ಮೂಕಾಂಬಿಕಾ ಕಾರಿಡಾರ್ ಕನಸಿನ ನಡುವೆ ಕೊಳಚೆಯಾಗುತ್ತಿರುವ ಕೊಲ್ಲೂರಿನ ಪವಿತ್ರ ನದಿಗಳು! ಮಾಲಿನ್ಯ ಮುಕ್ತಿಗೆ ಕ್ರಮಕ್ಕೆ ಆಗ್ರಹ

ಕೊಲ್ಲೂರಿನಲ್ಲಿ ಮೂಕಾಂಬಿಕಾ ಕಾರಿಡಾರ್ ಯೋಜನೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಗ್ನಿತೀರ್ಥ ಮತ್ತು ಸೌಪರ್ಣಿಕಾ ನದಿಗಳ ಮಾಲಿನ್ಯ ಹಾಗೂ ಒತ್ತುವರಿ ಆರೋಪಗಳು ಆತಂಕ ಮೂಡಿಸಿವೆ. ಕೊಳಚೆ ನೀರಿನ ಹರಿವಿಗೆ ತಡೆ, ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಮತ್ತು ಕೊಡಚಾದ್ರಿ ರೋಪ್‌ವೇ ಯೋಜನೆಯ ಪರಿಸರ ಪರಿಣಾಮಗಳ ಪರಿಶೀಲನೆಗೆ ಒತ್ತಾಯ ಕೇಳಿಬಂದಿದೆ.

ಮೂಕಾಂಬಿಕಾ ಕಾರಿಡಾರ್ ಕನಸಿನ ನಡುವೆ ಕೊಳಚೆಯಾಗುತ್ತಿರುವ ಕೊಲ್ಲೂರಿನ ಪವಿತ್ರ ನದಿಗಳು! ಮಾಲಿನ್ಯ ಮುಕ್ತಿಗೆ ಕ್ರಮಕ್ಕೆ ಆಗ್ರಹ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ
Edited By:

Updated on: Oct 19, 2026 | 1:12 PM

ಮುಖ್ಯಾಂಶಗಳು

  • ಮೂಕಾಂಬಿಕಾ ಕಾರಿಡಾರ್ ನಡುವೆ ನದಿಗಳ ದುಃಸ್ಥಿತಿ
  • ಅಗ್ನಿತೀರ್ಥ ನದಿಯಲ್ಲಿ ಆರು ಎಕರೆ ಒತ್ತುವರಿ ಆರೋಪ
  • ಕೊಲ್ಲೂರು ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಗೆ ಆಗ್ರಹ

ಉಡುಪಿ, ಅಕ್ಟೋಬರ್ 19: ನಾಡಿನ ಪ್ರಸಿದ್ಧ ಶಕ್ತಿಪೀಠ, ಲಕ್ಷಾಂತರ ಭಕ್ತರ ಆರಾಧ್ಯ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ. ಪ್ರಕೃತಿಯ ಮಡಿಲಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ದೇವಿಯ ದರ್ಶನಕ್ಕಾಗಿ ನಾಡಿನ ಮೂಲೆಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ, ಕ್ಷೇತ್ರದ ಅಭಿವೃದ್ಧಿಗಾಗಿ ‘ಮೂಕಾಂಬಿಕಾ ಕಾರಿಡಾರ್’ ಯೋಜನೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ದೇವಸ್ಥಾನದ ಮುಂಭಾಗದಲ್ಲಿರುವ ಅಗ್ನಿತೀರ್ಥ ಮತ್ತು ಕ್ಷೇತ್ರದ ಸೌಪರ್ಣಿಕ ನದಿಯ ಸ್ಥಿತಿಗತಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಪವಿತ್ರ ನದಿಗಳ ಮಾಲಿನ್ಯ, ಒತ್ತುವರಿ ಆರೋಪಗಳು ಹಾಗೂ ಒಳಚರಂಡಿ ವ್ಯವಸ್ಥೆಯ ಸಮಸ್ಯೆಗಳಿಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.

ಆರು ಎಕರೆ ನದಿ ಪ್ರದೇಶ ಒತ್ತುವರಿ ಆರೋಪ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರವು ಧಾರ್ಮಿಕವಾಗಿ ಮಹತ್ವ ಪಡೆದಿರುವ ಸ್ಥಳ. ಇಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿರುವಾಗ, ಕ್ಷೇತ್ರದ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಯ ಬಗ್ಗೆಯೂ ಗಮನ ಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

Loading...

ವಸತಿಗೃಹಗಳ ಕೊಳಚೆ ನೀರು ಅಗ್ನಿತೀರ್ಥ ನದಿಗೆ

ದೇವಸ್ಥಾನದ ಮುಂಭಾಗದಲ್ಲಿರುವ ಅಗ್ನಿತೀರ್ಥ ನದಿಯ ಸುಮಾರು ಆರು ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂಬ ಆರೋಪಗಳಿವೆ. ಅಲ್ಲದೆ, ನದಿ ನಿರಂತರವಾಗಿ ಮಲಿನಗೊಳ್ಳುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿವೆ. ಒಳಚರಂಡಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಹಾಗೂ ವಸತಿಗೃಹಗಳಿಂದ ಹೊರಬರುವ ಕೊಳಚೆ ನೀರು ನದಿಯನ್ನು ಸೇರುತ್ತಿದೆ ಎಂಬ ಆರೋಪವೂ ಇದೆ.

ಈ ಸಮಸ್ಯೆಗಳ ಕುರಿತು ಈ ಹಿಂದೆಯೂ ಹಲವು ಬಾರಿ ಹೋರಾಟಗಳು ನಡೆದಿವೆ ಎನ್ನಲಾಗಿದೆ. ಆದರೂ ನದಿಯ ಒತ್ತುವರಿ ತೆರವು, ಕೊಳಚೆ ನೀರಿನ ಹರಿವಿಗೆ ತಡೆ ಹಾಗೂ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾರ್ಯಗಳಿಗೆ ಇನ್ನೂ ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಪವಿತ್ರ ಸೌಪರ್ಣಿಕಾ ನದಿಯ ನೀರಿನ ಗುಣಮಟ್ಟದ ಬಗ್ಗೆ ಆತಂಕ

Kolluru River

ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಭಕ್ತರು ನದಿಯತ್ತ ಹೆಜ್ಜೆ ಹಾಕುತ್ತಾರೆ. ಇಂತಹ ಪವಿತ್ರ ನದಿಗೆ ಕೊಳಚೆ ನೀರು ಸೇರುತ್ತಿದೆ ಎಂಬ ಆರೋಪವು ಧಾರ್ಮಿಕ ಭಾವನೆಗಳ ಜತೆಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಆತಂಕ ಮೂಡಿಸಿದೆ. ನದಿಗೆ ಎಷ್ಟು ಪ್ರಮಾಣದಲ್ಲಿ ಕೊಳಚೆ ನೀರು ಸೇರುತ್ತಿದೆ, ನೀರಿನ ಗುಣಮಟ್ಟ ಹೇಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ವೈಜ್ಞಾನಿಕವಾಗಿ ಪರಿಶೀಲಿಸಬೇಕಿದೆ. ಪರಿಶೀಲನೆಯ ವರದಿಯನ್ನು ಸಾರ್ವಜನಿಕರ ಮುಂದಿಡುವುದರ ಜತೆಗೆ, ಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ನದಿಯ ಪಾವಿತ್ರ್ಯವನ್ನು ಕೇವಲ ಮಾತಿನಲ್ಲಿ ಕೊಂಡಾಡುವುದಕ್ಕಿಂತ, ಅದರ ನೀರನ್ನು ಸ್ವಚ್ಛವಾಗಿಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಧಾರ್ಮಿಕ ಆಚರಣೆಗಳು ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಯೂ ಮುಖ್ಯ: ಸಾರ್ವಜನಿಕರ ಆಗ್ರಹ

ಮೂಕಾಂಬಿಕಾ ಕಾರಿಡಾರ್ ಯೋಜನೆಯ ಬಗ್ಗೆ ಭಕ್ತರು ಮತ್ತು ಸಾರ್ವಜನಿಕರಲ್ಲಿ ಅಭಿವೃದ್ಧಿಯ ನಿರೀಕ್ಷೆಗಳಿವೆ. ಸುಧಾರಿತ ರಸ್ತೆ, ಸುಗಮ ಸಂಚಾರ, ಉತ್ತಮ ಮೂಲಸೌಕರ್ಯ ಹಾಗೂ ವ್ಯವಸ್ಥಿತ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ನೆರವಾಗಬಹುದು. ಆದರೆ, ಅಭಿವೃದ್ಧಿ ಎಂದರೆ ಕೇವಲ ಭವ್ಯ ನಿರ್ಮಾಣಗಳಲ್ಲ; ಈಗಿರುವ ನೈಸರ್ಗಿಕ ಸಂಪತ್ತು ಮತ್ತು ಪವಿತ್ರ ಪರಿಸರವನ್ನು ಉಳಿಸುವುದೂ ಅದರ ಅವಿಭಾಜ್ಯ ಭಾಗವಾಗಿದೆ ಎಂಬ ಮಾತು ಸಾರ್ಚಜನಿಕರಿಂದ ಕೇಳಿಬರುತ್ತಿದೆ.

ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿರಬೇಕು, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರಬೇಕು ಮತ್ತು ನದಿಗಳು ಮಾಲಿನ್ಯಮುಕ್ತವಾಗಿರಬೇಕು. ಕಾರಿಡಾರ್ ನಿರ್ಮಾಣದ ಕನಸು ಸಾಕಾರಗೊಳ್ಳುವ ಜತೆಗೆ, ಕೊಲ್ಲೂರಿನ ನದಿಗಳನ್ನು ಸ್ವಚ್ಛವಾಗಿಡುವ ಕಾರ್ಯಕ್ಕೂ ಆದ್ಯತೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಕೊಡಚಾದ್ರಿ ರೋಪ್‌ವೇ ಯೋಜನೆಯ ಪರಿಸರ ಪರಿಣಾಮಗಳ ಬಗ್ಗೆಯೂ ಚರ್ಚೆ

ಕೊಲ್ಲೂರಿನ ಜತೆಗೆ ಪ್ರಕೃತಿ ಸೌಂದರ್ಯ, ಜೀವವೈವಿಧ್ಯ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಕೊಡಚಾದ್ರಿಯಲ್ಲೂ ರೋಪ್‌ವೇ ಯೋಜನೆಯ ಚರ್ಚೆ ನಡೆಯುತ್ತಿದೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು ಅಭಿವೃದ್ಧಿಯ ಒಂದು ಭಾಗವಾಗಿದ್ದರೂ, ಯೋಜನೆಯ ಪರಿಸರ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅರಣ್ಯ ಪರಿಸರ, ಜೀವವೈವಿಧ್ಯ, ನೈಸರ್ಗಿಕ ಭೂದೃಶ್ಯ ಮತ್ತು ಪ್ರದೇಶದ ಆಧ್ಯಾತ್ಮಿಕ ಮಹತ್ವಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸುವುದು ಮುಖ್ಯವಾಗಿದೆ. ಕೊಲ್ಲೂರು ಮತ್ತು ಕೊಡಚಾದ್ರಿಯ ಅಭಿವೃದ್ಧಿ ಯೋಜನೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಶಾಶ್ವತ ಪರಿಹಾರಕ್ಕೆ ಕಾಲಮಿತಿಯ ಕಾರ್ಯಯೋಜನೆ ಅಗತ್ಯ

ಅಗ್ನಿತೀರ್ಥ ನದಿಯ ಒತ್ತುವರಿ ಆರೋಪಗಳ ಬಗ್ಗೆ ಸತ್ಯಾಂಶ ಹೊರಬರಬೇಕು, ಕೊಳಚೆ ನೀರಿನ ಹರಿವಿಗೆ ತಡೆ ಬೀಳಬೇಕು ಮತ್ತು ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ಸ್ಥಳೀಯರು ಹಾಗೂ ಭಕ್ತರ ಪ್ರಮುಖ ಬೇಡಿಕೆಯಾಗಿದೆ. ಈ ಸಮಸ್ಯೆಗಳಿಗೆ ಕೇವಲ ಭರವಸೆ ಅಥವಾ ತಾತ್ಕಾಲಿಕ ಕ್ರಮಗಳು ಸಾಕಾಗುವುದಿಲ್ಲ. ನಿಗದಿತ ಕಾಲಮಿತಿಯ ಕಾರ್ಯಯೋಜನೆ, ನಿಯಮಿತ ಪರಿಶೀಲನೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಪಾರದರ್ಶಕ ವ್ಯವಸ್ಥೆ ಅಗತ್ಯವಾಗಿದೆ.

Kolluru River Pollution

ಕೊಲ್ಲೂರಿನ ವೈಭವ ದೇವಸ್ಥಾನದ ಗೋಪುರ ಅಥವಾ ಭವ್ಯ ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಭಕ್ತರ ನಂಬಿಕೆ, ನದಿಗಳ ಪಾವಿತ್ರ್ಯ, ಕೊಡಚಾದ್ರಿಯ ಪ್ರಕೃತಿ ಸೌಂದರ್ಯ ಮತ್ತು ತಲೆಮಾರುಗಳಿಂದ ಉಳಿದು ಬಂದಿರುವ ಆಧ್ಯಾತ್ಮಿಕ ಪರಂಪರೆಯಲ್ಲೂ ಅಡಗಿದೆ.

ಇದನ್ನೂ ಓದಿ: ಹೊಳೆ ಹರಿವ ದಿಕ್ಕನ್ನೇ ಬದಲಾಯಿಸಿದ ಹೂಳು: ಪಿನಾಕಿನಿ ತೀರದ ನಿವಾಸಿಗಳಿಗೆ ತಪ್ಪದ ಗೋಳು!

ಹೀಗಾಗಿ, ಮೂಕಾಂಬಿಕಾ ಕಾರಿಡಾರ್ ನಿರ್ಮಾಣದ ಕನಸು ನನಸಾಗುವ ಜತೆಗೆ ಅಗ್ನಿತೀರ್ಥ ಮತ್ತು ಸೌಪರ್ಣಿಕ ನದಿಗಳ ಸಂರಕ್ಷಣೆಯೂ ಆದ್ಯತೆಯಾಗಬೇಕು. ಅಭಿವೃದ್ಧಿಯ ಹೆಜ್ಜೆಗಳು ಮುಂದುವರಿಯುವಾಗ ಪವಿತ್ರ ನದಿಗಳು ಕೊಳಚೆ ನೀರಿನಿಂದ ಮಲಿನಗೊಳ್ಳದಂತೆ ನೋಡಿಕೊಳ್ಳುವುದು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ಹೊಣೆಗಾರಿಕೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Mon, 19 October 26

ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us