ಸರಿಯಾಗಿ ಓದಲಿಲ್ಲ ಎಂದು ವಿದ್ಯಾರ್ಥಿನಿ ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ ಶಿಕ್ಷಕಿಗೆ ಶಿಕ್ಷೆ; 3 ವರ್ಷ ಜೈಲು, 10 ಸಾವಿರ ರೂ ದಂಡ
ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲ ಎಂದು ಆಕೆ ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ ಶಿಕ್ಷಕಿಗೆ ಶಿಕ್ಷೆ ನೀಡಿ ತುಮಕೂರಿನ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತುಮಕೂರು: ವಿದ್ಯಾರ್ಥಿನಿಗೆ ಹೊಡೆದಿದ್ದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತುಮಕೂರು ಹೆಚ್ಚುವರಿ ಸಿವಿಲ್, ಜೆಎಂಎಫ್‌ಸಿಯಿಂದ ಆದೇಶ ಹೊರಡಿಸಲಾಗಿದೆ. 2011ರ ಫೆ.17ರಂದು ಶಿಕ್ಷಕಿ ವಿದ್ಯಾರ್ಥಿನಿಗೆ ಹೊಡೆದಿದ್ದರು. ಸದ್ಯ ಈಗ ಇದರ ತೀರ್ಪು ಹೊರ ಬಿದ್ದಿದೆ.
ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲ ಎಂದು ಆಕೆ ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ ಶಿಕ್ಷಕಿಗೆ ಶಿಕ್ಷೆ ನೀಡಿ ತುಮಕೂರಿನ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. 2011 ರ ಫೆಬ್ರವರಿ 17 ರಂದು ತಿಲಕ್ ಪಾರ್ಕ್ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ತುಮಕೂರು ನಗರದ ಭಾರತ್ ಮಾತಾ ಶಾಲೆಯ ಶಿಕ್ಷಕಿ ಫರಹತ್ ಫಾತಿಮಾ ವಿದ್ಯಾರ್ಥಿನಿಗೆ ಹೊಡೆದಿದ್ದರು. ಪಿಎಸ್ಐ ದಿನೇಶ್ ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶಾರದಾ ಕೊಪ್ಪದ ವಿಚಾರಣೆ ನಡೆಸಿ ಶಿಕ್ಷಕಿಗೆ ಕಲಂ 325 ರ ಅನ್ವಯ ಶಿಕ್ಷೆ ಪ್ರಕಟ ಮಾಡಿದ್ದಾರೆ. ಸರ್ಕಾರದ ಪರ ಜಿ ಬಸವರಾಜ್ ವಾದ ಮಂಡಿಸಿದ್ದರು.
ಮಾಧ್ಯಮ ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ ತುಮಕೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2021-22 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ( ಎಸ್ ಸಿಪಿ/ಟಿಎಸ್ ಪಿ) ಯಡಿ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ತಿಂಗಳ ಅಪ್ರೆಂಟಿಸ್ ತರಬೇತಿ ನೀಡಲು ಆಸಕ್ತ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯಡಿ 22 ಮಂದಿ ಹಾಗೂ ಗಿರಿಜನ ಉಪಯೋಜನೆ ಪರಿಶಿಷ್ಟ ಪಂಗಡದಡಿ 8 ಮಂದಿ ಅಭ್ಯರ್ಥಿಗಳನ್ನ ಗರಿಷ್ಠ ಅಂಕಗಳ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ತರಬೇತಿಗೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿ ನೀಡಿ 15,000 ರೂಪಾಯಿ ಸ್ಪೈಫಂಡ್ ನೀಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷೆಯಲ್ಲಿ ಪರಿಣಿತರಾಗಿದ್ದು, ವಯಸ್ಸು 40 ವರ್ಷದೊಳಗಿರಬೇಕು. ಅರ್ಜಿಯೊಂದಿಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ , ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇನ್ನಿತರೆ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಈ ಮೇಲ್ ಮೂಲಕ ಕಳಿಸಬೇಕು. ಈ ಮೇಲ್ ವಿಳಾಸ: traineekma2022@gmail.com ಮೂಲಕ ಅಥವಾ ಅಂಚೆ ಮೂಲಕ ಜನವರಿ 27 ರೊಳಗೆ ಕಳಿಸಬೇಕು ಎಂದು ಸೂಚಿಸಲಾಗಿದೆ.
ಅನಾರೋಗ್ಯದಿಂದ ಬೇಸತ್ತು ಯುವತಿ ನೇಣಿಗೆ ಶರಣು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ಚಂದನಾ(22) ಎಂಬ ಯುವತಿ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಹಳ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೌತುಕ ಮೂಡಿಸಿದ ‘19.20.21’ ಕನ್ನಡ ಸಿನಿಮಾ; ಮಂಸೋರೆ ಹೊಸ ಚಿತ್ರ ಅನೌನ್ಸ್
Published On - 9:05 am, Wed, 19 January 22