ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!

ತಮಿಳುನಾಡಿನ ಮೆಟ್ಟುಪಾಳ್ಯಂ ಕ್ಷೇತ್ರದಿಂದ ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿರುವ ಸುನೀಲ್ ಆನಂದ್ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆಯ ವಡಕೆಘಟ್ಟ ಗ್ರಾಮದವರು. ಸುನೀಲ್ ಆನಂದ್ ಸಾಧನೆಗೆ ವಡಕೆಘಟ್ಟ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿರುವ ಅವರ ಸಹೋದರ ಸಂಬಂಧಿ ಸುಬ್ರಮಣಿ ‘ಟಿವಿ9’ ಜತೆ ಮಾತನಾಡಿದ್ದು, ವಿವರಗಳು ಇಲ್ಲಿವೆ.

ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!
ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್
Image Credit source: tv9
Edited By:

Updated on: May 06, 2026 | 7:57 AM

ತುಮಕೂರು, ಮೈಸೂರು, ಮೇ 6: ತಮಿಳುನಾಡು (Tamil Nadu Election) ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ದೊಡ್ಡ ಸಂಚಲನ ಮೂಡಿಸಿದೆ. ಈ ಪಕ್ಷದಿಂದ ಸ್ಪರ್ಧಿಸಿ ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ (Sunil Anand) ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು ಎಂಬುದು ವಿಶೇಷ. ದಶಕಗಳ ಹಿಂದೆ ಉದ್ಯಮಕ್ಕಾಗಿ ತಮಿಳುನಾಡಿಗೆ ವಲಸೆ ಹೋಗಿದ್ದ ಕುಟುಂಬದ ಕುಡಿ ಇಂದು ಅಲ್ಲಿನ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.

ಮುಖ್ಯಾಂಶಗಳು

  • ತಮಿಳುನಾಡಿನ ಮೆಟ್ಟುಪಾಳ್ಯಂ ಕ್ಷೇತ್ರದಿಂದ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಸುನೀಲ್ ಆನಂದ್ ಗೆಲುವು.
  • ಶಾಸಕ ಸುನೀಲ್ ಆನಂದ್ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವಡಕೆಘಟ್ಟ ಗ್ರಾಮದವರು.
  • ಸುಮಾರು 96 ವರ್ಷಗಳ ಹಿಂದೆ ಬರಗಾಲದ ಸಂದರ್ಭದಲ್ಲಿ ಉದ್ಯಮ ಅರಸಿ ತಮಿಳುನಾಡಿಗೆ ವಲಸೆ ಹೋಗಿದ್ದ ಇವರ ಕುಟುಂಬ.

ಬರಗಾಲ ತಂದ ಬದಲಾವಣೆ

ಸುಮಾರು 96 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದ ಸಂದರ್ಭದಲ್ಲಿ ಸುನೀಲ್ ಆನಂದ್ ಅವರ ಮುತ್ತಾತ ಬೋರೇಗೌಡರು ಉದ್ಯಮ ಆರಂಭಿಸುವ ಸಲುವಾಗಿ ಊರು ತೊರೆದು ತಮಿಳುನಾಡು ಸೇರಿದ್ದರು. ನಂತರ ಅವರ ಮಗ ಲಿಂಗೇಗೌಡ ಹಾಗೂ ಮೊಮ್ಮಗ ನಾಗರಾಜು ಅವರು ಅಲ್ಲಿಯೇ ನೆಲೆಸಿದರು. ನಾಗರಾಜು ಅವರ ಪುತ್ರನೇ ಈ ಸುನೀಲ್ ಆನಂದ್. ತಮಿಳುನಾಡಿನಲ್ಲೇ ಶಿಕ್ಷಣ ಮುಗಿಸಿರುವ ಸುನೀಲ್ ಆನಂದ್ ಅವರು ಅಲ್ಲಿ ಜಮೀನ್ದಾರರಾಗಿ, ಅಡಿಕೆ ತೋಟ, ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಪ್ರತಿವರ್ಷ ಅವರು ತಮ್ಮ ಮೂಲ ಗ್ರಾಮವಾದ ವಡಕೆಘಟ್ಟಕ್ಕೆ ಭೇಟಿ ನೀಡುವುದನ್ನು ಮರೆತಿಲ್ಲ.

ಸುನೀಲ್ ಆನಂದ್ ರಾಜಕೀಯ ಪಯಣ

ಸುಮಾರು 30 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಸುನೀಲ್ ಆನಂದ್ ಅವರು ಮೊದಲು ಎಐಎಡಿಎಂಕೆ (AIADMK) ಪಕ್ಷದಲ್ಲಿದ್ದರು. ಆದರೆ ವಿಜಯ್ ಅವರ ಜನಪರ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಒಂದು ವರ್ಷದ ಹಿಂದೆ ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷ ಸೇರುವ ಮೊದಲು ಅವರು ಕುಟುಂಬ ಸಮೇತ ತಮ್ಮ ಗ್ರಾಮ ವಡಕೆಘಟ್ಟಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಈ ಗೆಲುವಿನ ಬಗ್ಗೆ ‘ಟಿವಿ9’ ಜೊತೆ ಮಾತನಾಡಿರುವ ಸುನೀಲ್ ಅವರ ಸೋದರ ಸಂಬಂಧಿ ಸುಬ್ರಮಣಿ ಶ್ರೀಕಂಠೇಗೌಡ ಅವರು, ‘ನಮ್ಮ ಕುಟುಂಬದವರು ಶಾಸಕರಾಗಿರುವುದು ಬಹಳ ಸಂತೋಷ ತಂದಿದೆ, ಅವರು ಮುಂದೊಂದು ದಿನ ಸಚಿವರಾಗಲಿ’ ಎಂದು ಹಾರೈಸಿದ್ದಾರೆ.

ಸುಬ್ರಮಣಿ ಶ್ರೀಕಂಠೇಗೌಡ ಮಾತಿನ ವಿಡಿಯೋ

ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ

ಸುನೀಲ್ ಆನಂದ್ ಅವರ ಕುಟುಂಬಕ್ಕೆ ಮೊದಲಿನಿಂದಲೂ ರಾಜಕೀಯ ನಂಟಿದೆ. ಹೆಚ್​​ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುನೀಲ್ ಅವರ ಸಂಬಂಧಿ ಎಚ್.ಬಿ. ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಇವರು ವಡಕೆಘಟ್ಟ ಗ್ರಾಮದಿಂದ ಶಾಸಕರಾದ ಎರಡನೇ ವ್ಯಕ್ತಿಯಾಗಿದ್ದಾರೆ. ಸುನೀಲ್ ಅವರ ಮತ್ತೊಬ್ಬ ಸೋದರ ಸಂಬಂಧಿ ಸುಬ್ರಮಣಿ ಶ್ರೀಕಂಠೇಗೌಡ ಅವರು ಪ್ರಸ್ತುತ ತುರುವೇಕೆರೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 am, Wed, 6 May 26

Follow Us