ಕಡಲ ತೀರದಲ್ಲಿ ಅರಳಿದೆ ಪುನೀತ್ ರಾಜ್ಕುಮಾರ್ ಕಲಾಕೃತಿ; ಕಲಾವಿದನ ಅಭಿಮಾನಕ್ಕೆ ಮನಸೋತ ಪ್ರವಾಸಿಗರು
Puneeth Rajkumar: ಕನ್ನಡ ನಾಡು ಎಂದಿಗೂ ಮರೆಯದ ಪುನೀತ್ ರಾಜ್ಕುಮಾರ್ ಅವರ ಸುಂದರ ನಗುವನ್ನು ರೂಬಿಕ್ಸ್ ಕ್ಯೂಬ್ಗಳ ಜೋಡಣೆಯ ಮೂಲಕ ತೋರಿಸಿದರು. ನಾಲ್ಕು ದಿನಗಳ ಕಾಲ ಶ್ರಮಪಟ್ಟು ಈ ಕಲಾಕೃತಿಯ ರಚನೆಗೆ ಮಹೇಶ್ ತಯಾರಿ ನಡೆಸಿದ್ದರು. ನಿನ್ನೆ ಮಲ್ಪೆ ಬೀಚ್ಗೆ ಬಂದಿದ್ದ ಪ್ರವಾಸಿಗರು ನೋಡನೋಡುತ್ತಿದ್ದಂತೆ, ಕೇವಲ ಹತ್ತೇ ನಿಮಿಷದಲ್ಲಿ ಅಪ್ಪುವಿನ ನಗುವಿನ ಮುಖ ಮೂಡಿಬಂತು.
ಉಡುಪಿ: ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವುದು ಇನ್ನೂ ಕೂಡ ಅಭಿಮಾನಿ ಬಳಗಕ್ಕೆ ಮರೆಯಲಾಗದ ನೋವಾಗಿದೆ. ಹೀಗಾಗಿ ಒಂದಿಲ್ಲ ಒಂದು ರೀತಿಯಲ್ಲಿ ಪುನೀತ್ ಅವರನ್ನು ನೆನಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಅಪ್ಪುಗೆ ಪ್ರವಾಸಕ್ಕೆ ಹೋಗುವುದು ತುಂಬಾ ಇಷ್ಟ. ಹೀಗಾಗಿ ಉಡುಪಿ ಜಿಲ್ಲೆಯ ಮಲ್ಪೆ ಬೀಚ್ನಲ್ಲಿ ಎಲ್ಲರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರನ್ನು ವಿಭಿನ್ನ ಕಲಾಕೃತಿಯೊಂದರ ಮೂಲಕ ಸ್ಮರಿಸಲಾಯಿತು. ಕಲಾವಿದ ರಚಿಸಿದ ಅಪೂರ್ವ ಚಿತ್ರವನ್ನು ಕಂಡು ಜನ ವಿಸ್ಮಯ ಪಟ್ಟರು.
ರೂಬಿಕ್ಸ್ ಕ್ಯೂಬ್ ಯಾರಿಗೆ ಗೊತ್ತಿಲ್ಲ ಹೇಳಿ. ಏಕಾಗ್ರತೆ ಮತ್ತು ಚುರುಕುತನ ಸಮ್ಮಿಲನಗೊಂಡ ಆಟ. ಮಕ್ಕಳಿಗಂತೂ ಈ ಆಟ ತುಂಬಾ ಇಷ್ಟ . ವಿಭಿನ್ನ ಬಣ್ಣದ ಕ್ಯೂಬ್ಗಳನ್ನು ಜೋಡಿಸಿ, ಕಲಾಕೃತಿಯನ್ನು ರಚಿಸುವುದರಲ್ಲಿ ಉಡುಪಿಯ ಮಹೇಶ್ ಎತ್ತಿದ ಕೈ. ನಿನ್ನೆ (ನ.9) ಮುಂಜಾನೆ ಮಲ್ಪೆ ಬೀಚಿನಲ್ಲಿ ಅಪ್ಪುವಿನ ಅದ್ಭುತ ಕಲಾಕೃತಿಯನ್ನು ಮಹೇಶ್ ರಚಿಸಿದರು.
ಕನ್ನಡ ನಾಡು ಎಂದಿಗೂ ಮರೆಯದ ಪುನೀತ್ ರಾಜ್ಕುಮಾರ್ ಅವರ ಸುಂದರ ನಗುವನ್ನು ರೂಬಿಕ್ಸ್ ಕ್ಯೂಬ್ಗಳ ಜೋಡಣೆಯ ಮೂಲಕ ತೋರಿಸಿದರು. ನಾಲ್ಕು ದಿನಗಳ ಕಾಲ ಶ್ರಮಪಟ್ಟು ಈ ಕಲಾಕೃತಿಯ ರಚನೆಗೆ ಮಹೇಶ್ ತಯಾರಿ ನಡೆಸಿದ್ದರು. ನಿನ್ನೆ ಮಲ್ಪೆ ಬೀಚ್ಗೆ ಬಂದಿದ್ದ ಪ್ರವಾಸಿಗರು ನೋಡನೋಡುತ್ತಿದ್ದಂತೆ, ಕೇವಲ ಹತ್ತೇ ನಿಮಿಷದಲ್ಲಿ ಅಪ್ಪುವಿನ ನಗುವಿನ ಮುಖ ಮೂಡಿಬಂತು. ದೇಶದಲ್ಲಿ ಕೇವಲ ಬೆರಳೆಣಿಕೆಯ ಕಲಾವಿದರು ರೂಬಿಕ್ಸ್ ಕ್ಯೂಬ್ಗಳ ಮೂಲಕ ಚಿತ್ರ ರಚಿಸುವ ಪ್ರತಿಭೆ ಹೊಂದಿದ್ದಾರೆ.
ಇಷ್ಟಕ್ಕೂ ಮಹೇಶ್ ಮಲ್ಪೆ ಬೀಚ್ನಲ್ಲಿ ಕಲಾಕೃತಿ ರಚಿಸುವುದಕ್ಕೆ ಕಾರಣವಿದೆ. ಹೇಳಿಕೇಳಿ ಈ ಕಲಾವಿದನಿಗೆ ಅಪ್ಪು ಅಂದರೆ ತುಂಬಾನೇ ಇಷ್ಟ. ಅಪ್ಪು ಇಲ್ಲ ಎನ್ನುವುದು ಒಪ್ಪಿಕೊಳ್ಳೋಕೆ ಮಹೇಶ್ ಮನಸ್ಸು ತಯಾರಿಲ್ಲ. ಹಾಗಾಗಿ ತನ್ನ ಕಲಾಕೃತಿಯ ಮೂಲಕ ಅಪ್ಪುವನ್ನು ಜೀವಂತಗೊಳಿಸುವುದಕ್ಕೆ ಅವರು ಇಲ್ಲಿ ಪ್ರಯತ್ನಿಸಿದ್ದಾರೆ. ಮಲ್ಪೆ ಬೀಚ್ ಅಂದರೆ ಪುನೀತ್ ರಾಜ್ಕುಮಾರ್ಗೂ ಅಚ್ಚುಮೆಚ್ಚು. ಯುವರತ್ನ ಸಿನಿಮಾ ಶೂಟಿಂಗ್ಗೆ ಬಂದಿದ್ದಾಗ, ಇದೇ ಬೀಚ್ನಲ್ಲಿ ಪ್ರತಿದಿನ ಬೆಳಿಗ್ಗೆ ಅಪ್ಪು ವಾಕಿಂಗ್ ಮಾಡುತ್ತಿದ್ದರು. ಇನ್ನು ತನ್ನ ಬಾಲ್ಯದ ನೆನಪುಗಳನ್ನು ಆ ಸಂದರ್ಭದಲ್ಲಿ ಅಪ್ಪು ಮೆಲುಕು ಹಾಕಿದ್ದರು.
ಡಾಕ್ಟರ್ ರಾಜ್ಕುಮಾರ್ ಒಂದು ಮುತ್ತಿನ ಕಥೆ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದಾಗ, ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್ನಲ್ಲಿ ಒಂದು ತಿಂಗಳ ಕಾಲ ಶೂಟಿಂಗ್ ನಡೆದಿತ್ತು. ಹೀಗಾಗಿ ಅಷ್ಟೂ ದಿನಗಳ ಕಾಲ ಅಪ್ಪು ತಂದೆ ಜೊತೆ ಮಲ್ಪೆಯಲ್ಲಿ ಖುಷಿ ಪಟ್ಟಿದ್ದರು. ಈ ಹಿಂದೆ ಉಡುಪಿಗೆ ಬಂದಾಗ ತಂದೆ ಜತೆಗಿನ ಎಲ್ಲ ಕಥೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಅಪ್ಪು ಓಡಾಡಿದ ಮರಳು ರಾಶಿಯಲ್ಲಿ, ಅವರದೊಂದು ಮುಗ್ಧ ನಗುವಿನ ಕಲಾಕೃತಿ ಮೂಡಿಸಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡನಾಡಿನ ಗಂಧದಗುಡಿಯ ಪ್ರವಾಸಿ ತಾಣಗಳನ್ನು ಜಗತ್ತಿಗೆ ತೋರಿಸಬೇಕು ಎನ್ನುವುದು ಅಪ್ಪು ಆಸೆಯಾಗಿತ್ತು. ಅವರ ಅರ್ಧಕ್ಕೆ ಮೊಟಕುಗೊಂಡ ಆಸೆಯನ್ನು, ಇದೀಗ ಅಭಿಮಾನಿಗಳು ಇಂತಹ ಪ್ರಯತ್ನಗಳ ಮೂಲಕ ಪೂರೈಸುತ್ತಿದ್ದಾರೆ ಎನ್ನುವುದು ಮಾತ್ರ ನಿಜ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ:
Puneeth Rajkumar: ಪುನೀತ್ಗೆ ಪದ್ಮ ಪ್ರಶಸ್ತಿ ನೀಡಲು ಅಭಿಮಾನಿಗಳ ಒತ್ತಾಯ; ಅಗತ್ಯ ಕ್ರಮಕ್ಕೆ ಮುಂದಾದ ಸರ್ಕಾರ
ರಾಜ್ಯದ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ