ಒಂದೇ ಒಂದು ಬೀಡಿಯಿಂದ ಶುರುವಾದ ಜಗಳ ಏನು ಮಾಡಿದೆ ನೋಡಿ: ಭೀಕರ ಸತ್ಯ ಸಿಸಿಟಿವಿಯಲ್ಲಿ ಸೆರೆ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬೀಡಿ ಜಗಳ ತಾರಕಕ್ಕೇರಿ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ತಾಯಿಯ ನಿಂದನೆಗೆ ಸಿಟ್ಟಾದ ದಾದಾಪೀರ್ ಕಲ್ಲಿನಿಂದ ಜಜ್ಜಿ ಶಿವರಾಜ್‌ನನ್ನು ಕೊಂದಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ನೆರವಿನಿಂದ 8 ದಿನಗಳ ಕಾರ್ಯಾಚರಣೆ ನಡೆಸಿ, ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೆಯ ದ್ವೇಷದ ಬಗ್ಗೆಯೂ ತನಿಖೆ ಮುಂದುವರಿದಿದೆ.

ಒಂದೇ ಒಂದು ಬೀಡಿಯಿಂದ ಶುರುವಾದ ಜಗಳ ಏನು ಮಾಡಿದೆ ನೋಡಿ: ಭೀಕರ ಸತ್ಯ ಸಿಸಿಟಿವಿಯಲ್ಲಿ ಸೆರೆ
ತುಮಕೂರು ಕೊಲೆ ಪ್ರಕರಣ
Image Credit source: Tv9 kannada
Edited By:

Updated on: Oct 27, 2026 | 7:15 PM

ತುಮಕೂರು, ಅ,27: ಕುಡಿದ ಮತ್ತಿನಲ್ಲಿ ಕೇಳಿದ ಒಂದೇ ಒಂದು ಬೀಡಿಗಾಗಿ ಶುರುವಾದ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ. ತನ್ನ ತಾಯಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಎಂಬ ಕಾರಣಕ್ಕೆ ಕುಡಿತದ ಅಮಲಿನಲ್ಲಿದ್ದ ಯುವಕನೊಬ್ಬ ಸಿಟ್ಟಿನಿಂದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ಸವಾಲಾಗಿ ಸ್ವೀಕರಿಸಿದ್ದ ಪೊಲೀಸರು, ಬರೋಬ್ಬರಿ 8 ದಿನಗಳ ಸತತ ಕಾರ್ಯಾಚರಣೆ ಹಾಗೂ ಸಿಸಿಟಿವಿ (CCTV) ಸುಳಿವಿನ ಆಧಾರದ ಮೇಲೆ ಹಂತಕನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಬಜಾರ್ ರಸ್ತೆಯ ಅಂಗಡಿಯೊಂದರ ಹಿಂಭಾಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಎಂಬಾತನ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ರಕ್ತಸಿಕ್ತ ಕೊಲೆ ಎಂದು ತಿಳಿದುಬರುತ್ತಿದ್ದಂತೆ ಪೊಲೀಸರ ತನಿಖೆ ತೀವ್ರಗೊಂಡಿತ್ತು. ಬಂಧಿತ ಆರೋಪಿಯನ್ನು ಮೂಲತಃ ಕಾರವಾರದ ವೈರ್ ಬೆಂಡಿಂಗ್ ಕೆಲಸಗಾರ, ಪ್ರಸ್ತುತ ಚಿಕ್ಕನಾಯಕನಹಳ್ಳಿಯ ಬನಶಂಕರಿಯಲ್ಲಿ ವಾಸವಿದ್ದ ದಾದಾಪೀರ್ (24) ಎಂದು ಗುರುತಿಸಲಾಗಿದೆ.

ಅಂದು ರಾತ್ರಿ ನಡೆದಿದ್ದೇನು?

ಅಕ್ಟೋಬರ್ 13ರ ರಾತ್ರಿ ಕೊಲೆಯಾದ ಶಿವರಾಜ್ ಹಾಗೂ ಆರೋಪಿ ದಾದಾಪೀರ್ ಇಬ್ಬರೂ ಪ್ರತ್ಯೇಕವಾಗಿ ಮಧ್ಯಪಾನ ಮಾಡಿದ್ದರು. ಎಣ್ಣೆ ಹೊಡೆದು ಟೈಟ್ ಆಗಿದ್ದ ಶಿವರಾಜ್ ಬಜಾರ್ ರಸ್ತೆಯ ಅಂಗಡಿಯ ಬಳಿ ಕುಳಿತಿದ್ದಾಗ, ಅದೇ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ದಾದಾಪೀರ್‌ನನ್ನು ಕರೆದು ಒಂದು ಬೀಡಿ ಕೇಳಿದ್ದಾನೆ. ಬೀಡಿ ಕೊಡುವ ವೇಳೆ ಕುಡಿದ ಅಮಲಿನಲ್ಲಿದ್ದ ಇಬ್ಬರ ನಡುವೆ ಸಣ್ಣ ಮಾತುಕತೆ ಶುರುವಾಗಿದೆ. ಈ ವೇಳೆ ಶಿವರಾಜ್ ದಿಢೀರನೆ ದಾದಾಪೀರ್ ತಾಯಿಯ ಬಗ್ಗೆ ಅತ್ಯಂತ ಕೆಟ್ಟದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ಇದರಿಂದ ತೀವ್ರ ಕೆರಳಿದ ದಾದಾಪೀರ್, ಸ್ಥಳದಲ್ಲೇ ಇದ್ದ ಬಂಡೆಕಲ್ಲಿನಿಂದ ಶಿವರಾಜನ ತಲೆಗೆ ಜಜ್ಜಿ ಕೊಲೆ ಮಾಡಿ ಕತ್ತಲಲ್ಲಿ ಕಾಲ್ಕಿತ್ತಿದ್ದ.

ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ಹಗರಣ: ಶಾಸಕ ವಿರೇಂದ್ರ ಪಪ್ಪಿಗೆ ಮತ್ತೆ ಸಂಕಷ್ಟ; ಇಡಿಯಿಂದ ಆಸ್ತಿ ಮುಟ್ಟುಗೋಲು

ಪೊಲೀಸರ ನಿದ್ದೆಗೆಡಿಸಿದ್ದ ಪ್ರಕರಣಕ್ಕೆ ಸಿಸಿಟಿವಿ ನೀಡಿತು ಕ್ಲೂ:

ಪ್ರಕರಣದ ಆರಂಭದ ಹಂತದಲ್ಲಿ ಯಾವುದೇ ಸಾಕ್ಷ್ಯಗಳು ಸಿಗದೆ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಚಿಕ್ಕನಾಯಕನಹಳ್ಳಿ ಪೊಲೀಸರು ಸುದೀರ್ಘ 8 ದಿನಗಳ ಕಾಲ ಸತತ ಕಾರ್ಯಾಚರಣೆ ನಡೆಸಿ, ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಫುಟೇಜ್‌ಗಳನ್ನು ಜಾಲಾಡಿದಾಗ ಆರೋಪಿ ದಾದಾಪೀರ್ ನಡೆದು ಹೋಗುತ್ತಿದ್ದ ಹೆಜ್ಜೆಗುರುತು ಸಿಕ್ಕಿದೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬೀಡಿ ವಿಚಾರ ಹಾಗೂ ನಿಂದನೆ ಹೊರತುಪಡಿಸಿ ಕೊಲೆಯ ಹಿಂದೆ ಬೇರೆನಾದರೂ ಹಳೆಯ ದ್ವೇಷವಿತ್ತೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us