಾಡಿದ ಅಧಿಕಾರಿಯನ್ನು ದೆಹಲಿಗೆ ಕಳಿಸಿದ್ದವರು ಯಾರು’? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ‘ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ’: ಸ್ಫೋಟಕ ಹೇಳಿಕೆ ಕೊಟ್ಟ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ

‘ನನ್ನ ಎರಡು ಸುದ್ದಿಗೋಷ್ಠಿಯ ಯಾವುದೇ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ, ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಲಿ. ಇಂದು ಸಂಜೆ ಕೂಡ ಟ್ವೀಟ್ ಮಾಡಿದ್ದಾರೆ. ಏನು ದೊಡ್ಡ ಸಾಧನೆ ಮಾಡಿದಂತೆ, ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ. ಹೌದಪ್ಪ ನೀವು ಕೊಡುತ್ತಾ ಇರೋದು ಚಿತ್ರಾನ್ನ. 2011ರ ವಿಚಾರವನ್ನು ಪ್ರಿಯಾಂಕ್ ಖರ್ಗೆ ಕೆದಕಿದ್ದಾರೆ. ನನ್ನ ಹತ್ತಿರ ಆಟಾಡಬೇಡಪ್ಪ. ಇದು ಅವರಿಗೆ ಎಚ್ಚರಿಕೆ, HDD ಹೆಸರು ತಂದಿದ್ಯಲ್ಲಾ, ಅದಕ್ಕೆ ಎಚ್ಚರಿಕೆ. ಆರ್‌ಎಸ್‌ಎಸ್‌, ಬಿಜೆಪಿ ಅಂತಾ ಮಾತನಾಡ್ತಿರಲ್ಲ, ನನ್ನ ಅಲ್ಲಾಡಿಸಲು ಆಗಲ್ಲ. ಧೈರ್ಯವಾಗಿ ಮಾಧ್ಯಮ ಸ್ನೇಹಿತರನ್ನು ಫೇಸ್ ಮಾಡುವ ತಾಕತ್ತು ಇಲ್ಲ. ಮನೆಗೆ ಹೋಗಿ ಪೋಸ್ಟ್‌ ಮಾಡುತ್ತಾರೆ’ ಎಂದು ವಾಗ್ದಾಳಿ ಮಾಡಿದರು.

ದೇವೇಗೌಡರ ಹೆಸರುತಗೊಂಡು ಆಶ್ರಯ ಪಡೀತೀರಾ

‘ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ಜೈಲಿನಲ್ಲಿ ಭೇಟಿಯಾಗಿದ್ದು ನಿಜ. ಹಾಗೆಯೇ ಈಗಿನ ಸಿಎಂರನ್ನು ತಿಹಾರ್ ಜೈಲಿನಲ್ಲಿ ಭೇಟಿಯಾಗಿದ್ದೇನೆ. ನಿಮ್ಮ ಸಿಎಂ ಕೂಡ ಈಗ ಜೈಲಿನಲ್ಲಿ ಇದ್ದವರನ್ನು ಭೇಟಿ ಮಾಡಿಲ್ಲವಾ? 2011ರ ಬ್ಯಾಚ್‌ನ ಅಕ್ರಮದ ಸಿಐಡಿ ವರದಿ ತೆಗಿಸಪ್ಪ, ಚರ್ಚೆ ಮಾಡೋಣ. ನಾನು ಪಲಾಯನ ಮಾಡಲ್ಲ, ಹೆಚ್​​ಡಿ ದೇವೇಗೌಡರ ಹೆಸರುತಗೊಂಡು ಆಶ್ರಯ ಪಡೀತೀರಾ. ಏನು ವೀರಾವೇಶದಿಂದ ಬಿಜೆಪಿ, RSS ವಿರುದ್ಧ ಮಾತಾಡೋದು ಅಷ್ಟೇ ಗೊತ್ತಾ. ನಿಮ್ಮ ಇಲಾಖೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಹೇಳಪ್ಪ. 24 ಜನರಿಗೆ ಅಕ್ರಮವಾಗಿ ಕೆಲಸ ಕೊಡಿಸಿದ್ರಿ, ಅದರಲ್ಲಿ ಎಷ್ಟು ಜನರು ನಿಮ್ಮ ನೆಂಟರು’ ಎಂದಿದ್ದಾರೆ.

ನಾನು ಅಸೆಂಬ್ಲಿಯಲ್ಲಿ ಇದ್ದರೆ ಚೆನ್ನಾಗಿತ್ತು ಎಂದ ಹೆಚ್​ಡಿ ಕುಮಾರಸ್ವಾಮಿ

‘ನಮ್ಮಗಳ ಬಗ್ಗೆ ಚರ್ಚೆ ಮಾಡಬೇಕಾದರೆ ಸಂಪೂರ್ಣ ಮಾಹಿತಿ ಪಡೆದು ಮಾಡಪ್ಪ. ನಾಳೆ ದೆಹಲಿಯಲ್ಲಿ ಸಂಪೂರ್ಣವಾಗಿ ಸುದ್ದಿಗೋಷ್ಠಿ ಮಾಡುತ್ತೇನೆ. ಒಎಂಆರ್​ ಶೀಟ್ ರೆಸಾರ್ಟ್​ನಲ್ಲಿ ತಿದ್ದಿದಿರಿ. ನಾನು ಇಟ್ಟ ಪ್ರಶ್ನೆಗೆ ನೀವು ಉತ್ತರ ಕೊಡಲಿ. ನಾನು ಅಸೆಂಬ್ಲಿಯಲ್ಲಿ ಇದ್ದರೆ ಚೆನ್ನಾಗಿತ್ತು. ಮತ್ತೆ ರಾಜ್ಯ ರಾಜಕಾರಣಕ್ಕೆ ಬರುವಾಗ ಬರುತ್ತೇನೆ, ನನಗೆನೂ ರಾಜ್ಯದಲ್ಲಿ ಎಲ್ಲಾದರೂ ನಿಲ್ಲುತ್ತೇನೆ. ಪ್ರಿಯಾಂಕ್​ ಖರ್ಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯ. ಈ ರಾಜ್ಯದ ಜನ ಅವಕಾಶ ಮಾಡಿ ಕೊಟ್ಟರೆ ಕೆಪಿಎಸ್ಸಿಯಲ್ಲಿ ಬದಲಾವಣೆ ಮಾಡುತ್ತೇನೆ. ದೇವರ ದಯೆಯಿಂದ ಜನ ಅವಕಾಶ ಮಾಡಿ ಕೊಡಲಿ. ಸೆಪ್ಟೆಂಬರ್ 10ರ ನಂತರ ಮತ್ತಷ್ಟು ಹೇಳುತ್ತೇನೆ’ ಎಂದು ಹೆಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕುಮಾರಣ್ಣನವರೇ ತೂಕವಿಲ್ಲದ ಮಾತಗಳನ್ನಾಡಿ ತೂಕ ಕಳೆದುಕೊಳ್ಳಬೇಡಿ: ಪ್ರಿಯಾಂಕ್​ ಖರ್ಗೆ

ಕೆಪಿಎಸ್‌ಸಿಯಲ್ಲಿ ಅಕ್ರಮ ಕುರಿತು ದಾಖಲೆ ಬಿಡುಗಡೆ ಮಾಡಿರುವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್​ ಖರ್ಗೆ ಕಿಡಿಕಾಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ಕುಮಾರಣ್ಣನವರೇ, ತೂಕವಿಲ್ಲದ ಮಾತುಗಳನ್ನಾಡಿ ನಿಮ್ಮ ತೂಕ ಕಳೆದುಕೊಳ್ಳಬೇಡಿ. 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೇಮಕಾತಿಯನ್ನೇ ರದ್ದುಗೊಳಿಸಿದ್ದರೂ, ಅದೇ ಅಭ್ಯರ್ಥಿಗಳನ್ನು ನೇಮಕ ಮಾಡುವಂತೆ ಅಂದಿನ ಮುಖ್ಯಮಂತ್ರಿಗೆ ಹೆಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಶಿಫಾರಸು ಪತ್ರ ನೀಡಿದ್ದರ ಹಿಂದಿನ ಹಿತಾಸಕ್ತಿಯೇನು’ ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕ್​ ಖರ್ಗೆ ಟ್ವೀಟ್ 

‘ಹೆಚ್‌ಡಿ ಕುಮಾರಸ್ವಾಮಿ ಮಾಡಿದರೆ ಮೃಷ್ಟಾನ್ನ, ಬೇರೆಯವರು ಮಾಡಿದರೆ ಚಿತ್ರಾನ್ನವೇ? ತಮ್ಮ ಸಂಬಂಧಿಕ ಅಧಿಕಾರಿಗಳ ನೇಮಕಾತಿ ರದ್ದಾಗಿದ್ದರೂ ಸಿಎಟಿ ಮೂಲಕ ತಡೆಯಾಜ್ಞೆ ತಂದು ಐಎಎಸ್‌ಗೆ ಬಡ್ತಿ ಕೊಡಿಸಿ ಮುಂದುವರಿಸಿರುವುದು ಯಾರ ಚಿತಾವಣೆಯಿಂದ ಎಂಬುದು ಜಗತ್ತಿಗೆ ತಿಳಿದಿದೆ. ಅಕ್ರಮದಲ್ಲಿ ಜೈಲು ಸೇರಿದ್ದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ಜೈಲಿಗೆ ಹೋಗಿ ಭೇಟಿಯಾಗಿದ್ದು ಬೆದರಿಕೆ ಹಾಕುವುದಕ್ಕೋ ಅಥವಾ ತಮ್ಮ ಹೆಸರು ಹೊರಬರದಂತೆ ಮನವಿ ಮಾಡುವುದಕ್ಕೋ? ಕೆಪಿಎಸ್‌ಸಿ ಅಕ್ರಮದ ಜಾತಕ ಕೆದಕಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ ಕಾಣಸಿಗಲಿದ್ದು, ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಿ ನೇಮಕಾತಿಗೆ ಶಿಫಾರಸು ಮಾಡಿದ್ದ ನೀವು ಇಂದು ಆರ್‌ಡಿಪಿಆರ್ ಇಲಾಖೆಯ ನೇಮಕಾತಿ ಪ್ರಶ್ನಿಸುತ್ತಿರುವುದು ದೊಡ್ಡ ಹಾಸ್ಯ’ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:55 pm, Sun, 30 August 26

Loading...
Unable to load recommendations.
Follow Us