
ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತ ಸರ್ಕಾರವು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣಮಾಡುತ್ತಿದ್ದು, ಮತ್ತೊಂದೆಡೆ ದೇಶಾದ್ಯಂತ ಇಂದು ನೀಟ್ ಮರುಪರೀಕ್ಷೆ ನಡೆಯುತ್ತಿದೆ. ರಾಜ್ಯ, ದೇಶ, ಅಂತಾರಾಷ್ಟ್ರೀಯ, ಸಿನಿಮಾ, ಕ್ರೀಡೆ ಸೇರಿ ಈ ದಿನದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.
ಇಂದು (ಜೂನ್ 21) ನಡೆದ ನೀಟ್ ಮರುಪರೀಕ್ಷೆ ಮುಕ್ತಾಯಗೊಂಡಿದೆ. ಮಧ್ಯಾಹ್ನ 2ರಿಂದ 3.15ರೆವರೆಗೆ ನಡೆದ ಪರೀಕ್ಷೆ ಬರೆದು ವಿದ್ಯಾರ್ಥಿಗಳು ಹೊರ ಬಂದಿದ್ದಾರೆ. ಆದ್ರೆ, ಈ ಬಾರಿ ಪರೀಕ್ಷೆ ಟಪ್ ಇತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಇಂದು (ಜೂನ್ 21) ನೀಟ್ ಮರುಪರೀಕ್ಷೆ ನಡೆದಿದೆ. ಆದ್ರೆ, ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಓರ್ವ ವಿದ್ಯಾರ್ಥಿ ಬೆಂಗಳೂರು ಟ್ರಾಫಿಕ್ನಿಂದ ಪರೀಕ್ಷೆಯಿಂದ ವಂಚಿತನಾಡಿದ್ದರೆ, ಮತ್ತೋರ್ವ ಬಸ್ ಮಿಸ್ ಆಗಿ ತಡವಾಗಿ ಪರೀಕ್ಷೆ ಕೇಂದ್ರಕ್ಕೆ ಬಂದಿದ್ದಾನೆ. ಇನ್ನೋರ್ವ ಹಳೇ ಹಾಲ್ ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿದ್ದಾನೆ.
ಬಿಕೆ ಹರಿಪ್ರಸಾದ್ ಅವರು ಇಂದು (ಜೂನ್ 21) ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಹಿಂದಿನ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಧ್ವಜ ಹಸ್ತಾಂತರಿಸಿ ಬಿಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿಯ ಸಾರಥಿಯಾಗಿ ಪಟ್ಟಾಭಿಷೇಕ ಮಾಡಲಾಯ್ತು. ಈ ವೇಳೆ ಮಾತನಾಡಿದ ಹರಿಪ್ರಸಾದ್, ಕಾಂಗ್ರೆಸ್ ನಾಯಕರು ಬೊಕ್ಕೆ, ಹೂವಿನ ಹಾರಗಳನ್ನು ತರ್ತೀರುವುದನ್ನು ಬಿಟ್ಟು ಅದರ ಹಣವನ್ನು ಕೆಪಿಸಿಸಿ ಕಚೇರಿಗೆ ನೀಡಿ. ಕೆಪಿಸಿಸಿ ಕಚೇರಿಗೆ ಬಂದಾಗ ಬೊಕ್ಕೆ ಬದಲು ದುಡ್ಡು ಕೊಟ್ಟುಬಿಡಿ. ಇದು ಡಿಜಿಟಲ್ ಯುಗ, ನಿಮ್ಮ ಹಣದಲ್ಲಿ ಪಕ್ಷ ಕಟ್ಟುತ್ತೇವೆ. ಶ್ರೀಮಂತರಿಂದ ಹಣ ಪಡೆಯುವುದು ಸರಿಯಲ್ಲ. ಅವರಿಂದ ಹಣ ಪಡೆದರೆ ಅವರಿಗೆ ಸರೆಂಡರ್ ಆಗಬೇಕಾಗುತ್ತದೆ. ನೀವು ಸಣ್ಣವರಾದರೂ ಪರವಾಗಿಲ್ಲ 100 ಹಾಕಿದರೂ ಪರವಾಗಿಲ್ಲ. ನಿಮ್ಮ ದುಡ್ಡಲ್ಲಿ ಪಕ್ಷ ಕಟ್ಟಿ ನಿಮಗೆ ನಾವು ಸರೆಂಡರ್ ಆಗುತ್ತೇವೆ ಎಂದರು.
ಕೆಪಿಸಿಸಿ ನೂತನ ಅಧ್ಯಕ್ಷ ಹರಿಪ್ರಸಾದ್ಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ನಡೆದಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶ್ವ ಯೋಗ ದಿನ ಆಚರಿಸಲಾಗಿದೆ. 4 ಸಾವಿರಕ್ಕೂ ಅಧಿಕ ಕೈದಿಗಳು ಸಾಮೂಹಿಕ ಯೋಗಾಭ್ಯಾಸ ಮಾಡಿದ್ದು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್,
ಜೈಲಿನ ಅಧಿಕಾರಿಗಳು, ಸಿಬ್ಬಂದಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸದಸ್ಯರು ಭಾಗಿಯಾಗಿದ್ದಾರೆ.
ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ ನಡೆದಿದೆ. ಮಾದವಾರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದಲ್ಲಿನ ಈ ನಿಲ್ದಾಣದಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಮ್ಮ ಮುಂದೆ ಬೆಲೆ ಏರಿಕೆ, ಹಣದುಬ್ಬರದಂತಹ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಹೀಗಾಗಿ ಕೆಪಿಸಿಸಿಯ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅವರೇನು ಹೊಸಬರಲ್ಲ, ಸಾಮಾನ್ಯ ಕಾರ್ಯಕರ್ತನಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದಾರೆ. ಬಿ.ಕೆ .ಹರಿಪ್ರಸಾದ್ ಡಿಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡುವುದಕ್ಕೆ ಎಲ್ಲ ನಾಯಕರಿದ್ದಾರೆ. ದೆಹಲಿಯಲ್ಲಿ ನಾವು ಅಧಿಕಾರಕ್ಕೆ ಬರಬೇಕು. ಇಲ್ಲದಿದ್ದರೆ ಮೋದಿ, RSS, ಬಿಜೆಪಿ ಸೇರಿ ದೇಶ ಹಾಳು ಮಾಡುತ್ತಿರುವವರು ಮನೆಗೆ ಹೋಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೈಸೂರಿಗೆ 40ಕ್ಕೂ ಅಧಿಕ ಶಂಕಿತ ಬಾಂಗ್ಲಾ ವಲಸಿಗರು ಬಂದಿರುವ ಆರೋಪ ಕೇಳಿಬಂದಿದೆ. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ವಲಸಿಗರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದಿದ್ದು, ವಾರಕ್ಕೊಮ್ಮೆ ಕೋಲ್ಕತ್ತಾದಿಂದ ಬರುವ ಔರಾ ಎಕ್ಸಪ್ರೆಸ್ ರೈಲಿನ ಮೂಲಕ ಇವರು ನಗರಕ್ಕೆ ಬಂದಿದ್ದಾರೆ. ಐಡಿ ಕಾರ್ಡ್ ಸೇರಿ ಇತರೆ ದಾಖಲೆ ಪರಿಶೀಲಿಸಿದಾಗ ಬಹುತೇಕ ಐಡಿ ಕಾರ್ಡ್ ನಕಲಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ವಲಸಿಗರ ಬಳಿ ಪಶ್ಚಿಮ ಬಂಗಾಳದ ಐಡಿ ಕಾರ್ಡ್ ಇದ್ದು, ಮೈಸೂರಿನಿಂದ ಕೇರಳ, ಮಡಿಕೇರಿ ಕಡೆ ತೆರಳಲು ಇವರು ಬಂದಿದ್ದರು ಎನ್ನಲಾಗಿದೆ. ಎಲ್ಲರನ್ನೂ ಖುದ್ದು ವಿಚಾರಣೆಗೆ ರೈಲ್ವೆ ಪೊಲೀಸರು ಕರೆದೊಯ್ದಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಕೂಡ ಭೇಟಿ ನೀಡಿದ್ದಾರೆ.
ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಣಜಿ ಕ್ರಾಸ್ ಬಳಿ ನಡೆದಿದೆ. ಸಾರಿಗೆ ಬಸ್-ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರನ ದಾರುಣ ಅಂತ್ಯವಾಗಿದೆ. ವಾಂಝಾರಿಕೇಡ್ ಗ್ರಾಮದ ನಿವಾಸಿ ಶೌಕತ್ ಅಲಿ ಅಲ್ಲಾವುದ್ಧಿನ್(60) ಮೃತರಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದೆ. ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯ ಸೆಂಚುರಿ ಬರೆಯುವ ಅವಕಾಶವನ್ನ ಕೇವಲ 6 ರನ್ಗಳ ಅಂತರದಲ್ಲಿ ಕೈಚೆಲ್ಲಿಕೊಂಡಿದ್ದಾರೆ. ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿದ್ದ ವೈಭವ್, 28 ಎಸೆತಗಳಲ್ಲಿ 94 ರನ್ ಗಳಿಸಿ ಔಟಾಗಿದ್ದಾರೆ. ಮತ್ತಷ್ಟು ಓದಿ.
RSS ಮುಖ್ಯಸ್ಥ ಭಾಗವತ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಸಂಬಂಧ ಬೆಳಗಾವಿಯಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಆರ್ಎಸ್ಎಸ್ ನೋಂದಣಿ ಆಗಿಲ್ಲ ಎಂದು ಟೀಕಿಸುತ್ತಿದ್ದಾರೆ. ಆದರೆ ಹಿಂದೂಗಳಿಗೆ ತೊಂದರೆ ಆದಾಗ ನಾನಿದ್ದೇನೆಂದು RSS ಹೇಳುತ್ತೆ. ಹಿಂದೂ ಸಂಘಟನೆ ಒಡೆಯಲು ಪ್ರಿಯಾಂಕ್ ಖರ್ಗೆ ಹೀಗೆ ಮಾಡುತ್ತಿದ್ದು, ರಾಷ್ಟ್ರೀಯತೆಗೆ ಗೌರವ ಕೊಡುವ ಸಂಘಕ್ಕೆ ಸಪೋರ್ಟ್ ಮಾಡಬೇಕು. ಪ್ರಿಯಾಂಕ್ ಖರ್ಗೆ ಪಾಕಿಸ್ತಾನಕ್ಕೆ ಜೈ ಅನ್ನೋರ ಪರವಾಗಿದ್ದು, ಭಾರತ್ ಮಾತಾ ಕೀ ಜೈ ಅನ್ನೋರ ವಿರುದ್ಧ ಇದ್ದಾರೆ ಎಂದವರು ಆರೋಪಿಸಿದ್ದಾರೆ.
ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಗನೂರ ಗ್ರಾಮದಲ್ಲಿ ನಡೆದಿದೆ. ಭದ್ರಸ್ವಾಮಿ (32) ಸದಾಶಿವ ಸ್ವಾಮಿ (10) ಮೃತರಾಗಿದ್ದು, ಎಮ್ಮೆ ಮೇಯಿಸಲೆಂದು ಹೋದಾಗ ಅವಘಡ ನಡೆದಿದೆ. ನಿನ್ನೆ ಸಂಜೆ ಎಮ್ಮೆ ವಾಪಸ್ ಆದರೂ ಕೂಡ ಅವನ್ನು ಮೇಯಿಸಲೆಂದು ತೆರಳಿದ್ದ ಭದ್ರಸ್ವಾಮಿ, ಸದಾಶಿವ ಸ್ವಾಮಿ ವಾಪಸ್ ಮನೆಗೆ ಬಂದಿರಲಿಲ್ಲ. ಅನುಮಾನ ಬಂದು ಹುಡುಕಿದಾಗ ಹೊಂಡದ ಬಳಿ ಬಟ್ಟೆ, ಮೊಬೈಲ್ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಶವ ಹೊರತೆಗೆದಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
4 ಗುರುತಿನ ಚೀಟಿ ಹೊಂದಿರುವ ಆರೋಪ ಹಿನ್ನೆಲೆ ಬಹುಭಾಷಾ ನಟ ಪ್ರಕಾಶ್ ರಾಜ್ಗೆ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ಸಮನ್ಸ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಬೆಂಗಳೂರಿನ 48ನೇ ACJM ಕೋರ್ಟ್ನಿಂದ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿ 4 ಕಡೆಗಳಲ್ಲಿ ನಟ ಪ್ರಕಾಶ್ ರಾಜ್ ಗುರುತಿನ ಚೀಟಿ ಹೊಂದಿರುವ ಆರೋಪ ಇದ್ದು, ವಕೀಲ ದಿಲೀಪ್ ಕುಮಾರ್ ಎಂಬುವವರು ಈ ಸಂಬಂಧ 2019ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಆಯುಕ್ತರಿಗೆ , ಕೇಂದ್ರ ಚುನಾವಣಾ ಆಯೋಗಕ್ಕೆ ಕಂಪ್ಲೇಂಟ್ ಕೊಟ್ಟಿದ್ದರು. ಆದರೆ ಈ ಎಲ್ಲೂ ಕ್ರಮ ಕೈಗೊಳ್ಳದಕ್ಕೆ ಅವರು ಕೋರ್ಟ್ ಮೊರೆ ಹೋಗಿದ್ದರು.
ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ಹಾಕಿ ವೈರಲ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದು, ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಸುದ್ದಿಗಳನ್ನು ನಂಬದಂತೆ ವಿದ್ಯಾರ್ಥಿಗಳಿಗೆ NTA ಸೂಚನೆ ನೀಡಿದೆ.
ಟೈರ್ ಸ್ಫೋಟಗೊಂಡು ಬೈಕ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಗೆನ್ನೆರಹಳ್ಳಿ ಗೇಟ್ ಬಳಿ ನಡೆದಿದೆ. ಬೈಕ್ ಸವಾರರಾದ ಕೆಜಿಎಫ್ ನಗರದ ವಿನಯ್ ಮತ್ತು ವಿನಾಯಕ್ ಮೃತ ದುರ್ದೈವಿಗಳಾಗಿದ್ದು, ಬಸ್ನಲ್ಲಿದ್ದವರಿಗೆ ಘಟನೆಯಲ್ಲಿ ಏನೂ ಆಗಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿದ್ದು, ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ಹಿನ್ನೆಲೆ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಪರಿಷತ್ ಚುನಾವಣೆಯಲ್ಲಿ ನಮ್ಮಿಂದ 4 ಅಡ್ಡ ಮತದಾನ ಆಗಿದೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು, ಶಾಸಕರ ನಡವಳಿಕೆ ಬಗ್ಗೆ ಬೇಸರ ಪಟ್ಟಿದ್ದಾರೆ. ಹೀಗಾಗಿ ಎಲ್ಲ 63 ಶಾಸಕರ ಮೇಲೂ ಅನುಮಾನ ಪಡುವಂತಾಗಿದೆ. ಹೀಗಾಗಿ ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರೆಂದು ಶ್ರೀಕ್ಷೇತ್ರದಲ್ಲೇ ಗೊತ್ತಾಗಲಿ ಎಂದವರು ತಿಳಿಸಿದ್ದಾರೆ. ಮತ್ತಷ್ಟು ಓದಿ.
ಇಂದು ಮಧ್ಯಾಹ್ನ 2ರಿಂದ 5.15ರವರೆಗೆ ನೀಟ್ ಮರುಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಪರೀಕ್ಷಾರ್ಥಿಗಳಿಗೆ ಸೂಚಿಸಲಾಗಿದೆ. ಮಧ್ಯಾಹ್ನ 1.30ರ ನಂತರ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಇರುವುದಿಲ್ಲ. ವಿಕಲಚೇತನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ಅಂದರೆ 6.20ರವರೆಗೆ ಅವಖಾಶ ಇರಲಿದೆ. ದೇಶ-ವಿದೇಶಗಳ 565 ನಗರಗಳಲ್ಲಿ ನೀಟ್ ಮರು ಪರೀಕ್ಷೆ ನಡೆಯಲಿದ್ದು, 22.7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ ಸಮಸ್ಯೆ ಆಗದಂತೆ 2ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ, ಜಿಪಿಎಸ್ ಟ್ರ್ಯಾಕಿಂಗ್, ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದ್ದು, ಬಯೋಮೆಟ್ರಿಕ್ ದೋಷವಿದ್ದಲ್ಲಿ ಮ್ಯಾನುವಲ್ ವೆರಿಫಿಕೇಶನ್‌ಗೆ NTA ಅವಕಾಶ ನೀಡಿದೆ.
ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯಿಂದ ಅಂತಾರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮ ನಡೆದಿದೆ. ಕೇಂದ್ರ ಸಚಿವ ವಿ. ಸೋಮಣ್ಣ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ವಿವಿಧ ಗಣ್ಯರು ಯೋಗಾಭ್ಯಾಸದಲ್ಲಿ ಭಾಗಿಯಾಯಾಗಿದ್ದಾರೆ.
ಮಂಡ್ಯ ನಗರದ ಪಿಇಟಿ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಬಳಿಕ ಸಾರ್ವಜನಿಕರ ಜೊತೆ ಕುಮಾರಸ್ವಾಮಿ ಯೋಗ ಮಾಡಿದ್ದು, ಈ ವೇಳೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು. ಚಂದ್ರವನ ಆಶ್ರಯದ ತ್ರಿನೇತ್ರ ಶಿವಯೋಗಿ ಸ್ವಾಮೀಜಿ, ಡಿಸಿ ಡಾ.ಕುಮಾರ್ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಜಿಪಂ ಸಿಇಒ ನಂದಿನಿ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿ ಮೊಹಮ್ಮದ್ ರೋಷನ್, ಕಮಿಷನರ್ ಭೂಷಣ ಬೋರಸೆ, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿ ಇತರ ಅಧಿಕಾರಿಗಳು ಭಾಗಿಯಾಗಿದ್ದಾರೆ.
12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಆಯುಷ್ ಇಲಾಖೆ ವತಿಯಿಂದ ವಿಧಾನಸೌಧ ಮುಂಭಾಗದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದ್ದು, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಆರೋಗ್ಯ ಇಲಾಖೆ ಸಚಿವ ಯು. ಟಿ. ಖಾದರ್, ಆಯುಷ್ ಇಲಾಖೆ ಆಯುಕ್ತ ಡಾ. ಸುನೀಲ್ , ಸಿನಿ ತಾರೆಯರಾದ ಸುಧಾರಾಣಿ, ವಸಿಷ್ಠ ಸಿಂಹ, ಹರಿಪ್ರಿಯ ಸೇರಿದಂತೆ ಹಲವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ವಿಶ್ವಯೋಗ ದಿನಾಚರಣೆ ಹಿನ್ನೆಲೆ ಮುಂಜಾನೆ 5ರಿಂದಲೇ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಉಳಿದ ದಿನಗಳಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಓಡಾಟ ಶುರುವಾಗುತ್ತಿತ್ತು. ಆದರೆ ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ಬೇಗ ಆರಂಭಿಸಲಾಗಿದೆ.
ಮಾನವನ ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಯೋಗ ದಿವ್ಯೌಷಧ. ಯೋಗ ಕೇವಲ ಆಸನ ಮಾತ್ರವಲ್ಲ, ಮನುಷ್ಯರನ್ನು ಒಗ್ಗೂಡಿಸುತ್ತೆ ಎಂದು ಕೋಲ್ಕತ್ತಾದಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಸಮತೋಲಿತ ಜೀವನಕ್ಕಾಗಿ ಯೋಗ ಅತಿ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Published On - 7:01 am, Sun, 21 June 26