ಸಿದ್ಧಗಂಗಾ ಮಠದ ಜಮೀನಲ್ಲೂ ಅಕ್ರಮ ಆರೋಪ: ಸಿಎಂ ಭೇಟಿಯಾಗಲು ಹೋಗಿದ್ದರೇ ಸ್ವಾಮೀಜಿ? ಅಸಲಿ ಮಾಹಿತಿ ಬಿಚ್ಚಿಟ್ಟ ಸಿದ್ದಲಿಂಗ ಶ್ರೀ

ಸಿದ್ಧಗಂಗಾ ಮಠದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದಲಿಂಗ ಶ್ರೀ ಸ್ಪಷ್ಟನೆ ನೀಡಿದ್ದಾರೆ. ನೈಸ್ ಯೋಜನೆಗೆ ನೀಡಿದ್ದ 7 ಎಕರೆ 39 ಗುಂಟೆ ಜಮೀನಿನ ಪೈಕಿ ಬಳಕೆಯಾಗದ ಭೂಮಿಯನ್ನು ವಾಪಸ್ ಕೇಳಿದ್ದು ನಿಜ ಎಂದು ಅವರು ತಿಳಿಸಿದ್ದಾರೆ. ಸಿಎಂ ಭೇಟಿಯ ಬಗ್ಗೆ ಕೇಳಿಬಂದ ಆರೋಪಗಳ ಸಂಬಂಧ ಅಸಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ವಿವರಗಳಿಗೆ ಮುಂದೆ ಓದಿ.

ಸಿದ್ಧಗಂಗಾ ಮಠದ ಜಮೀನಲ್ಲೂ ಅಕ್ರಮ ಆರೋಪ: ಸಿಎಂ ಭೇಟಿಯಾಗಲು ಹೋಗಿದ್ದರೇ ಸ್ವಾಮೀಜಿ? ಅಸಲಿ ಮಾಹಿತಿ ಬಿಚ್ಚಿಟ್ಟ ಸಿದ್ದಲಿಂಗ ಶ್ರೀ
ಸಿದ್ದಲಿಂಗ ಶ್ರೀ
Image Credit source: tv9
Edited By:

Updated on: Oct 01, 2026 | 1:05 PM

ಮುಖ್ಯಾಂಶಗಳು

  • ​​ಸಿದ್ಧಗಂಗಾ ಮಠದ ಜಮೀನು ವಿವಾದಕ್ಕೆ ಸ್ವಾಮೀಜಿ ಸ್ಪಷ್ಟನೆ
  • ಬಳಕೆಯಾಗದ ಜಮೀನು ವಾಪಸ್ ನೀಡಲು ಮನವಿ ಮಾಡಿದ್ದು ನಿಜವೆಂದ ಶ್ರೀಗಳು
  • ಸಿಎಂ ಭೇಟಿಯ ಅಸಲಿ ಮಾಹಿತಿ ಬಹಿರಂಗಪಡಿಸಿದ ಶ್ರೀ

ತುಮಕೂರು, ಅಕ್ಟೋಬರ್ 1: ನೈಸ್ ಯೋಜನೆಗೆಂದು ಸಿದ್ಧಗಂಗಾ ಮಠದ 7 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಅದರಲ್ಲಿ 1 ಎಕರೆ ಮಾತ್ರ ಬಳಕೆ ಮಾಡಲಾಗಿದೆ. ಉಳಿದ ಭೂಮಿಯನ್ನು ಮಠಕ್ಕೆ ವಾಪಸ್ ಕೊಡುವ ವಿಚಾರವಾಗಿ ಸ್ವಾಮೀಜಿ ಜತೆ ಸಿಎಂ ಉದ್ಧಟತನದಿಂದ ನಡೆದುಕೊಂಡಿದ್ದಾರೆ ಎಂಬರ್ಥದಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಸಿಎಂ ಡಿಕೆ ಶಿವಕುಮಾರ್ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ್ದರು. ಇದೀಗ ಮಠದ ಜಮೀನು ವಿಚಾರವಾಗಿ ಖುದ್ದು ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀ ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ಏನಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸಿದ್ದಲಿಂಗ ಶ್ರೀ ಹೇಳಿದ್ದೇನು?

‘‘ಹಲವು ವಿಚಾರಗಳ ಬಗ್ಗೆ ಚರ್ಚಿಸುವುದಕ್ಕಾಗಿ ಮುಖ್ಯಮಂತ್ರಿಗಳ ಭೇಟಿಗೆ ತೆರಳಿದ್ದು ನಿಜ. ನೈಸ್ ರಸ್ತೆಗೆ ಬಳಸದೇ ಇರುವ ಜಮೀನನ್ನು ವಾಪಸ್ ಕೊಡಿ ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು ಮಠದ 7 ಎಕರೆ 39 ಗುಂಟೆ ಜಮೀನನ್ನು (ಸೋಮಪುರದಲ್ಲಿ ಮಠಕ್ಕೆ ದಾನವಾಗಿ ಸಿಕ್ಕಿದ್ದ ಜಾಗ) ಯೋಜನೆಗೆ ಎಂದು ನೀಡಿದ್ದೆವು. 2001-2002 ರ ಸಂದರ್ಭದಲ್ಲಿ ಅಶೋಕ್ ಖೇಣಿಯವರೇ ಆ ಬಗ್ಗೆ ಮಠಕ್ಕೆ ಬಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಮಠಕ್ಕೆ ನಿಗದಿತ ಆದಾಯ ಬರುವಂತೆ ಮಾಡಿಕೊಡುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೆ, ಅವ್ಯಾವುವೂ ಈಡೇರಿಲ್ಲ. ಆ ಬಗ್ಗೆ ಮಠದಿಂದ ಹಲವು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಮಠದಿಂದ ಪಡೆದ 1.5 ಎಕರೆ ಭೂಮಿ ಯೋಜನೆಗೆ ಬಳಕೆಯಾಗಿದ್ದು ಬಿಟ್ಟರೆ ಉಳಿದ ಜಮೀನು ಖಾಲಿ ಬಿಡಲಾಗಿದೆ. ಸರ್ಕಾರದ ಯೋಜನೆಗೆಂದು ಸ್ವಾಧೀನ ಮಾಡಿದ ಜಾಗ 25 ವರ್ಷಗಳಿಂದ ಬಳಕೆಯಾಗದೆ ಇದ್ದರೆ ಅದನ್ನು ಮೂಲ ಭೂಮಾಲೀಕರಿಗೆ ಕೊಡಬೇಕೆಂಬ ನಿಯಮ ಇದೆಯಂತೆ. ಈ ಮಧ್ಯೆ, ಮಠದವರೇ ಜಾಗ ನೀಡುತ್ತಿದ್ದಾರೆ ಎಂದು ಅನೇಕ ರೈತರು ಸಹ ಜಮೀನು ನೀಡಿದ್ದರು. ರೈತರು ನಮ್ಮನ್ನು ಬಹಳ ಒತ್ತಾಯಿಸಿದರು. ರಸ್ತೆ ಆದಮೇಲೆ ಜಾಗವನ್ನ ಟೋಲ್​​ಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಭಕ್ತರಿಗಷ್ಟೇ ಅಲ್ಲ, ನಮಗೂ ತುಂಬಾ ನೋವಾಯ್ತು. ಹಾಗಾಗಿ ಮಠದ ಜಾಗವನ್ನು ನಾವು ವಾಪಸ್ ಕೇಳುತ್ತಿದ್ದೇವೆ’’ ಎಂದು ಸಿದ್ದಲಿಂಗ ಶ್ರೀ ತಿಳಿಸಿದ್ದಾರೆ.

ಆಶೀರ್ವಾದ ಮಾಡುವುದಕ್ಕೆ ಮಾತ್ರ ಬನ್ನಿ ಎಂದಿದ್ದರೇ ಸಿಎಂ? ಸಿದ್ದಲಿಂಗ ಶ್ರೀ ಸ್ಪಷ್ಟನೆ

ಅರ್ಜಿ ಕೊಡುವುದಕ್ಕೆ ಬರಬೇಡಿ, ಆಶೀರ್ವಾದ ಮಾಡಲು ಮಾತ್ರ ಬನ್ನಿ ಎಂದು ಡಿಕೆ ಶಿವಕುಮಾರ್ ಹೇಳಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿ, ‘‘ನಮಗೆ ಅನಿವಾರ್ಯ ಇತ್ತು, ಸಮಸ್ಯೆ ಯಾರಿಗೆ ಹೇಳೋಣ? ಅದಕ್ಕಾಗಿ ಸಿಎಂ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದೆವು. ಅವರು ಸಿಎಂ ಆಗಿ ಒಂದು ತಿಂಗಳಾಗಿರಬಹುದು. ಆದರೆ ನಾನೇ ಭೇಟಿಗೆ ಭೇಟಿಗೆ ಬರುತ್ತೇನೆಂದು ಅವರ ಸಿಬ್ಬಂದಿಗೆ ತಿಳಿಸಿರಲಿಲ್ಲ. ಹೀಗಾಗಿ ಮಠದಿಂದ ಬೇರಾರೋ ಬರುತ್ತಾರೆಂದು ಅವರು ತಿಳಿದಿದ್ದರು. ಹಾಗಾಗಿ ಅವರು, ನೀವು ಆಶೀರ್ವಾದ ಮಾಡುವುದಕ್ಕೆ ಮಾತ್ರ ಬನ್ನಿ. ನೀವು ಕರೆದರೆ ನಾನೇ ಬರುತ್ತೇನೆ ಎಂಬ ಸಂಸ್ಕಾರದ ಮಾತುಗಳನ್ನು ಹೇಳಿದರು’’ ಎಂದು ತಿಳಿಸಿದ್ದಾರೆ.

ಅಶೋಕ್ ಖೇಣಿ ಹೇಳಿಕೆ ಅಲ್ಲಗಳೆದ ಸಿದ್ದಲಿಂಗ ಶ್ರೀ

ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಸಂದರ್ಭ ಮಠಕ್ಕೆ ತೆರಳಿದ್ದಾಗಿಯೂ ಚಿನ್ನದ ಕರಡಿಗೆ ನೀಡಿದ್ದಾಗಿಯೂ ಅಶೋಕ್ ಖೇಣಿ ಹೇಳಿದ್ದಾರೆ ಎನ್ನಲಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದಲಿಂಗ ಶ್ರೀ, ಅವುಗಳನ್ನು ನಿರಾಕರಿಸಿದ್ದಾರೆ. ಖೇಣಿಯವರು ಆ ಸಂದರ್ಭದಲ್ಲಿ ಮಠಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದಲಿಂಗ ಶ್ರೀ ಮಾತಿನ ವಿಡಿಯೋ

ಏನು ಹೇಳಿದ್ದರು ಕುಮಾರಸ್ವಾಮಿ?

‘‘ನೈಸ್ ಯೋಜನೆಗಾಗಿ ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿ ಸರ್ಕಾರ ಸ್ವಾಧೀನಪಡಿಸಿತ್ತು. ಆದರೆ ರಸ್ತೆಗೆ 1 ಎಕರೆ ಹೋಗಿದೆ, ಉಳಿದ ಭೂಮಿ ಕೊಡಿ ಎಂದು ಶ್ರೀಗಳು ಅರ್ಜಿ ಕೊಟ್ಟಿದ್ದಾರೆ. ಈ ವಿಚಾರಕ್ಕೆ ನನ್ನ ಮನೆಗೆ ಬರಬೇಡಿ. ಆಶೀರ್ವಾದ ಮಾಡೋಕೆ ಮಾತ್ರ ಬನ್ನಿ ಎಂದು ಸಿದ್ಧಗಂಗಾ ಸ್ವಾಮೀಜಿಗೆ ಸಿಎಂ ಹೇಳ್ತಾರೆ’’ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಜತೆಗೆ, ಸಿಎಂ ಡಿಕೆಶಿ ಮಾತನಾಡಿದ್ದು ಎನ್ನಲಾದ ಆಡಿಯೋವನ್ನೂ ಬಿಡುಗಡೆ ಮಾಡಿದ್ದರು.

ಅಶೋಕ್​ ಖೇಣಿ ವಿರುದ್ಧ ದೂರು

Complaint Against Ashoka Kheny In Tumkur Over False Statement Against Siddaganga Seer
ಈಮಧ್ಯೆ, ಸಿದ್ಧಗಂಗಾ ಮಠದ ಶಿವಕುಮಾರಶ್ರೀ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಆರೋಪದಲ್ಲಿ ನೈಸ್​ ಸಂಸ್ಥೆ ಮುಖ್ಯಸ್ಥ ಅಶೋಕ್​ ಖೇಣಿ ವಿರುದ್ಧ ತುಮಕೂರು ಪೊಲೀಷ್​ ವರಿಷ್ಠಾಧಿಕಾರಿಗೆ ವಿಜಯಸೇನೆ ರಾಜ್ಯಾಧ್ಯಕ್ಷ ದೀಪಕ್ ಎಂಬುವರಿಂದ ದೂರು ಸಲ್ಲಿಕೆಯಾಗಿದೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಅಶೋಕ್ ಖೇಣಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ. ಪ್ರಚಾರಕ್ಕೋಸ್ಕರ ಮಠ ಹಾಗೂ ಶ್ರೀಗಳ ವಿರುದ್ಧ ಸುಳ್ಳು ಹೇಳಿಕೆ ನೀಡಿ ಮಠಕ್ಕೆ ಮತ್ತು ಸ್ವಾಮೀಜಿಗಳಿಗೆ ಅವಮಾನ ಮಾಡಿರುತ್ತಾರೆ. ಅಶೋಕ್​ ಖೇಣಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್​​ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ: ಹಲವು ದಾಖಲೆಗಳೂ ರಿಲೀಸ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Thu, 1 October 26

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us