Gubbi News: ಗುಬ್ಬಿ ಕ್ಷೇತ್ರದಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿಂದ ರಾಜೀನಾಮೆ

SR Srinivas: ಗುಬ್ಬಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜಡಿಎಸ್ ಕಾರ್ಯಕರ್ತರಿದ್ದಾರೆ. ರಾಜೀನಾಮೆ ಪರ್ವ ಮುಂದುವರಿದರೆ ಜೆಡಿಎಸ್​ಗೆ ತಲೆನೋವಾಗಬಹುದು ಎಂದು ಹೇಳಲಾಗಿದೆ.

Gubbi News: ಗುಬ್ಬಿ ಕ್ಷೇತ್ರದಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿಂದ ರಾಜೀನಾಮೆ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 25, 2022 | 10:22 AM

ತುಮಕೂರು: ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ದಿನ ಜೆಡಿಎಸ್​ನ 100ಕ್ಕೂ ಹೆಚ್ಚು ಕಾರ್ಯಕರ್ತರು (JDS Workers) ರಾಜೀನಾಮೆ ನೀಡಿದ್ದಾರೆ. ಬಿದರೆ ಗ್ರಾಮದ ಕಾರ್ಯಕರ್ತರ ಸಂಖ್ಯೆಯೇ ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್​​ಗೆ (SR Srinivas) ಪಕ್ಷದಿಂದ ಅನ್ಯಾಯವಾಗಿದೆ ಎಂದು ಖಂಡಿಸಿರುವ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಬಹುದು ಎಂದು ವಿಶ್ಲೇಷಿಸಲಾಗಿದ್ದು, ಇದು ಮುಂದುವರಿದರೆ ಜೆಡಿಎಸ್​ಗೆ ತಲೆನೋವಾಗಬಹುದು ಎಂದು ಹೇಳಲಾಗಿದೆ. ಬೂತ್ ಸಮಿತಿ ಸೇರಿ ಹಲವು ಘಟಕಗಳಿಗೆ ರಾಜೀನಾಮೆ ಕೊಡುತ್ತಿರುವ ಕಾರ್ಯಕರ್ತರು ‘ವಾಸಣ್ಣ ಅಭಿಮಾನಿ ಬಳಗ’ ಸೇರುತ್ತಿದ್ದಾರೆ. ಗುಬ್ಬಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿದ್ದು ಸಂಘಟನೆಯೂ ಬಲಿಷ್ಠವಾಗಿದೆ.

ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಎಚ್​.ಡಿ.ಕುಮಾರಸ್ವಾಮಿ ನಡುವೆ ಸಣ್ಣಮಟ್ಟದಲ್ಲಿ ಹೊಗೆಯಾಡಿದ ಭಿನ್ನಮತ ನಂತರದ ದಿನಗಳಲ್ಲಿ ದೊಡ್ಡದಾಗಿ ಬೆಳೆಯಿತು. ಗುಬ್ಬಿ ಕ್ಷೇತ್ರದಲ್ಲಿ ಬೇರೊಬ್ಬರನ್ನು ಅಭ್ಯರ್ಥಿಗಾಗಿ ನಿಲ್ಲಿಸಲು ಎಚ್​.ಡಿ.ಕುಮಾರಸ್ವಾಮಿ ಮುಂದಾದ ನಂತರ ಪರಿಸ್ಥಿತಿ ಮತ್ತಷ್ಟು ವಿಷಮಿಸಿತು. ರಾಜ್ಯಸಭೆ ಚುನಾವಣೆ ವೇಳೆ ಶ್ರೀನಿವಾಸ್ ಅಡ್ಡಮತ ಹಾಕಿದಾಗಲೂ ಇಬ್ಬರ ನಡುವೆ ಒಂದುಸುತ್ತಿನ ವಾಗ್ವಾದ ನಡೆದಿತ್ತು.

ತಿಥಿ ಕಾರ್ಡ್ ತಯಾರಿಸಿ ವಿಕೃತಿ

ಕಳೆದ ಜೂನ್ ತಿಂಗಳಲ್ಲಿ ರಾಜ್ಯಸಭೆ ಚುನಾವಣೆಯ ನಂತರ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ತಿಥಿ ಕಾಡ್೯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಪ್ರಚಂಡ ಭೈರವ ಹೆಸರಿನಲ್ಲಿ ಸಿದ್ಧವಾಗಿದ್ದ ಈ ಪೋಸ್ಟ್​ ಜೆಡಿಎಸ್​ನ ವಾಟ್ಸಾಪ್​ ಗ್ರೂಪ್​ಗಳಲ್ಲಿ ಹರಿದಾಡಿತ್ತು. ‘ಜೂನ್​ 10ರಂದು ಎಸ್​.ಆರ್.ಶ್ರೀನಿವಾಸ್ ನಿಧನರಾಗಿದ್ದಾರೆ, ಜೂನ್​ 21ರಂದು ಸ್ವಕ್ಷೇತ್ರ ಗುಬ್ಬಿಯಲ್ಲಿ ಕೈಲಾಸ ಸಮಾರಾಧಾನೆ ನಡೆಯಲಿದೆ’ ಎಂದು ಕಾರ್ಡ್​ನಲ್ಲಿ ಬರೆಯಲಾಗಿತ್ತು. ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್ ಅಭಿಮಾನಿಗಳು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೂ ಶ್ರದ್ಧಾಂಜಲಿ ಕಾರ್ಡ್ ಸಿದ್ಧಪಡಿಸಿದ್ದರು. ಕುಮಾರಸ್ವಾಮಿ ತಿಥಿ ಪೋಸ್ಟ್​ಗಳೂ ವೈರಲ್ ಆಗಿದ್ದವು.

ಗುಬ್ಬಿ ಶಾಸಕ ಎಸ್​.ಆರ್.ಶ್ರೀನಿವಾಸ್ ಹಲವು ಬಾರಿ ಕಾಂಗ್ರೆಸ್​ನ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಖಾಸಗಿ ಮತ್ತು ಸಾರ್ವಜನಿಕವಾಗಿ ಇಬ್ಬರೂ ನಾಯಕರೂ ಭೇಟಿಯಾಗಿದ್ದ ವಿಚಾರ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿತ್ತು. ಶ್ರೀನಿವಾಸ್ ಅವರನ್ನು ಸ್ವತಃ ಸಿದ್ದರಾಮಯ್ಯ ಬಹಿರಂಗವಾಗಿ ಕಾಂಗ್ರೆಸ್​ಗೆ ಆಹ್ವಾನಿಸಿದ್ದರು. ಆದರೆ ಗುಬ್ಬಿಯ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಶ್ರೀವಾಸ್ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡಮಟ್ಟದಲ್ಲಿ ಬೆಳೆದರೆ ಕಷ್ಟ. ಗುಬ್ಬಿಯಲ್ಲಿ ಜೆಡಿಎಸ್ ಮತ್ತು ಎಸ್​.ಆರ್.ಶ್ರೀನಿವಾಸ್ ವಿರುದ್ಧ ಈವರೆಗೆ ರಾಜಕಾರಣ ಮಾಡಿಕೊಂಡು ಬಂದವರಿಗೆ ಅವರ ಕಾಂಗ್ರೆಸ್ ಸೇರ್ಪಡೆ ಇಷ್ಟವಾಗುತ್ತಿಲ್ಲ.