ಮದುವೆ ಮನೆಯಲ್ಲಿ ಲಾಠಿಚಾರ್ಜ್: ಕೊರಗರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮದ ಭರವಸೆ
ಕೊರಗ ಜನಾಂಗದ ಮದುವೆ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿದರು ಎನ್ನುವ ಕಾರಣಕ್ಕೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದ್ದರು. ಘಟನೆ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಕೋಟ ಪೊಲೀಸ್ ಠಾಣೆಯ ಪೊಲೀಸರು ಕೊರಗ ಜನಾಂಗಕ್ಕೆ ಸೇರಿದವರ ಮದುವೆ ಸಂದರ್ಭದಲ್ಲಿ ನಡೆಸಿರುವ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಎಎಸ್ಐ ಸಂತೋಷ್ ಸೇರಿದಂತೆ ಐವರು ಸಿಬ್ಬಂದಿಗೆ ಮುಂದಿನ ಸೂಚನೆಯವರೆಗೆ ಕರ್ತವ್ಯಕ್ಕೆ ಹಾಜರಾಗದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಸೂಚನೆ ನೀಡಿದ್ದಾರೆ. ಕೊರಗ ಜನಾಂಗದ ಮದುವೆ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿದರು ಎನ್ನುವ ಕಾರಣಕ್ಕೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದ್ದರು. ಘಟನೆ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಪ್ರಕರಣ ಸಂಬಂಧ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ಎನ್.ವಿಷ್ಣುವರ್ಧನ, ವಿಚಾರಣೆ ಮುಗಿಯುವ ತನಕ ಕೋಟ ಠಾಣೆಯ ಪೊಲೀಸರನ್ನು ಬೇರೆಡೆಗೆ ನಿಯೋಜಿಸಲಾಗುವುದು. ಉಡುಪಿ ಡಿವೈಎಸ್ಪಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ನಾಳೆ ಸಂಜೆಯ ಒಳಗೆ ತನಿಖೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾತ್ರಿ 10 ಗಂಟೆಯ ನಂತರವೂ ಲೌಡ್ಸ್ಪೀಕರ್ ಚಾಲು ಇದ್ದ ಕಾರಣ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಬ್ಬಂದಿಯೊಬ್ಬರು ಶಬ್ದ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದರು. ಮತ್ತೆ 11 ಗಂಟೆಗೆ ದೂರು ಬಂದ ಕಾರಣ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿದ್ದರು. ಹಲ್ಲೆ ನಡೆದಿರುವುದು ನಿಜವಾಗಿದ್ದಲ್ಲಿ ಸಿಬ್ಬಂದಿ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆ ಬಗ್ಗೆ ನಂಬಿಕೆ ಇರಲಿ ಎಂದು ವಿನಂತಿಸಿದರು.
ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ಜನಾಂಗ ಇದು. ಮದುವೆಯ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ಮಾಡಿ ಯಾವುದೇ ಕಾರಣವಿಲ್ಲದೆ ಮದುಮಗ, ಮಹಿಳೆಯರು, ಮುದುಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿರುವ ರಾಜೇಶ್ ಕೊರಗ ಎಂಬವರಿಗೆ ಬುಧವಾರ ಮದುವೆ ನಿಶ್ಚಯವಾಗಿತ್ತು. ಮದುವೆಯ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ಸೋಮವಾರ ರಾತ್ರಿ ಪೊಲೀಸರಿಂದ ಅನುಮತಿ ಪಡೆದು ಡಿಜೆ ಅಳವಡಿಸಲಾಗಿತ್ತು. ರಾತ್ರಿ 11 ಗಂಟೆಯವರೆಗೆ ಮೆಹಂದಿ ಕಾರ್ಯಕ್ರಮ ನಡೆಸಲು ಅವಕಾಶವೂ ಸಿಕ್ಕಿತು. ಆದರೆ ಇದ್ದಕ್ಕಿದ್ದಂತೆ ಪೊಲೀಸರು ಯಾರೋ ಮೌಖಿಕ ದೂರು ನೀಡಿದ್ದಾರೆ ಎಂಬ ಕಾರಣಕ್ಕೆ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಮನೆಯವರಿಗೆ ಸೂಚಿಸಿದರು. ಅವರು ಸೌಂಡ್ ಕಡಿಮೆ ಮಾಡಿದ್ದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಏಳೆಂಟು ಪೊಲೀಸರ ಜೊತೆ ಕೋಟ ಎಸ್ಐ ಸಂತೋಷ್ ಸಿಬ್ಬಂದಿ ಸಹಿತ ಮದುವೆ ಮನೆಗೆ ಬಂದು ನೆರೆದಿದ್ದವರಿಗೆ ಊಟವನ್ನೂ ಮಾಡಲು ಬಿಡದೆ ಹಲ್ಲೆ ನಡೆಸಿದರು. ಕಾಲು ಹಿಡಿದು ಕೇಳಿಕೊಳ್ಳಲು ಹೋದ ವೃದ್ಧೆಯೊಬ್ಬರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಕರುಣೆ ಇಲ್ಲದೆ ನಡೆದ ದಾಳಿಯಿಂದ ಮದುವೆ ಮನೆ ರಣಾಂಗಣವಾಗಿದೆ. ದಯವಿಟ್ಟು ಹೊಡೆಯಬೇಡಿ ಎಂದು ಮನೆಯಲ್ಲಿದ್ದವರು ಅಂಗಲಾಚಿದರೂ ಕೇಳದೆ ಎಸ್ಐ ಸಂತೋಷ್ ದರ್ಪ ಮೆರೆದಿದ್ದಾರೆ. ತಂಡದಲ್ಲಿ ಒಬ್ಬೇ ಒಬ್ಬ ಮಹಿಳಾ ಸಿಬ್ಬಂದಿ ಇಲ್ಲದಿದ್ದರೂ, ಮಹಿಳೆಯರ ಮೈಮುಟ್ಟಿ ತಳ್ಳಿದ್ದಾರೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ನಡೆದಿರುವುದು ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯೂ ಸಮೀಪದಲ್ಲಿಯೇ ಇದೆ. ಈ ಬಗ್ಗೆ ದೂರು ದಾಖಲಿಸಲು ಹೋದರೆ ಕೋಟ ಪೊಲೀಸರು ಸೂಕ್ತಕ್ರಮ ಕೈಗೊಂಡಿಲ್ಲ. ಮದುವೆ ಮನೆಯಿಂದ ನಾಲ್ವರನ್ನು ಕರೆದೊಯ್ದು ಬಟ್ಟೆ ಬಿಚ್ಚಿ ಪೊಲೀಸ್ ಠಾಣೆಯಲ್ಲಿ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲೂ ಅವಕಾಶ ಕೊಟ್ಟಿಲ್ಲ. ಕೊರಗ ಸಮುದಾಯಕ್ಕೆ ಸೇರಿದ ಈ ಕುಟುಂಬಕ್ಕೆ ಹೋರಾಟ ನಡೆಸುವ ಶಕ್ತಿಯೂ ಇಲ್ಲ. ಇದನ್ನು ಅರಿತಿರುವ ಪೊಲೀಸರು, ರಾಜಿ ನಡೆಸಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾರೆ. ಆದರೆ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಮುಂದಾಗಿದ್ದಾರೆ. ಕೊರಗ ಸಮುದಾಯದವರಿಂದ ಮಾಹಿತಿಪಡೆತಲಾಗಿದೆ. ಈ ಬಗ್ಗೆ ಮಾತನಾಡಿದರೆ ಬುಧವಾರ ಮದುವೆ ನಡೆಸಲು ಬಿಡುವುದಿಲ್ಲ ಎಂದೂ ಕೆಲವರು ಬೆದರಿಕೆ ಹಾಕಿರುವ ಮಾತುಗಳೂ ಕೇಳಿಬಂದವು.
ಉಡುಪಿ ಜಿಲ್ಲೆಯಲ್ಲಿ ಪ್ರಭಾವಿಗಳು ಸಾಕಷ್ಟು ಕಾರ್ಯಕ್ರಮ ನಡೆಸುತ್ತಾರೆ ಆದರು ಯಾರೂ ಅದನ್ನು ಪ್ರಶ್ನಿಸುವುದಿಲ್ಲ? ನಾಲ್ಕು ದಶಕಗಳ ನಂತರ ಬಡವರ ಮನೆಯೊಂದರಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದ್ದಾರೆ, ಅದು ಪೊಲೀಸರ ಕಣ್ಣು ಕುಕ್ಕುತ್ತೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಸಂಬಳದ ಬಾಕಿ ಹಣ ₹9000 ಕೇಳಿದ್ದಕ್ಕೆ ದಲಿತ ವ್ಯಕ್ತಿಯ ಕೈ ಕತ್ತರಿಸಿದ ಮಾಲೀಕ ಇದನ್ನೂ ಓದಿ: ನಾನೂ ದಲಿತ; ಅವಕಾಶ ವಂಚಿತರೆಲ್ಲರೂ ದಲಿತರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ