
ಬೈಂದೂರು, ಸೆ.7: ಒಂದೆಡೆ ನೀಲಿಯ ಹೊದಿಕೆಯೊದ್ದ ಅರಬ್ಬೀ ಸಮುದ್ರ, ಮತ್ತೊಂದೆಡೆ ಹಸಿರಿನ ಸಿರಿ ಕಂಗೊಳಿಸುವ ಒತ್ತಿನೆಣೆ ಗುಡ್ಡ, ನಡುವೆ ಸಮುದ್ರವನ್ನು ಅಪ್ಪಿಕೊಳ್ಳುವ ಸುಮನಾವತಿ (ಬೈಂದೂರು) ನದಿ. ಇಂತಹ ಅಪರೂಪದ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಬೈಂದೂರಿನ ಸೋಮೇಶ್ವರ ಬೀಚ್ ಇದೀಗ ಬರೋಬ್ಬರಿ 11.32 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಪ್ರವಾಸಿ ಸೌಲಭ್ಯಗಳೊಂದಿಗೆ ಹೊಸ ರೂಪ ಪಡೆದುಕೊಂಡು ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ ವತಿಯಿಂದ ೨೦೨೩ರಲ್ಲಿ ಆರಂಭಗೊಂಡ ಅಭಿವೃದ್ಧಿ ಯೋಜನೆಯು ಇದೀಗ ಅಂತಿಮ ಹಂತ ತಲುಪಿದ್ದು, ಕರಾವಳಿ ಪ್ರವಾಸೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಿದ್ಧವಾಗಿದೆ.
ಕಡಲ ಸೌಂದರ್ಯವನ್ನು ಸವಿಯುತ್ತಾ ಪ್ರವಾಸಿಗರು ಹೆಜ್ಜೆ ಹಾಕಲು ಸುಂದರವಾದ ಪಾದಚಾರಿ ಮಾರ್ಗ ಹಾಗೂ ಅಲ್ಲಲ್ಲಿ ಕುಳಿತು ವಿಶ್ರಮಿಸಲು ಆಸನಗಳನ್ನು ನಿರ್ಮಿಸಲಾಗಿದೆ. ವಿಶಾಲ ವಾಹನ ನಿಲುಗಡೆ, ತಂಪಾದ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸಾರ್ವಜನಿಕ ನೈರ್ಮಲ್ಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ವಿಶಾಲ ಪ್ರವಾಸಿ ಸೌಲಭ್ಯ ಕಲ್ಪಿಸಲು ಸರ್ಕಾರಿ ಜಾಗದ ಕೊರತೆಯಿದ್ದ ಕಾರಣ ಪ್ರವಾಸೋದ್ಯಮ ಇಲಾಖೆಯು 2.7 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯೋಜನೆಯನ್ನು ಪೂರ್ಣಗೊಳಿಸಿದೆ. ಕಡಿಮೆ ಆಳ ಹಾಗೂ ಅತ್ಯಂತ ಸ್ವಚ್ಛ ಕಡಲತೀರ ಹೊಂದಿರುವ ಸೋಮೇಶ್ವರದಲ್ಲಿ ಸುಮನಾವತಿ ನದಿಯು ಸಮುದ್ರವನ್ನು ಸೇರುವ ಜಾಗದಲ್ಲಿ ಅತ್ಯಂತ ಸುಂದರವಾದ ಡೆಲ್ಟಾ ಪ್ರದೇಶ ರೂಪುಗೊಂಡಿದೆ.
ಉಡುಪಿ-ಕೊಲ್ಲೂರು-ಮುರುಡೇಶ್ವರ-ಗೋಕರ್ಣ ಕರಾವಳಿ ಪ್ರವಾಸೋದ್ಯಮ ಸರ್ಕ್ಯೂಟ್‌ನಲ್ಲಿ ಸೋಮೇಶ್ವರ ಬೀಚ್ ಪ್ರಮುಖ ಸ್ಥಾನ ಪಡೆದಿದೆ. ಈ ಅಭಿವೃದ್ಧಿ ಕಾಮಗಾರಿಯಿಂದಾಗಿ ಬೈಂದೂರು ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಚುರುಕುಗೊಳ್ಳಲಿವೆ.
ಇದನ್ನೂ ಓದಿ: ಕಲಬುರಗಿ, ರಾಯಚೂರಿನಲ್ಲೇ ಅತಿ ಹೆಚ್ಚು ಫೇಕ್ ಡಾಕ್ಟರ್ಸ್: 582 ಕ್ಲಿನಿಕ್‌ಗಳ ವಿರುದ್ಧ ಆರೋಗ್ಯ ಇಲಾಖೆಯಿಂದ ಶಿಸ್ತುಕ್ರಮ
ಹೋಟೆಲ್, ರೆಸ್ಟೋರೆಂಟ್, ಸ್ಥಳೀಯ ಆಹಾರ ಮಳಿಗೆಗಳು, ಸಾರಿಗೆ ಹಾಗೂ ಟೂರ್ ಗೈಡ್‌ಗಳ ಉದ್ಯೋಗಕ್ಕೆ ಹೊಸ ಉತ್ತೇಜನ ಸಿಗಲಿದ್ದು, ಸ್ಥಳೀಯ ಆರ್ಥಿಕತೆಗೆ ಭಾರಿ ಬೆಂಬಲ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡೆ ಸೇರಿದಂತೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಒತ್ತಿನೆಣೆ ಗುಡ್ಡದ ಹಸಿರು ಹಾಗೂ ಸುಂದರ ಸೂರ್ಯಾಸ್ತದ ಸೊಬಗನ್ನು ಸವಿಯಲು ಇನ್ಮುಂದೆ ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರಿಗೆ ಸೋಮೇಶ್ವರ ಬೀಚ್ ಅತ್ಯುತ್ತಮ ತಾಣವಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ