
ಬೆಂಗಳೂರು, ಮೇ 24: ಕರ್ನಾಟಕದಲ್ಲಿ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು (Minimum Wage) ಶೇ 60 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿಗೆ 16 ಜನರು ಬಲಿಯಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು, ಬೆಂಗಳೂರಿನಲ್ಲಿ ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸಮಾಧಿ ಜಾಗದ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರವು 81 ವಲಯಗಳ ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಕಾರ್ಮಿಕ ಇಲಾಖೆಯು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೇ 22ರ ಶುಕ್ರವಾರವೇ ಈ ಅಧಿಕೃತ ಆದೇಶ ಹೊರಡಿಸಿದೆ. ಹೊಸ ನಿಯಮದಂತೆ ಇಡೀ ರಾಜ್ಯವನ್ನು 3 ವಲಯಗಳಾಗಿ ವಿಂಗಡಿಸಲಾಗಿದ್ದು, ಬೆಂಗಳೂರಿನಲ್ಲಿ ಉನ್ನತ ಕುಶಲ ಕಾರ್ಮಿಕರ ಮಾಸಿಕ ವೇತನ 31,114 ರೂ.ಗೆ ಏರಲಿದೆ. ಈ ಹೊಸ ಕನಿಷ್ಠ ವೇತನ ಸೌಲಭ್ಯವು ಇ-ಕಾಮರ್ಸ್, ಕೊರಿಯರ್ ಮತ್ತು ಖಾಸಗಿ ಶಾಲಾ ಸಿಬ್ಬಂದಿಗೂ ಅನ್ವಯವಾಗಲಿದ್ದು, ಈ ಹಿಂದೆ ಇದ್ದ 4 ಪ್ರತ್ಯೇಕ ವಲಯಗಳ ವರ್ಗೀಕರಣ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ.
ಇದನ್ನೂ ಓದಿ ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ!
ದೇಶದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಮಿತಿಮೀರುತ್ತಿದ್ದು, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿ ಮತ್ತು ತೀವ್ರ ಬಿಸಿಲಿಗೆ ಕಳೆದ ಕೆಲವು ದಿನಗಳಲ್ಲಿ ಒಟ್ಟು 16 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ತುರ್ತು ಪರಿಶೀಲನಾ ಸಭೆ ನಡೆಸಿದ ಬಳಿಕ ಜಯಶಂಕರ್ ಭೂಪಾಲಪಲ್ಲಿಯಲ್ಲಿ 4, ವಾರಂಗಲ್, ಕರೀಮನಗರ, ನಿಜಾಮಾಬಾದ್‌ನಲ್ಲಿ ತಲಾ 3 ಹಾಗೂ ಗದ್ವಾಲ್, ರಂಗಾರೆಡ್ಡಿ, ಸೂರ್ಯಪೇಟ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿ ಅವರ ನಿರ್ದೇಶನದಂತೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಇದನ್ನೂ ಓದಿ ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು
‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಪ್ರಶ್ನಿಸಿ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ರಾಜ್‌ಕುಮಾರ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಚೇತನ್ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವೂ ರಾಜ್‌ಕುಮಾರ್ ಅಭಿಮಾನಿಗಳೇ, ಆದರೆ ಸರ್ಕಾರದ ಪಾಲಿಸಿಯಲ್ಲಿನ ಪಕ್ಷಪಾತದ ಬಗ್ಗೆ ನಾನು ಮೂರು ಸಾಲಿನ ಪೋಸ್ಟ್ ಮಾಡಿದ್ದೆ. ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಕರ್ನಾಟಕದ ಜನ ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ನಮಗೆ ಸಮಾನತೆಯ, ನ್ಯಾಯದ, ವೈಜ್ಞಾನಿಕತೆಯ ಸಮಾಜ ಬೇಕು” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Sun, 24 May 26