ರಾಜ್ಯದಲ್ಲಿ ಹಿಜಾಬ್ ಹೋರಾಟ ಆರಂಭಿಸಿದ್ದು ಸಿಎಫ್ಐ: ಶಾಸಕ ರಘುಪತಿ ಭಟ್
ರಾಜ್ಯದಲ್ಲಿ ಹಿಜಾಬ್ ಹೋರಾಟ ಆರಂಭಿಸಿದ್ದು ನಾವಲ್ಲ, ಸಿಎಫ್ಐನವರು ಬಂದು ಹಿಜಾಬ್ ವಿವಾದ ಪ್ರಾರಂಭಿಸಿದರು ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ: ರಾಜ್ಯದಲ್ಲಿ ಹಿಜಾಬ್ (Hijab) ಹೋರಾಟ ಆರಂಭಿಸಿದ್ದು ನಾವಲ್ಲ, ಸಿಎಫ್ಐನವರು, ಅವರೇ (CFI) ಬಂದು ಹಿಜಾಬ್ ವಿವಾದ ಪ್ರಾರಂಭಿಸಿದರು ಎಂದು ಉಡುಪಿ (Udupi) ಬಿಜೆಪಿ ಶಾಸಕ ರಘುಪತಿ ಭಟ್ (Raghupati Bhat) ಹೇಳಿದ್ದಾರೆ. ಹಿಜಾಬ್ ಗಲಾಟೆಯಿಂದ ಮುಸ್ಲಿಂ ವಿದ್ಯಾರ್ಥಿನಿಯರ (Students) ಶಿಕ್ಷಣಕ್ಕೆ ವಂಚನೆಯಾಗಿದೆ ಎಂದು ಸಿಎಫ್ಐ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ವಿದ್ಯಾಭ್ಯಾಸ ಬೇಕು ಎನ್ನುವ ಹೆಣ್ಣುಮಕ್ಕಳು ಕಲಿಯುತ್ತಿದ್ದಾರೆ. ಯೂನಿಫಾರ್ಮ್ ಕೋಡ್ ಪಾಲಿಸಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನಮ್ಮ ಕಾಲೇಜಿನಲ್ಲಿ ಹಿಂದಿನಿಂದಲೂ ಯೂನಿಫಾರ್ಮ್ ಕೋಡ್ ಪಾಲನೆ ಆಗುತ್ತಿತ್ತು. ಕಳೆದ 20 ವರ್ಷದಿಂದ ಯೂನಿಫಾರ್ಮ್ ಕೋಡ್ ಇದ್ದ ಬಗ್ಗೆ ದಾಖಲೆ ಕೋರ್ಟಿಗೆ ಸಲ್ಲಿಸಿದ್ದೆವು. ಅದೇ ಕಾರಣಕ್ಕೆ ನಮಗೆ ಹೈಕೋರ್ಟಿನಲ್ಲಿ ಜಯ ಸಿಕ್ಕಿದೆ. ಕ್ಲಾಸ್ ರೂಮ್ ವರೆಗೆ ಹಿಜಾಬ್ ಧರಿಸಿ ಬಂದು ನಂತರ ಹಿಜಾದ್ ತೆಗೆದಿಟ್ಟು ಪಾಠ ಕೇಳುತ್ತಿದ್ದರು ಎಂದು ಹೇಳಿದರು.
ಸಿಎಫ್ಐ ಯವರು ಬಂದು ಹಿಜಾಬ್ ವಿವಾದ ಪ್ರಾರಂಭಿಸಿದರು. ಇವರಿಂದ ಹಿಜಾಬ್ ಧರಿಸಿ ಹೋಗುತ್ತಿದ್ದ ಕಾಲೇಜುಗಳಲ್ಲೂ ಸಮಸ್ಯೆ ಉಂಟಾಯ್ತು. ಆ ಕಾಲೇಜುಗಳಲ್ಲೂ ಈಗ ಹಿಜಾಬ್ ಧರಿಸಲು ಅವಕಾಶವಿಲ್ಲದಂತಾಗಿದೆ. ಹಿಜಾಬ್ ಕಾರಣಕ್ಕೆ ಯಾರಾದರೂ ಶಿಕ್ಷಣ ವಂಚಿತರಾಗಿದ್ದರೆ, ನೇರವಾಗಿ ಸಿ ಎಫ್ಐ ಕಾರಣ ಎಂದು ಆರೋಪಿಸಿದರು.
ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇವತ್ತಿಗೂ ಮುಸ್ಲಿಂ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಅಡ್ಮಿಷನ್ ಪಡೆದಿದ್ದಾರೆ. ಪ್ರತಿಭಾನ್ವಿತ ಮುಸ್ಲಿಂ ಹೆಣ್ಣುಮಕ್ಕಳಿಗೆ ಸನ್ಮಾನ ಮಾಡಿದ್ದೇವೆ. ಇದು ಕೇವಲ ಸಿಎಫ್ಐ ಮಾಡಿರುವ ಸೃಷ್ಟಿ. ವಿದ್ಯಾಭ್ಯಾಸ ಬೇಕು ಎನ್ನುವ ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ. ಧರ್ಮದ ಅಂದತೆ ಸೃಷ್ಠಿಸುವವರು ಸೃಷ್ಠಿಸುತ್ತಿದ್ದಾರೆ ಎಂದು ತಿಳಿಸಿದರು.
ಉಡುಪಿ ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪುತ್ತಳಿ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು ಪುತ್ತಳಿ ನಿರ್ಮಾಣಕ್ಕೆ ಒತ್ತಡ ಹೆಚ್ಚಿದೆ. ಹಿಂದೂ ಮುಖಂಡ ಯಶಪಾಲ್ ಸುವರ್ಣ ಪುತ್ತಳಿ ಸ್ಥಾಪಿಸುವುದಾಗಿ ಹೇಳಿದ್ದರು. ಪುತ್ತಳಿ ಸ್ಥಾಪಿಸುವಂತೆ ಉಡುಪಿ ನಗರಸಭೆಗೆ ಮನವಿ ಮಾಡಿದ್ದರು. ಬ್ಯಾನರ್ ಅಳವಡಿಸಿದ ಸ್ಥಳದಲ್ಲಿ ಪುತ್ತಳಿ ನಿರ್ಮಿಸುವುದಾಗಿ ಘೋಷಿಸಿದ್ದರು. ಹಿಂದೂ ಮಹಾಸಭಾ , ಹಿಂದೂ ಜಾಗರಣ ವೇದಿಕೆ ಕೂಡ ನಗರಸಭೆಗೆ ಮನವಿ ಮಾಡಿತ್ತು. ಹೀಗಾಗಿ ಉಡುಪಿ ನಗರಸಭೆ ಮೇಲೆ ಒತ್ತಡ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಆಡಳಿತವಿರುವ ಉಡುಪಿ ನಗರಸಭೆ ಕೌನ್ಸಿಲ್ ಮೀಟಿಂಗ್ನಲ್ಲಿ ಪುತ್ತಳಿ ನಿರ್ಮಾಣದ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ. ಮುಂದಿನ ದಿನಗಳಲ್ಲಿ ಸಾವರ್ಕರ್ ಪ್ರತಿಮೆಗೆ ಅವಮಾನವಾದರೆ ಕಷ್ಟ ಎಂದು ಮಾತನಾಡಿದರು.
ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರ ಸಭೆಗೆ ಪತ್ರ ಬರೆದಿದ್ದೇನೆ. ಜನನಿಬಿಡ ಪ್ರದೇಶವಾದ ಹಳೆ ತಾಲ್ಲೂಕು ಆಫೀಸ್ ಬಳಿಯ ಸರ್ಕಲ್ಗೆ ಸಾವರ್ಕರ್ ಹೆಸರು ಇಡಲು ಸೂಚಿಸಿದ್ದೇನೆ. ಈ ಬಗ್ಗೆ ನಗರ ಸಭೆಯ ಅಧಿವೇಶನದಲ್ಲಿ ಠರಾವು ಇಡುತ್ತೇನೆ. ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತೆ. ವೀರ ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Tue, 23 August 22